ರಾಜ್ಯ ಸರ್ಕಾರದಿಂದ ಸೇಡು ತೀರಿಸಿಕೊಳ್ಳುವ ಕೆಲಸ: ಜೋಶಿ

| Published : Jun 17 2024, 01:38 AM IST / Updated: Jun 17 2024, 10:54 AM IST

Prahlada Joshi
ರಾಜ್ಯ ಸರ್ಕಾರದಿಂದ ಸೇಡು ತೀರಿಸಿಕೊಳ್ಳುವ ಕೆಲಸ: ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಮುಂದಾಲೋಚನೆ ಇಲ್ಲದೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಈಗ ಇದರ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಎಷ್ಟುಸರಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿ: ಗ್ಯಾರಂಟಿಗಳನ್ನು ಈಡೇರಿಸಲು ಆಗದೆ ಸಂದಿಗ್ಧ ಪರಿಸ್ಥಿತಿಯಲ್ಲಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವು ಈಗ ಪೆಟ್ರೋಲ್, ಡೀಸೆಲ್ ದರ ಏರಿಸಿದೆ. ಈ ಮೂಲಕ ರಾಜ್ಯದ ಜನರ ಮೇಲೆ ಬರೆ ಹಾಕಲು ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ಷೇಪ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಮುಂದಾಲೋಚನೆ ಇಲ್ಲದೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಈಗ ಇದರ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಎಷ್ಟುಸರಿ ಎಂದು ಪ್ರಶ್ನಿಸಿದ ಅವರು, ಈಗಾಗಲೇ ರಾಜ್ಯದ ಜನರು ತೀವ್ರ ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕು. ಒಂದು ವೇಳೆ ಹಿಂಪಡೆಯದಿದ್ದರೆ, ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜನರ ಜೇಬಿಗೆ ಕತ್ತರಿ: ಗ್ಯಾರಂಟಿ ಯೋಜನೆ ಮೂಲಕ ಉಚಿತ ನೀಡುತ್ತೇವೆ ಎಂದು ಹೇಳಿ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದೇ ಬೆಲೆ ಏರಿಕೆ ಇಟ್ಟುಕೊಂಡು ಯಾವುದೇ ಯೋಜನೆ ಇಲ್ಲದೇ, ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಪ್ರಣಾಳಿಕೆ ಮಾಡಿತ್ತು. ಈಗ ಕಾಂಗ್ರೆಸ್ ₹3.50 ವರೆಗೆ ತೈಲ ಬೆಲೆ ಏರಿಕೆ ಮಾಡಿರುವುದು ಖಂಡನೀಯ. ಯಾವುದೇ ಯೋಜನೆ, ಯೋಚನಾ ರಹಿತವಾಗಿ ಗ್ಯಾರಂಟಿ ರೂಪಿಸಿ ಜನರ ಮೇಲೆ ಹೊರೆ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದರು.

ಸೇಡು ತೀರಿಸಿಕೊಳ್ಳುವ ಕೆಲಸ: ಗ್ಯಾರಂಟಿಯಿಂದ 18-20 ಸಂಸದರ ಸ್ಥಾನಗಳನ್ನು ಗೆಲ್ಲುವ ಭ್ರಮೆಯಲ್ಲಿ ಕಾಂಗ್ರೆಸ್ ಇತ್ತು. ಲೋಕಸಭಾ ಚುನಾವಣೆಯಲ್ಲಿ ದೇಶ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆಗಿದೆ. ಈ ಸಿಟ್ಟನ್ನು ರಾಜ್ಯದ ಜನರ ಮೇಲೆ ತೋರಿಸುತ್ತಿದ್ದಾರೆ. ಒಂದೆಡೆ ಸೋಲಿನ ಹತಾಶೆ ಇದ್ದರೆ, ಇನ್ನೊಂದೆಡೆ ರಾಜ್ಯದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಭಂಡ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ. ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಒಂದೆಡೆ ಹೇಳುತ್ತಾರೆ. ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ದರ ಏರಿಸಿದೆ. ಇದು ಹಣಕಾಸಿನ ಪರಿಸ್ಥಿತಿ ಹದಗೆಟ್ಟದ್ದನ್ನು ತಿಳಿಸುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಸಿಬ್ಬಂದಿಗೆ ಸಂಬಳ ಕೊಡಲಾಗದ ಕೆಟ್ಟ ಸ್ಥಿತಿಯಲ್ಲಿದ್ದು, ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ದರ ಏರಿಸಿದ್ದಾರೆ. ಅಲ್ಲದೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತಹಾಕದ ಜನರ ಮೇಲೆ ಸೇಡು ತೀರಿಸಿಕೊಳ್ಳಲು ಜನವಿರೋಧಿ ಸರ್ಕಾರ ತೈಲಬೆಲೆ ಏರಿಸಿದೆ. ಅವೈಜ್ಞಾನಿಕ ಗ್ಯಾರಂಟಿಗಳಿಂದ ಖಾಲಿ ಆಗಿರುವ ಬೊಕ್ಕಸವನ್ನು ತುಂಬಿಸಲು ಜನರ ಮೇಲೆ ತೆರಿಗೆ ಹೇರಿ ತುಂಬಿಸಿಕೊಳ್ಳಲು ಮುಂದಾಗಿದೆ.

ಬಿಟ್ಟೆ ಭಾಗ್ಯಗಳಿಂದ ಈಗಾಗಲೇ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ರೀತಿ ಬೆಲೆ ಏರಿಸಿ ಜನರ ನಂಬಿಕೆಗೆ ದ್ರೋಹ ಬಗೆಯುತ್ತಿದೆ. ಸರ್ಕಾರ ಏರಿಸಿದ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.