ಸಾರಾಂಶ
ಗವಿಮಠ, ಕಿಷ್ಕಿಂದೆ, ಮಳೆಮಲ್ಲೇಶ್ವರ ಸೇರಿ ಅನೇಕ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ ಮಾಡಿ, ಪ್ರವಾಸೋದ್ಯಮ ಬೆಳೆಸಬೇಕು. ಅದನ್ನು ಬಿಟ್ಟು ಇಲ್ಲಿನ ಜನರಿಗೆ ಉದ್ಯೋಗ ಕೊಡದೇ ಇಲ್ಲಿನ ನೈಸರ್ಗಿಕ ಸಂಪತ್ತು ಬಳಸಿಕೊಂಡು ಕಾರ್ಖಾನೆಗಳು ಸ್ಥಳೀಯರ ಜೀವನ ಹಾಳು ಮಾಡುತ್ತಿವೆ.
ಕೊಪ್ಪಳ:
ನಗರಕ್ಕೆ ಹೊಂದಿಕೊಂಡು ಮತ್ತು ಹತ್ತಿರದಲ್ಲಿ ಪ್ರಸ್ತುತ ಬಂದಿರುವ ಬಲ್ಡೋಟಾ ಕಾರ್ಖಾನೆ ಮತ್ತು ಕಿರ್ಲೋಸ್ಕರ್ ಸೇರಿ ವಿವಿಧ ಕಾರ್ಖಾನೆಗಳ ವಿಸ್ತರಣೆ ತಡೆಯುವಂತೆ ಆಗ್ರಹಿಸಿ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ನಗರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮನವಿ ಸಲ್ಲಿಸಿತು.ಒಂದೇ ಕಡೆಗೆ ಕಾರ್ಖಾನೆ ಸ್ಥಾಪಿಸುವ ಮೂಲಕ ನೈಸರ್ಗಿಕ ನಿಯಮ ಮೀರಿ ಸಮಸ್ಯೆ ಮಾಡಲಾಗುತ್ತಿದೆ. ಅದರಿಂದ ಪರಿಸರ ನಾಶ, ಕಲುಷಿತ ವಾತಾವರಣ, ಅಂತರ್ಜಲ ಸಮಸ್ಯೆ ಜತೆಗೆ ಇತರೆ ಸಮಸ್ಯೆಗಳು ಎದುರಾಗಲಿವೆ. ಇದರಿಂದ ಆರೋಗ್ಯಕ್ಕೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿದೆ ಎಂದು ಮನವರಿಕೆ ಮಾಡಲಾಯಿತು.
ವಿಸ್ತರಣೆಗೆ ನೀಡಿರುವ ಅನುಮತಿ ಹಿಂಪಡೆಯಬೇಕೆಂದು ಒತ್ತಾಯಿಸಿದ ನಿಯೋಗ, ಗವಿಮಠ, ಕಿಷ್ಕಿಂದೆ, ಮಳೆಮಲ್ಲೇಶ್ವರ ಸೇರಿ ಅನೇಕ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ ಮಾಡಿ, ಪ್ರವಾಸೋದ್ಯಮ ಬೆಳೆಸಬೇಕು. ಅದನ್ನು ಬಿಟ್ಟು ಇಲ್ಲಿನ ಜನರಿಗೆ ಉದ್ಯೋಗ ಕೊಡದೇ ಇಲ್ಲಿನ ನೈಸರ್ಗಿಕ ಸಂಪತ್ತು ಬಳಸಿಕೊಂಡು ಕಾರ್ಖಾನೆಗಳು ಸ್ಥಳೀಯರ ಜೀವನ ಹಾಳು ಮಾಡುತ್ತಿವೆ. ಉದ್ಯೋಗ ಬೇಕು, ಆದರೆ ಅದಕ್ಕೂ ಮುಂಚೆ ಬದುಕಬೇಕಿದೆ ಎಂದು ಹೋರಾಟಗಾರರು ಹೇಳಿದರು.ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಕೆ.ಎಂ. ಸೈಯದ್ ಇದ್ದರು. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಪ್ರಮುಖರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ.ಬಿ. ಗೋನಾಳ, ಮಹಾಂತೇಶ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಡಾ. ಮಂಜುನಾಥ ಸಜ್ಜನ್, ಮುದುಕಪ್ಪ ಹೊಸಮನಿ, ಎಸ್.ಎ. ಗಫಾರ್, ಮಖಬುಲ್ ರಾಯಚೂರ ಇದ್ದರು.