ಮಂಡ್ಯದಲ್ಲಿ ಕಬ್ಬು, ಭತ್ತ, ರಾಗಿ ಹಾಗೂ ಆಹಾರ ಪದಾರ್ಥಗಳನ್ನು ಬೆಳೆಯಲಾಗುತ್ತಿದೆ. ಇವುಗಳನ್ನು ಬಳಸಿಕೊಂಡು ಉಳಿದದ್ದನ್ನು ವಿದೇಶಗಳಿಗೆ ರಫ್ತು ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದಲ್ಲಿರುವ ಮೈಸೂರು- ಬೆಂಗಳೂರು ಹೆದ್ದಾರಿಯ ಜಯಚಾಮರಾಜೇಂದ್ರ ಒಡೆಯರ್‌ ವೃತ್ತಕ್ಕೆ ಆಗಮಿಸಿದ್ದ ಸ್ವದೇಶಿ ಜಾಗೃತಿ ಸೈಕಲ್ ಯಾತ್ರಿಗಳನ್ನು ಲಯನ್ ಸಂಸ್ಥೆ ಪದಾಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.

ಬಳಿಕ ಮಾತನಾಡಿದ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಕೆ.ಎಲ್.ರಾಜಶೇಖರ್, ಶ್ರೀ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ‘ಸ್ವದೇಶಿ ಬಳಸಿ ದೇಶ ಬೆಳೆಸಿ’ ಎಂಬ ಘೋಷ ವಾಕ್ಯದೊಂದಿಗೆ ನಿವೃತ್ತ ಯೋಧರು ಮತ್ತು ಅಧಿಕಾರಿಗಳು ರಾಜ್ಯಾದ್ಯಂತ ಸೈಕಲ್ ಮೂಲಕ ಸಂಚರಿಸಿ ಮಂಡ್ಯ ನಗರಕ್ಕೆ ಬಂದಿರುವುದು ಸಂತಸದ ವಿಚಾರ ಎಂದು ತಿಳಿಸಿದರು.

ಒಟ್ಟು 17 ಮಂದಿ ಸೈಕಲ್ ಯಾತ್ರೆ ಮೂಲಕ ದೇಶಿ ವಸ್ತುಗಳ ಬಳಕೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅದಕ್ಕೆ ನಾವೆಲ್ಲರೂ ಸಹಕಾರ ನೀಡುವುದರೊಂದಿಗೆ ಆತಿಥ್ಯ ನೀಡಿ ಬೀಳ್ಕೊಡಲಾಗುವುದು ಎಂದು ತಿಳಿಸಿದರು.

ಬಳಿಕ ಮಾತನಾಡಿದ ಸೈಕಲ್ ಯಾತ್ರಿ ಮುನಿಸ್ವಾಮಿ, ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಸ್ವದೇಶಿ ವಸ್ತುಗಳನ್ನೇ ಭಾರತೀಯರು ಬಳಸಬೇಕು. ಉತ್ಪಾದಕರಿಗೆ ನೆರವು ನೀಡಬೇಕು. ದೇಶದ ಆರ್ಥಿಕ ಪ್ರಗತಿಗೆ ತಮ್ಮದೇ ಕೊಡುಗೆ ನೀಡಬೇಕೆನ್ನುವ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.

ಮಂಡ್ಯದಲ್ಲಿ ಕಬ್ಬು, ಭತ್ತ, ರಾಗಿ ಹಾಗೂ ಆಹಾರ ಪದಾರ್ಥಗಳನ್ನು ಬೆಳೆಯಲಾಗುತ್ತಿದೆ. ಇವುಗಳನ್ನು ಬಳಸಿಕೊಂಡು ಉಳಿದದ್ದನ್ನು ವಿದೇಶಗಳಿಗೆ ರಫ್ತು ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.

ನಾವು 30 ವರ್ಷದ ವಯೋಮಾನದ 17 ಮಂದಿ ಸೈಕಲ್ ಯಾತ್ರಿಗಳು ಸಂಪೂರ್ಣ ಕರ್ನಾಟಕ 3500 ಕಿಲೋಮೀಟರ್ ಸಂಚಾರ ಮಾಡಿ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಸಂಕಲ್ಪ ನಮ್ಮದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಡಿ.ನಿಂಗೇಗೌಡ, ಚಂದ್ರಲಿಂಗು, ಅಪೂರ್ವಚಂದ್ರ, ಡಿಸಿಟಿ ಸುನಿಲ್ ಕುಮಾರ್, ಆದರ್ಶ್, ಶಿವಲಿಂಗಯ್ಯ, ಸೀತಾರಾಮ್, ಪಿ.ಲಂಕೇಶ್, ಮಹೇಂದ್ರ, ಸತೀಶ್, ಚೆಲುವರಾಜು, ಬಸವರಾಜು, ಸಂದೀಪ್ ಹಾಗೂ ಬಿಜೆಪಿ ಮುಖಂಡರಾದ ವಿವೇಕ್, ಶಿವಕುಮಾರ್ ಆರಾಧ್ಯ ಇತರರಿದ್ದರು.