ನಗರಸಭೆ ಮುಂಭಾಗ ಜಯಮರಿ ಅನಿರ್ದಿಷ್ಟಾವಧಿ ಧರಣಿ

| Published : Mar 20 2025, 01:20 AM IST

ಸಾರಾಂಶ

ಕೊಳ್ಳೇಗಾಲ ನಗರಸಭೆ ಮುಂಭಾಗ ಸರ್ಕಾರದ ಅಧಿಸೂಚನೆ ಉಲ್ಲಂಘಿಸಿ ನಗರಸಭೆ ಅನಧಿಕೃತ ಬಡಾವಣೆಗಳಿಗೆ ಆಸ್ತಿ ತೆರಿಗೆದಾರರಿಂದ ದುಪ್ಪಟ್ಟು ತೆರಿಗೆ ವಸೂಲಾತಿ ಮಾಡುತ್ತಿರುವುದನ್ನು ಖಂಡಿಸಿ ನಗರಸಭೆ ಮುಂಭಾಗ ಜಯಮರಿ ಇನ್ನಿತರರು ಮುಷ್ಕರ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ರಾಜ್ಯ ಸರ್ಕಾರದ ಅಧಿಸೂಚನೆ ಉಲ್ಲಂಘಿಸಿ ನಗರಸಭೆ ಅನಧಿಕೃತ ಬಡಾವಣೆಗಳಿಗೆ ಆಸ್ತಿ ತೆರಿಗೆದಾರರಿಂದ ದುಪ್ಪಟ್ಟು ತೆರಿಗೆ ವಸೂಲಾತಿ ಮಾಡುತ್ತಿರುವುದನ್ನು ವಿರೋಧಿಸಿ, ನಗರಸಭೆ ಅಧಿಕಾರಿಗಳ ವರ್ತನೆ ಖಂಡಿಸಿ ಸದಸ್ಯೆ ಜಯಮರಿ ಸಾರ್ವಜನಿಕರ ಸಹಕಾರದೊಂದಿಗೆ ನಗರಸಭೆ ಕಚೇರಿ ಮುಂಭಾಗ ಬುಧವಾರ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ.

ಈ ವೇಳೆ ನಗರಸಭೆ ಸದಸ್ಯೆ ಜಯಮರಿ ಮಾತನಾಡಿ, ರಾಜ್ಯ ಸರ್ಕಾರ ಬಿ-ಖಾತೆ ವಿತರಣೆ ವಿಚಾರವಾಗಿ ಸುತ್ತೋಲೆ ಹೊರಡಿಸಿದೆ. 2023-24 ನೇ ಸಾಲಿನ ಹಿಂದಿನ 6 ವರ್ಷಕ್ಕೆ ಕಂದಾಯ ವಸೂಲಿ ಮಾಡಬೇಕು. 1 ವರ್ಷಕ್ಕೆ ಡಬಲ್ ಟ್ಯಾಕ್ಸ್ ಕಟ್ಟಿಸಿಕೊಳ್ಳುವಂತೆ ತಿಳಿಸಿದೆ. ಆದರೆ, ನಗರಸಭೆ ಅಧಿಕಾರಿಗಳು ಇ-ಸ್ವತ್ತು ಆದ ವರ್ಷದಿಂದಲೂ ಡಬಲ್ ಟ್ಯಾಕ್ಸ್ ಕಟ್ಟಬೇಕು ಎಂದು ಹೇಳುತ್ತಾರೆ. ಈ ಅಧಿಕಾರವನ್ನು ನಗರಸಭೆಗೆ ಯಾರು ನೀಡಿದವರು. ಸರ್ಕಾರಕ್ಕಿಂತಲೂ ನಗರಸಭೆ ದೊಡ್ಡದೇ, ಸರ್ಕಾರದ ಸುತ್ತೋಲೆಯಂತೆ ನಗರಸಭೆ ಕಂದಾಯ ವಸೂಲಾತಿ ಮಾಡಲಿ ಎಂದು ಆಗ್ರಹಿಸಿದರು.

ಈಗಾಗಲೇ ನೂರಾರು ಬಿ-ಖಾತೆ ಅರ್ಜಿಗಳು ಬಂದಿದೆ. ಕೆಲವರಿಗೆ ಮಾತ್ರ ಇ-ಸ್ವತ್ತು ನೀಡಲಾಗಿದ್ದು ರಾತ್ರಿ ವೇಳೆ ಇ-ಸ್ವತ್ತು ಪ್ರಿಂಟ್ ತೆಗೆಯಲಾಗುತ್ತಿದೆ. ಕೆಲಸದ ಅವಧಿಯಲ್ಲಿ ಜನ ಸಾಮಾನ್ಯರನ್ನು ಅಲೆಸಲಾಗುತ್ತದೆ ಎಂದು ಆರೋಪಿಸಿದರು. ಈ ಸಂಬಂಧ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದರು.

ಈ ವೇಳೆ ರೈತ ಮುಖಂಡ ಅಣಗಳ್ಳಿ ದಶರಥ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿರುವ ಅಧಿಕೃತ, ಅನಧಿಕೃತ ಬಡಾವಣೆ ಯಾವುದು ಎಂಬುದರ ಕುರಿತು ನಕ್ಷೆ ಗುರುತಿಸಿಲ್ಲ ಬಿ-ಖಾತೆ ವಿತರಣೆಗೆ ಸರ್ಕಾರ ನಿಗದಿಪಡಿಸಿರುವ ಕಂದಾಯ ವಸೂಲಾತಿ ನಿಯಮ ಉಲಂಘನೆ ಆಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಭಾರತೀಯ ಮಾನವ ಹಕ್ಕುಗಳ ಜಾಗೃತಿ ಸೇನೆಯ ರಾಜ್ಯ ಜಂಟಿ ಕಾರ್ಯದರ್ಶಿ ಮಹೇಶ್, ಛಲವಾಧಿ ಮಹಾಸಭೆ ಚಾಮರಾಜು, ಡಿಎಸ್ಎಸ್ ಲಿಂಗರಾಜು, ಪುಟ್ಟಸ್ವಾಮಿ, ನಾಗರಾಜು, ಸುಮನ್, ಕೆ.ಆರ್.ಎಸ್ ಪಕ್ಷದ ಮಹೇಶ್ ಕಂದಹಳ್ಳಿ, ಜಿಲ್ಲಾಧ್ಯಕ್ಷ ಗಿರೀಶ್, ಕುಮಾರ್, ಶಿವಪ್ರಕಾಶ್, ಯಳಂದೂರು ತಾಲೂಕು ಅಧ್ಯಕ್ಷ ರಂಗರಾಜು ಇನ್ನಿತರಿದ್ದರು.