ಸಭೆಯಲ್ಲಿ ರಾಷ್ಟ್ರಪತಿಗಳು ಬರುವ ಮುನ್ನ ಕೈಗೊಳ್ಳಬೇಕಾದ ಕಾನೂನು ಕ್ರಮಗಳು, ತುರ್ತು ಸೇವೆ, ಹೆಲಿಪ್ಯಾಡ್ ಮತ್ತು ವೇದಿಕೆ ಕಾರ್ಯಕ್ರಮದ ಭದ್ರತೆ ಕರ್ತವ್ಯಗಳ ಬಗ್ಗೆ ಭದ್ರತಾ ಅಧಿಕಾರಿ ಧನಂಜಯ್‌ಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಸಲಹೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುತ್ತೂರಿನ ಶ್ರೀ ಶಿವರಾತ್ರಿ ಶಿವಯೋಗಿಶ್ವರರ ೧೦೬೬ನೇ ಜಯಂತಿ ಮಹೋತ್ಸವಕ್ಕೆ ಡಿ.೧೬ ರಂದು ಮಳವಳ್ಳಿ ಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಭದ್ರತಾ ವಿಭಾಗದ ಅಧಿಕಾರಿ ಧನಂಜಯ್‌ಕುಮಾರ್, ಕೇಂದ್ರ ಗುಪ್ತಚರ ಅಧಿಕಾರಿ ವಿಶಾಲ್ ಅವರ ನೇತೃತ್ವದಲ್ಲಿ ಶನಿವಾರ ಜಿಲ್ಲಾಡಳಿತದ ಮತ್ತು ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಎಎಸ್‌ಎಲ್ ಸಭೆ ನಡೆಸಿದರು.ಸಭೆಯಲ್ಲಿ ರಾಷ್ಟ್ರಪತಿಗಳು ಬರುವ ಮುನ್ನ ಕೈಗೊಳ್ಳಬೇಕಾದ ಕಾನೂನು ಕ್ರಮಗಳು, ತುರ್ತು ಸೇವೆ, ಹೆಲಿಪ್ಯಾಡ್ ಮತ್ತು ವೇದಿಕೆ ಕಾರ್ಯಕ್ರಮದ ಭದ್ರತೆ ಕರ್ತವ್ಯಗಳ ಬಗ್ಗೆ ಭದ್ರತಾ ಅಧಿಕಾರಿ ಧನಂಜಯ್‌ಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಸಲಹೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮಳವಳ್ಳಿಯಲ್ಲಿ ನಿರ್ಮಾಣ ಮಾಡಿರುವ ಹೆಲಿಪ್ಯಾಡ್ ಸ್ಧಳದಲ್ಲಿ ಗ್ರೀನ್ ರೂಮ್, ಹೆಲಿಪ್ಯಾಡ್ ಸುತ್ತ ಬ್ಯಾರಿಕೇಡ್ ನಿರ್ಮಾಣ ಹಾಗೂ ರೆಡ್ ಕಾರ್ಪೆಟ್ ಹಾಕುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಜಾಗ, ವಸ್ತು, ಉಪಕರಣಗಳ ತಪಾಸಣೆ:
ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯತೆ ಸಾಧಿಸಬೇಕು. ಪ್ರತಿಯೊಂದು ಜಾಗ, ವಸ್ತುಗಳು, ಬಳಸುವ ಉಪಕರಣಗಳನ್ನು ತಪಾಸಣೆ ನಡೆಸಬೇಕು. ಕಾರ್ಯಕ್ರಮ ಮುಗಿಯುವವರೆಗೂ ಎಲ್ಲಿಯೂ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು. ಹೆಲಿಪ್ಯಾಡ್ ಮತ್ತು ಕಾರ್ಯಕ್ರಮ ನಡೆಯುವ ಜಾಗಗಳಲ್ಲಿ ಅಗ್ನಿಶಾಮಕ ದಳದ ವಾಹನಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.ಗಣ್ಯರು ಸಂಚರಿಸುವ ಮಾರ್ಗದ ರಸ್ತೆಗಳು ಸ್ವಚ್ಛತೆಯಿಂದಿರಬೇಕು. ಸುಸಜ್ಜಿತ ಆ್ಯಂಬುಲೆನ್ಸ್, ನುರಿತ ಆರೋಗ್ಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಬೇಕು. ಉಪಹಾರ, ಕುಡಿಯುವ ನೀರು ಹಾಗೂ ಸ್ನ್ಯಾಕ್ಸ್‌ಗಳನ್ನು ನೀಡುವ ಮೊದಲು ಆಹಾರ ಸುರಕ್ಷತಾ ಅಧಿಕಾರಿಗಳಿಂದ ತಪಾಸಣೆ ಮಾಡಬೇಕು. ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಕಡ್ಡಾಯವಾಗಿ ಭದ್ರತಾ ಅಧಿಕಾರಿಗಳಿಂದ ಪಡೆದ ಗುರುತಿನ ಪತ್ರ ಹಾಕಿರಬೇಕು ಎಂದು ತಿಳಿಸಿದರು.
ನೋಟೀಸ್ ಕೊಡಿ:ತುರ್ತು ಸಭೆ ಇದೆ ಎಂಬ ಮಾಹಿತಿ ನೀಡಿದ್ದರೂ ನಿಗದಿತ ಸಮಯಕ್ಕೆ ಸಭೆಗೆ ಹಾಜರಾಗದ ಸಾರಿಗೆ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಎಸಿಎಫ್, ಡಿಸಿಎಫ್, ವಲಯ ಅರಣ್ಯ ಅಧಿಕಾರಿಗಳು ಸಭೆಗೆ ಆಗಮಿಸದೆ ಕಚೇರಿ ಸಿಬ್ಬಂದಿಯನ್ನು ಕಳುಹಿಸಿರುವುದಕ್ಕೆ ಕುಪಿತಗೊಂಡ ಜಿಲ್ಲಾಧಿಕಾರಿ ಡಾ.ಕುಮಾರ ನೋಟೀಸ್ ನೀಡುವಂತೆ ಸೂಚನೆ ನೀಡಿದರು.
ಹೆಲಿಪ್ಯಾಡ್ ಸ್ಥಳದಲ್ಲಿ ಮಾಧ್ಯಮಕ್ಕೆ ನಿರ್ಬಂಧ:ರಾಷ್ಟ್ರಪತಿ ಅಗಮಿಸುವ ಹೆಲಿಪ್ಯಾಡ್ ಬಳಿ ಮಾಧ್ಯಮದವರನ್ನು ನಿರ್ಭಂದಿಸಲಾಗಿದೆ, ಜಿಲ್ಲಾಡಳಿತದಿಂದ ನಿಯೋಜನೆ ಮಾಡಿದ ಓರ್ವ ಪೋಟೋಗ್ರಾಫರ್ ಮತ್ತು ವೀಡಿಯೋ ಗ್ರಾಫರ್‌ಗೆ ಮಾತ್ರ ಹೆಲಿಪ್ಯಾಡ್ ಬಳಿ ಅವಕಾಶವಿದೆ. ಅದನ್ನು ಹೊರತುಪಡಿಸಿ ಮಾಧ್ಯಮದವರಿಗೆ ಇರುವುದಿಲ್ಲ. ಕಾರ್ಯಕ್ರಮದ ಬಳಿ ಅವಕಾಶ ನೀಡಲಾಗಿದೆ, ಅದರಲ್ಲೂ ಮಾಧ್ಯಮ ಅಕಾಡೆಮಿಯಿಂದ ಅಧಿಕೃತ ಗುರುತಿನ ಪತ್ರ ಇರುವವರಿಗೆ ರಾಷ್ಟ್ರಪತಿಗಳ ವೇದಿಕೆ ಕಾರ್ಯಕ್ರಮಕ್ಕೆ ಅವಕಾಶವಿದೆ. ಅದನ್ನು ಹೊರತು ಪಡಿಸಿ ಉಳಿದವರಿಗೆ ಹೊರಗಡೆ ಇರುವ ಮೀಡಿಯಾ ಗ್ಯಾಲರಿಯಲ್ಲಿ ಅವಕಾಶ ನೀಡಲಾಗಿದ್ದು, ಅವರೂ ಸಹ ಪೊಲೀಸ್ ಇಲಾಖೆಯಿಂದ ಗುರುತಿನ ಪತ್ರ ಪಡೆಯಬೇಕಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಜಯಂತಿ ಮಹೋತ್ಸವದ ಸಮಿತಿಯ ವಿದ್ಯಾಪೀಠದ ಅಧಿಕಾರಿಗಳು ಉಪಸ್ಥಿತರಿದ್ದರು.