ಹೊಸಪೇಟೆ: ರಾಜ್ಯದಲ್ಲಿ ಜನಸಂಖ್ಯೆಯ ಆಧಾರದಲ್ಲಿ ಸುಮಾರು 2.7 ಲಕ್ಷ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣ ಪಡೆಯಬೇಕಿತ್ತು. ಆದರೆ ಪ್ರಸ್ತುತ ಕೇವಲ 1.7 ಲಕ್ಷ ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಕುರಿತು ಇಲಾಖೆಗಳ ಬಳಿ ನಿಖರ ಮತ್ತು ಸ್ಪಷ್ಟ ದತ್ತಾಂಶದ ಕೊರತೆಯಿದೆ. ಅಧಿಕಾರಿಗಳು ತಕ್ಷಣವೇ ನಿಖರವಾದ ಮಾಹಿತಿ ನೀಡಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಪ್ರಗತಿ ಪರೀಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.2011ರ ಶೈಕ್ಷಣಿಕ ಸರ್ವೇ ವರದಿಯನ್ನು ಉಲ್ಲೇಖಿಸಿದ ಅವರು, ಅಲ್ಪಸಂಖ್ಯಾತ ಸಮುದಾಯದಲ್ಲಿ ಕೇವಲ ಶೇ.42.73ರಷ್ಟು ವಿದ್ಯಾರ್ಥಿಗಳು ಮಾತ್ರ ಸಾಕ್ಷರತೆ ಪ್ರಮಾಣ ಹೊಂದಿರುವುದು ಆತಂಕ ಮೂಡಿಸಿದೆ. ಮಕ್ಕಳ ಭವಿಷ್ಯವನ್ನು ಕಸಿಯುತ್ತಿರುವ ಪೋಷಕರಲ್ಲಿ ಶಿಕ್ಷಣದ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕು. ಜಿಲ್ಲೆಯ ಯಾವೊಬ್ಬ ವಿದ್ಯಾರ್ಥಿಯೂ ಶಾಲೆಯಿಂದ ಹೊರಗುಳಿಯದಂತೆ ಇಲಾಖೆಗಳು ಕಟ್ಟೆಚ್ಚರ ವಹಿಸಬೇಕು ಎಂದು ಅವರು ತಾಕೀತು ಮಾಡಿದರು.
ಶಿಕ್ಷಕರ ಕೊರತೆ ನೀಗಿಸಲು ಹೊರಗುತ್ತಿಗೆ ನೇಮಕಾತಿ:ಜಿಲ್ಲಾದ್ಯಂತ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ, ಅಗತ್ಯಕ್ಕೆ ಅನುಗುಣವಾಗಿ ತಕ್ಷಣವೇ ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನೇಮಕ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಸೂಚಿಸಲಾಯಿತು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ವಸತಿ ನಿಲಯಗಳು ಎದುರಿಸುತ್ತಿರುವ ಮೂಲಸೌಕರ್ಯ ಹಾಗೂ ಇಲಾಖಾ ಮಟ್ಟದ ಇತರೆ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಇರುವ ಎಲ್ಲಾ ಪ್ರಮುಖ ಬೇಡಿಕೆಗಳು ಮತ್ತು ಸವಾಲುಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ವಿಶೇಷ ಕಾರ್ಯದರ್ಶಿ ಮುಜೀಬುಲ್ಲಾ ಖಾನ್, ಎಸ್ಪಿ ಎಸ್.ಜಾಹ್ನವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಪ್ರಗತಿ ಪರಿಶೀಲನಾ ಸಭೆ ಆರಂಭಕ್ಕೂ ಮುನ್ನ ಅಲ್ಪಸಂಖ್ಯಾತರ ಸಮುದಾಯದವರಿಂದ ಕುಂದು ಕೊರತೆ ಅಹವಾಲು ಸ್ವೀಕರಿಸಿದರು.
ಈ ವೇಳೆ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಅಧಿಕಾರಿ ಜಾವೀದ್ ಸೇರಿದಂತೆ ಅಲ್ಪ ಸಂಖ್ಯಾತ ಸಮುದಾಯದ ವಿವಿಧ ಮುಖಂಡರು, ಸಾರ್ವಜನಿಕರು ಇದ್ದರು.