ದರ ಹೆಚ್ಚಳ: ಟೊಮೆಟೋಗೆ ಶುರುವಾಯ್ತು ಕಳ್ಳರ ಕಾಟ

| Published : Jun 17 2024, 01:38 AM IST / Updated: Jun 17 2024, 10:04 AM IST

tomato

ಸಾರಾಂಶ

ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನಲೆಯಲ್ಲಿ ಕಳ್ಳರ ಕಾಟ ಹೆಚ್ಚಾಗುತ್ತಿದ್ದು ಬೆಳೆದ ಬೆಳೆಯನ್ನು ಸಂರಕ್ಷಿಸಿಕೊಳ್ಳುವುದೇ ರೈತರ ಪಾಲಿಗೆ ಸವಾಲಾಗುತ್ತಿದೆ. ಮಾರುಕಟ್ಟೆಯಲ್ಲಿ ಹರಾಜಿಗೆಂದು ಇಟ್ಟಿರುವ ಟೊಮೆಟೊ ಬಾಕ್ಸ್‌ಗಳು ಕಳ್ಳರ ಪಾಲಾಗುತ್ತಿವೆ

ಚಿಂತಾಮಣಿ:  ಟೊಮೆಟೋ ಬೆಲೆ ದಿನೆ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೊಮೆಟೋಗೆ ಕಳ್ಳರ ಕಾಟ ಶುರುವಾಗಿದೆ. ಮಾರುಕಟ್ಟೆಗೆ ರೈತರು ತಂದಿಟ್ಟ ಟೊಮೆಟೋ ಬಾಕ್ಸ್‌ಗಳನ್ನು ಕಳ್ಳತನ ಮಾಡುತ್ತಿರುವ ದೃಶ್ಯಗಳು ಎಪಿಎಂಸಿ ಯಾರ್ಡ್‌ನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಕಳೆದ ೭-೮ ತಿಂಗಳುಗಳಿಂದ ಮಳೆಯಿಲ್ಲದೆ ಬಿಸಿಲಿನ ತಾಪ 40 ಡಿಗ್ರಿ ಮುಟ್ಟಿತ್ತು. 

ಇದರಿಂದಾಗಿ ಜಿಲ್ಲೆಯಾದ್ಯಂತ ಟೊಮೆಟೋ ಸೇರಿದಂತೆ ತರಕಾರಿ ಹಣ್ಣುಹಂಪಲಿನ ಬೆಳೆಗಳು ನೀರಿಲ್ಲದೆ ಒಣಗಿಹೋಗಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಅವಿಭಜಿತ ಕೋಲಾರ ಜಿಲ್ಲೆಯ ರೈತಾಪಿ ವರ್ಗವು ಕಾಳವೆಬಾವಿಗಳ ನೀರು ಬಳಸಿ ಬೆಳೆಬೆಳೆಯುವಲ್ಲಿ ಅಲ್ಲಲ್ಲಿ ಯಶಸ್ವಿಯಾಗಿದ್ದಾರೆ. ಬೆಳೆ ಹಾನಿಯಿಂದಾಗಿ ಟೊಮೆಟೋ ಸೇರಿದಂತೆ ತರಕಾರಿ ಬೆಲೆಗಳು ಗಗನಮುಖಿಯಾಗಿವೆ.

ಹರಾಜಿಗೆಂದು ಇಟ್ಟ ಟೊಮೆಟೋ ಮಾಯ

ಟೊಮಟೋ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನಲೆಯಲ್ಲಿ ಕಳ್ಳರ ಕಾಟ ಹೆಚ್ಚಾಗುತ್ತಿದ್ದು ಬೆಳೆದ ಬೆಳೆಯನ್ನು ಸಂರಕ್ಷಿಸಿಕೊಳ್ಳುವುದೇ ರೈತರ ಪಾಲಿಗೆ ಸವಾಲಾಗುತ್ತಿದೆ. ಚಿಂತಾಮಣಿ ನಗರದ ಎಪಿಎಂಸಿ ಮಾರುಕಟ್ಟೆಗೆ ತಾಲ್ಲೂಕು, ಜಿಲ್ಲೆ ಸೇರಿದಂತೆ ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ರೈತರ ಟೊಮೆಟೊ ಮಾರಾಟಕ್ಕೆಂದು ತರುತ್ತಾರೆ. ಇಲ್ಲಿನ ಏಜೆಂಟರ್‌ಗಳು ಅಂಗಡಿಗಳ ಮುಂಭಾಗದಲ್ಲಿ ಬೆಳಗಿನ ಹರಾಜಿಗೆಂದು ಇಟ್ಟಿರುವ ಟೊಮೆಟೊ ಬಾಕ್ಸ್‌ಗಳನ್ನು ಕಳ್ಳರು ಕಳ್ಳತನ ಮಾಡಲಾರಂಭಿಸಿದ್ದಾರೆ.

ರೈತರು ಕಷ್ಟಪಟ್ಟು ಬೆಳೆದು ಮಾರುಕಟ್ಟೆಗೆ ತಂದರೆ ಮಾರುಕಟ್ಟೆಯಲ್ಲಿ ಎಪಿಎಂಸಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತೆಯಿಂದ ರಾತ್ರಿ ವೇಳೆ ಸೂಕ್ತ ಭದ್ರತೆ ಇಲ್ಲದಿರುವುದರಿಂದ ಟೊಮೆಟೋ ಕಳ್ಳರ ಪಾಲಾಗುತ್ತಿವೆ. ಮಾರುಕಟ್ಟೆಯಲ್ಲಿ ಟೊಮೆಟೋ ಬಾಕ್ಸ್ ಗಳ ಕಳ್ಳತನ ಮಾಡಿರುವ ಕಳ್ಳರನ್ನು ಶೀಘ್ರವಾಗಿ ಪತ್ತೆಹಚ್ಚಿ ಕ್ರಮಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.

ಸೌಲಭ್ಯ, ಭದ್ರತೆ ಇಲ್ಲ

ಎಪಿಎಂಸಿ ಆಡಳಿತ ಮಂಡಳಿಗೆ ರೈತರು ತರುವ ಟಮೋಟ ಹಣ್ಣುಗಳಿಂದ ತೆರಿಗೆ ವಸೂಲಿ ಆಗುತ್ತದೆ ಆದರೆ ಅಧಿಕಾರಿಗಳು ಬರುವ ತೆರಿಗೆಯನ್ನು ಇಲಾಖೆ ಖಜಾನೆಗೆ ಜಮೆ ಮಾಡಿಕೊಳ್ಳುತ್ತದೆ. ರೈತರಿಗೆ ಯಾವುದೇ ಸೌಲಭ್ಯ ಹಾಗೂ ಕೃಷಿ ಉತ್ಪನ್ನಗಳಿಗೆ ಭದ್ರತೆ ಕಲ್ಪಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.