ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಹಕಾರ ಸಂಘಗಳಲ್ಲಿ ಆಡಳಿತ ಮಂಡಳಿ ಚುನಾವಣೆಗೆ ಮತದಾರರ ಪಟ್ಟಿ ತಯಾರು ಮಾಡುವುದೇ ದೊಡ್ಡ ಸವಾಲಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕ ಎಚ್.ಆರ್.ನಾಗಭೂಷಣ್ ಹೇಳಿದರು.ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ನಡೆದ ಪಾಂಡವಪುರ ಉಪವಿಭಾಗದ ಎಲ್ಲಾ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಸದಸ್ಯರುಗಳಿಗೆ, ಹಾಗೂ ಎಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ಇತರೆ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್‍ಯನಿರ್ವಹಕ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಸಹಕಾರ ಸಂಘಗಳ ಕಾಯ್ದೆ, ಬೈಲಾಗಳು ಪದೇಪದೆ ತಿದ್ದುಪಡಿಯಾಗುತ್ತಿವೆ. ಹಾಗಾಗಿ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಕಾರ್‍ಯನಿರ್ವಾಹಣಾಧಿಕಾರಿಗಳು ಸಹಕಾರ ಇಲಾಖೆ ಕಾಯ್ದೆಗಳು, ಕಾನೂನು ಹಾಗೂ ಬೈಲಗಳ ಬಗ್ಗೆ ಅರಿವು ಮೂಡಿಸಿಕೊಂಡು ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಕಾಯ್ದೆ, ಕಾನೂನು, ಬೈಲಗಳು ಉಲ್ಲಂಘನೆ ಮಾಡಬಾರದು ಎಂದರು.
ಷೇರುದಾರ ಸದಸ್ಯರು ಸಂಘಗಳೊಂದಿಗೆ ವ್ಯವಹಾರಿಕ ಒಡನಾಟಗಳನ್ನು ಬೆಳೆಸಿಕೊಂಡು ಆ ಮೂಲಕ ಸಂಘಗಳ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂಬ ಉದ್ದೇಶದಿಂದ ಷೇರುದಾರ ಸದಸ್ಯರು ಐದು ವರ್ಷದಲ್ಲಿ ಕಡ್ಡಾಯವಾಗಿ ಮೂರು ವಾರ್ಷಿಕ ಮಹಾಸಭೆ ಹಾಜರಾಗಬೇಕು, ಜತೆಗೆ ಸಂಘದಲ್ಲಿ ವ್ಯವಹಾರಿ ನಡೆಸಿದರೆ ಮಾತ್ರ ಮತದಾನದ ಹಕ್ಕು ನೀಡಲಾಗುವುದು ಎಂಬುದಾಗಿ ತಿದ್ದುಪಡಿ ತಂದಿತ್ತು ಎಂದರು.ಆದರೆ, ಈಗ ಮತ್ತೆ ಬೈಲಾಗೆ ತಿದ್ದುಪಡಿ ತಂದು ಮೂರು ವಾರ್ಷಿಕ ಮಹಾಸಭೆ ಬದಲಾಗಿ ಎರಡು ವಾರ್ಷಿಕ ಮಹಾಸಭೆಗೆ ಹಾಜರಾಗಬೇಕು ಎಂಬ ಕಾಯ್ದೆ ಜಾರಿಗೆ ತಂದಿದೆ. ಜತೆಗೆ ಕಾರ್‍ಯದರ್ಶಿಗಳು ಅನರ್ಹ ಮತದಾರರಿಗೆ 195 ದಿನ ಮೊದಲೇ ನೋಟಿಸ್ ಜಾರಿಗೊಳಿಸಬೇಕು. ನೋಟಿಸ್‌ಗಳು ರಿಜಿಸ್ಟರ್ ಪೋಸ್ಟ್ ಮೂಲಕವೇ ನೀಡಬೇಕು, ಜತೆಗೆ ಸಹಕಾರ ಇಲಾಖೆಗೆ ಚುನಾವಣೆ ನಡೆಸುವಂತೆ 120 ಮಾಹಿತಿ ನೀಡಬೇಕು ಎಂದರು.
ಯಾವುದೇ ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಗಳು ಈ ನಿಯಮ ಪಾಲನೆ ಮಾಡುತ್ತಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಮ್ಮ ಹತ್ತಿರ ಓಡಿರುತ್ತಾರೆ. ಹಾಗಾಗಿ ಕಾರ್‍ಯದರ್ಶಿಗಳು ನಿಯಮ ಪಾಲನೆ ಮಾಡಬೇಕು ಎಂದರು.ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ಕಾರ್‍ಯದರ್ಶಿಗಳು ಸಹಕಾರ ಒಕ್ಕೂಟಗಳಿಂದ ಸಹಕಾರ ಇಲಾಖೆ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲು ಇಂತಹ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಸಂಘದಲ್ಲಿ ಕ್ರಮಬದ್ಧವಾಗಿ ಕರ್ತವ್ಯ ನಿರ್ವಹಿಸುವ ಜತೆಗೆ, ಕಾಯ್ದೆ, ಕಾನೂನುಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುತ್ತದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರು ಹೆಚ್ಚಿನ ಸಹಕಾರ, ನೆರವು ಪಡೆದುಕೊಳ್ಳುವುದು ಕಷ್ಟವಿದೆ. ರೈತರಿಗೆ ಸಹಕಾರ, ಸೌಲಭ್ಯಗಳನ್ನು ನೀಡುತ್ತಿವೆ ಎಂದರೆ ಅದು ಸಹಕಾರ ಸಂಘಗಳು ಮಾತ್ರ. ಮಂಡ್ಯ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಹಾಗೂ ಮನ್ಮುಲ್ ಒಕ್ಕೂಟ ರೈತರ ಎರಡು ಕಣ್ಣುಗಳಂತೆ ಕೆಲಸ ನಿರ್ವಹಿಸುತ್ತಿವೆ. ರೈತರು ಸಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಇದೇವೇಳೆ ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಎಚ್.ಎಸ್.ನಾಗರಾಜಯ್ಯ ಅವರು ಸಹಕಾರ ಕಾಯ್ದೆ ಮುಖ್ಯಾಂಶಗಳು ಹಾಗೂ ಮುಖ್ಯಕಾರ್‍ಯನಿರ್ವಾಹಕರುಗಳ ಕರ್ತವ್ಯ ಮತ್ತು ಜವಬ್ದಾರಿ ಕುರಿತು ಉಪನ್ಯಾಸ ನೀಡಿದರು. ಕಾರ್‍ಯಕ್ರಮದಲ್ಲಿ ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ವಿ.ಎಸ್.ನಿಂಗೇಗೌಡ, ವೃತ್ತಿಪರ ನಿರ್ದೇಶಕ ಎಸ್.ನಾಗೇಂದ್ರ, ಕಸಾಪ ಉಪಾಧ್ಯಕ್ಷ ಚಂದ್ರಶೇಖರಯ್ಯ, ಹೌಸಿಂಗ್ ಬೋರ್ಡ್ ನಿರ್ದೇಶಕ ಭಾಸ್ಕರ, ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ.ಶಿವಕುಮಾರ್, ವ್ಯವಸ್ಥಾಪಕ ಎಂ.ಆರ್.ಪ್ರಮೋಧನ್ ಸೇರಿದಂತೆ ಹಲವರು ಇದ್ದರು.