ಹುಬ್ಬಳ್ಳಿ: ರಂಗಭೂಮಿ ಮತ್ತು ನಾಟಕ ಕಲೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ವಿಪ ಸದಸ್ಯ ಲಿಂಗರಾಜ ಪಾಟೀಲ ಹೇಳಿದರು.

ಅವರು ಇಲ್ಲಿನ ಗೋಕುಲ ರಸ್ತೆಯ ಶ್ರೇಯ ನಗರದ ಉದ್ಯಾನದಲ್ಲಿರುವ ಸಮುದಾಯ ಭವನದಲ್ಲಿ ಜೆ.ಕೆ. ಕಲಾವೇದಿಕೆ ಟ್ರಸ್ಟ್‌ ಹಾಗೂ ಶ್ರೇಯ ನಗರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದೊಡ್ಡಾಟ ಮುಖವರ್ಣಿಕೆ ಕಾರ್ಯಾಗಾರ ಮತ್ತು ನೂತನ ವೇಷಭೂಷಣಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ನಾಟಕದಲ್ಲಿ ಪಾತ್ರಧಾರಿಗಳನ್ನು ವೇದಿಕೆಯ ಮೇಲೆ ನೋಡಿದಾಗ ಅವರ ಅಭಿನಯ ಮಾತ್ರ ಕಾಣುತ್ತದೆ. ಆದರೆ, ಆ ಪಾತ್ರದ ಹಿಂದೆ ಇರುವ ಶ್ರಮ, ಮುಖವರ್ಣಿಕೆ ಕಲಾವಿದರ ಪರಿಶ್ರಮ ಮತ್ತು ಸೃಜನಶೀಲತೆ ಶ್ಲಾಘನೀಯ. ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ಬಣ್ಣ ಮತ್ತು ಪ್ರಸಾದನಕ್ಕೆ ವಿಶೇಷ ಮಹತ್ವವಿದ್ದು, ಅದು ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡುತ್ತದೆ. ಇಂತಹ ಕಲೆಗಳು ನಶಿಸುತ್ತಿರುವ ದಿನಮಾನಗಳಲ್ಲಿ ಹಲವು ವರ್ಷಗಳಿಂದ ಜೆ.ಕೆ. ಕಲಾವೇದಿಕೆ ಟ್ರಸ್ಟ್‌ ಉಳಿಸಿ ಬೆಳೆಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಾಗಾರ ಉದ್ಘಾಟಿಸಿದ ಶ್ರೇಯ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ ತೋಟದ ಮಾತನಾಡಿ, ಜನಪದ ಕಲೆಗಳ ಸಂರಕ್ಷಣೆ ಮತ್ತು ಬೆಳವಣಿಗೆಗೆ ಸಮಾಜದ ಎಲ್ಲರ ಸಹಕಾರ ಅತ್ಯಗತ್ಯ. ದೊಡ್ಡಾಟದಂತಹ ಸಾಂಪ್ರದಾಯಿಕ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಲಾವಿದರ ಶ್ರಮ ಶ್ಲಾಘನೀಯವಾಗಿದೆ. ಹಿರಿಯ ಕಲಾವಿದರು ತಮ್ಮ ಅನುಭವವನ್ನು ಯುವ ಪೀಳಿಗೆಗೆ ಹಂಚಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಗೊಟಗೋಡಿ ಜಾನಪದ ವಿವಿಯ ಡಾ. ಚಂದ್ರಪ್ಪ ಸೊಬಟಿ ಮಾತನಾಡಿ, ದೊಡ್ಡಾಟದ ವೇಷಭೂಷಣಗಳ ನಿರ್ಮಾಣ ಕೇವಲ ನಟರು ಧರಿಸುವ ಉಡುಪುಗಳ ತಯಾರಿಕೆಗೆ ಸೀಮಿತವಲ್ಲ. ಅದಕ್ಕೆ ಸಾಂಸ್ಕೃತಿಕ ಪ್ರಜ್ಞೆ, ಇತಿಹಾಸದ ಅರಿವು, ಕಲಾತ್ಮಕ ದೃಷ್ಟಿಕೋನ ಹಾಗೂ ತಾಂತ್ರಿಕ ಜ್ಞಾನ ಅಗತ್ಯವಾಗಿದೆ ಎಂದರು.


ವೇಷಭೂಷಣಕಾರನಿಗೆ ಕಥೆ, ಪಾತ್ರಗಳು, ನಿರ್ದೇಶನ, ರಂಗಸಜ್ಜಿಕೆ, ಬೆಳಕಿನ ವಿನ್ಯಾಸ ಸೇರಿದಂತೆ ನಾಟಕದ ವಿವಿಧ ಆಯಾಮಗಳ ಅರಿವು ಇರಬೇಕು. ಜತೆಗೆ ಉತ್ತಮ ಪ್ರೇಕ್ಷಕ ಹಾಗೂ ಕಲಾ ಆಸ್ವಾದಕನಾಗಿದ್ದಾಗ ಮಾತ್ರ ಪರಿಣಾಮಕಾರಿ ವೇಷಭೂಷಣಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಜಸ್ಥಾನ, ಕೇರಳ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಸೂಕ್ತ ಸಾಮಗ್ರಿಗಳನ್ನು ಸಂಗ್ರಹಿಸಿ, ಸ್ಥಳೀಯ ಸಂಪನ್ಮೂಲಗಳೊಂದಿಗೆ ಸಂಯೋಜಿಸಿ ಕಡಿಮೆ ಭಾರದ ವೇಷಭೂಷಣಗಳನ್ನು ಸಿದ್ಧಪಡಿಸಿರುವುದು ವಿಶೇಷ. ಇಂತಹ ಸಾಮಗ್ರಿಗಳು ಇಂದಿನ ದೊಡ್ಡಾಟ ಕಲೆಗೆ ಹೊಸ ಆಯಾಮ ನೀಡಲಿವೆ ಎಂದರು.

ನೂತನ ವೇಷಭೂಷಣ ಲೋಕಾರ್ಪಣೆಗೊಳಿಸಿದ ಚಿತ್ರಕಲಾವಿದ ರವಿ ಗುಡಿಸಾಗರ, ತರಬೇತಿ ನೀಡಲು ಆಗಮಿಸಿದ್ದ ಪ್ರಸಾದನ ಕಲಾವಿದ ದೀಪಕ್ ಭಟ್, ಸಂಯೋಜಕ ಬೀರೇಶ ತಳ್ಳಿಕೇರಿ ಮಾತನಾಡಿದರು.

ಶ್ರೇಯ ನಗರ ಕ್ಷೇಮಾಭಿವೃದ್ಧಿ ಸಂಘದ ಎಚ್‌.ಆರ್. ಪಾಟೀಲ, ಮಾರುತಿ ನಗರದ ಅಧ್ಯಕ್ಷ ಶಿವಾನಂದ ವಾಲಿಕಾರ, ವರದಿಗಾರ ಅಜೀಜಅಹ್ಮದ ಬಳಗಾನೂರ, ಶಶಿಕಲಾ ನಾಯ್ಡು ಇದ್ದರು. ಸಹ ಸಂಯೋಜಕ ಡಾ. ಹಜರೇಸಾಬ ನದಾಫ ಕಾರ್ಯಕ್ರಮ ನಿರೂಪಿಸಿದರು. ಸಹ ಸಂಯೋಜಕ ರಮೇಶ ಕರಬಸಮ್ಮನವರ ಸ್ವಾಗತಿಸಿದರು.