ಬಾಲಕಿಯರ ಹಾಸ್ಟೆಲ್‌ನಲ್ಲಿ ಗುಣಮಟ್ಟದ ಆಹಾರ ನೀಡಲು ಆಗ್ರಹಿಸಿ ಪ್ರತಿಭಟನೆ

| Published : Mar 20 2025, 01:20 AM IST

ಬಾಲಕಿಯರ ಹಾಸ್ಟೆಲ್‌ನಲ್ಲಿ ಗುಣಮಟ್ಟದ ಆಹಾರ ನೀಡಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಸರ್ಕಾರ ನೀಡುವ ಮೂಲ ಸೌಲಭ್ಯಗಳು ಹಾಗೂ ಮೇನು ಚಾರ್ಟ್ ಪ್ರಕಾರವಾಗಿ ಊಟ, ಉಪಚಾರ ಸಿಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಣಿಬೆನ್ನೂರು: ನಗರದ ಕಮಲಾ ನಗರದ ಬಿಸಿಎಂ ಇಲಾಖೆಯ ಬಾಲಕಿಯರ ವಸತಿನಿಲಯದಲ್ಲಿ ಊಟದ ವ್ಯವಸ್ಥೆ ಸರಿಪಡಿಸಿ, ಗುಣಮಟ್ಟದ ಆಹಾರ ನೀಡಬೇಕು ಹಾಗೂ ಸರ್ಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿನಿಯರನ್ನು ವಂಚಿಸುತ್ತಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ) ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟಿಸಿ ತಾಲೂಕು ವಿಸ್ತಾರಣಾಧಿಕಾರಿ ಪ್ರಸಾದ್ ಆಲದಕಟ್ಟಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ವಸತಿನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಸರ್ಕಾರ ನೀಡುವ ಮೂಲ ಸೌಲಭ್ಯಗಳು ಹಾಗೂ ಮೇನು ಚಾರ್ಟ್ ಪ್ರಕಾರವಾಗಿ ಊಟ, ಉಪಚಾರ ಸಿಗುತ್ತಿಲ್ಲ. ತರಕಾರಿ ಸಾಂಬಾರ, ಪಲ್ಯೆಗಳಲ್ಲಿ ತರಕಾರಿ ಹಾಕುವುದಿಲ್ಲ, ಬರಿ ಬೇಳೆ ಸಾರು ಮಾಡುತ್ತಾರೆ. ಮಂಡಕ್ಕಿ ಸೇರಿದಂತೆ ವಿವಿಧ ತಿಂಡಿ ತಿನಿಸುಗಳಲ್ಲಿ ಅಡುಗೆ ಎಣ್ಣೆ ಬಳಸುವುದಿಲ್ಲ. ಒಟ್ಟಾರೆ ರುಚಿಕರ ಆಹಾರ ನೀಡುವುದಿಲ್ಲ. ಪ್ರತಿ ಬುಧವಾರ ನೀಡಬೇಕಾದ ಚಿಕನ್ ಕೂಡ ಕತ್ತರಿ ಹಾಕಿ ಕೇವಲ ತಿಂಗಳಿಗೆ ಎರಡು ಬಾರಿ ನೀಡುತ್ತಿದ್ದಾರೆ. 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೇವಲ ನಾಲ್ಕು ಕೆಜಿ ಚಿಕನ್ ನೀಡುತ್ತಾರೆ. ಮೊಟ್ಟೆ, ಬಾಳೆಹಣ್ಣಗಳನ್ನು ಸರಿಯಾಗಿ ನೀಡುವುದಿಲ್ಲ.

ಒಟ್ಟಾರೆ ಹಾಜರಾತಿ ತಕ್ಕಂತೆ ಆಹಾರ ನೀಡುವುದಿಲ್ಲ. ನೂರಾರು ವಿದ್ಯಾರ್ಥಿಗಳಿಗೆ ತಕ್ಕಂತೆ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಮೂರು ರೂಮ್‌ಗಳಿಗೆ ಬೀಗ ಹಾಕಿದ್ದಾರೆ. ಗ್ರಂಥಾಲಯಗಳಲ್ಲಿ ಬಿಇಎಡ್ ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ ವಿಷಯವಾರು ಪುಸ್ತಕಗಳು ದೊರೆಯುತ್ತಿಲ್ಲ. ಬೇಸಿಗೆ ಕಾಲ ವಿಪರೀತ ಬಿಸಿಲಿನ ತಾಪವಿರುವ ಸಂದರ್ಭದಲ್ಲೂ ರೂಮ್‌ಗಳಿಗೆ ಸರಿಯಾಗಿ ಫ್ಯಾನ್‌ಗಳನ್ನು ಆಳವಡಿಸಿಲ್ಲ. ಇಡೀ ವಸತಿ ನಿಲಯದ ಮೂಲ ಸೌಕರ್ಯಗಳಿಂದ ವಂಚನೆ ಮಾಡಲಾಗಿದೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ. ಆದ್ದರಿಂದ ಕೂಡಲೇ ಊಟದ ವ್ಯವಸ್ಥೆ ಸರಿಪಡಿಸಿ, ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಸರ್ಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿನಿಯರನ್ನು ವಂಚಿಸುತ್ತಿರುವ ವಿದ್ಯಾರ್ಥಿ ವಿರೋಧಿ ನೀತಿ ಸರಿಯಲ್ಲ. ಜಿಲ್ಲೆಯ ಎಲ್ಲ ವಸತಿನಿಲಯಗಳಲ್ಲಿ ಆಹಾರದ ಮೆನು ಚಾರ್ಟ್ ಬದಲಾಯಿಸಿ ದೊಡ್ಡ ಭ್ರಷ್ಟಾಚಾರ ನಡೆಸುತ್ತಿದ್ದಾರೆ.

ಪ್ರತಿ ವಸತಿ ನಿಲಯಗಳಲ್ಲೂ ಆಯುಕ್ತರ ಆದೇಶದ ಪ್ರಕಾರ ಊಟದ ಮೆನು ಅಳವಡಿಸಬೇಕು. ಉಲ್ಲಂಘನೆ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ದೂರು ನೀಡಲಾಗುವುದು ಎಂದು ಎಚ್ಚರಿಸಿದರು. ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಗೌತಮ್ ಸಾವಕ್ಕನವರ, ಉಪಾಧ್ಯಕ್ಷ ಬಸವರಾಜ ಕೊಣಸಾಲಿ, ಮಹೇಶ ಮರೋಳ, ಗುಡ್ಡಪ್ಪ ಮಡಿವಾಳರ, ನೀಲಮ್ಮ ಕಡಕೋಳ, ಸುಮತಿ ಕರೆಯಣ್ಣನವರ, ರಾಧಿಕಾ ಹೊನ್ನಪ್ಪನವರ, ನಾಗರತ್ನ ಸಿ.ಎಸ್., ಕಾವ್ಯ ರಾಠೋಡ್, ಭಾಗೀರಥ ಯಳಮೇಲೆ, ಪ್ರಿಯಾ ಎಚ್., ಮೇಘಾ ವೈ., ಭವ್ಯ, ಚೈತ್ರ ಬಿ.ಕೆ., ಸಂಗೀತಾ, ರಕ್ಷಿತಾ ಆರ್., ಸುಪ್ರಿತಾ ಎಸ್., ಮಾಲಾ ಎನ್.ಕೆ. ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.