ಸಿರಿಗೇರಿ, ಕರೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ 150 ಹೆಕ್ಟೇರ್ ಸೂರ್ಯಕಾಂತಿ ಬೆಳೆಯನ್ನು ರೈತರು ಬೆಳೆದಿದ್ದಾರೆ.

ತೆಕ್ಕಲಕೋಟೆ: ತಾಲೂಕಿನಲ್ಲಿ ಮಳೆಯ ಕೊರತೆ ನಡುವೆಯೂ ರೈತರು ಸೂರ್ಯಕಾಂತಿ ಬೆಳೆ ಆಸರೆಯಾಗಿರುವ ಜೊತೆಗೆ ಉತ್ತಮ ಇಳುವರಿಯೊಂದಿಗೆ ರೈತರ ಆರ್ಥಿಕತೆ ವೃದ್ಧಿಗೆ ಕಾರಣವಾಗಿದೆ.

ಸಮೀಪದ ಸಿರಿಗೇರಿ, ಕರೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ 150 ಹೆಕ್ಟೇರ್ ಸೂರ್ಯಕಾಂತಿ ಬೆಳೆಯನ್ನು ರೈತರು ಬೆಳೆದಿದ್ದಾರೆ. ಅಲ್ಪ ಸ್ವಲ್ಪ ನೀರಿನಿಂದ ರೈತರು ಸೂರ್ಯಕಾಂತಿ ಬೆಳೆದಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಟಾವಿಗೆ ಬರಲಿದೆ.

ಮುಂಗಾರು ಹಂಗಾಮಿನಲ್ಲಿ ರೈತರು ಭತ್ತವನ್ನು ಬೆಳೆದಿದ್ದರು. ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಟ್ಟಾದ ಹಿನ್ನೆಲೆಯಲ್ಲಿ ಎರಡನೇ ಬೆಳೆಗೆ ಕಾಲುವೆಗಳಿಗೆ ನೀರು ಇಲ್ಲದಂತೆ ಆಗಿತ್ತು. ಇತ್ತೀಚೆಗೆ ಕೆಳಮಟ್ಟದ ಕಾಲುವೆಗೆ ನೀರು ಬಿಟ್ಟಾಗ ರೈತರು ಸೂರ್ಯಕಾಂತಿ ಬೆಳೆದಿದ್ದಾರೆ. ಸೂರ್ಯಕಾಂತಿಯ ಎಲೆಗಳು ಮಣ್ಣಿನಲ್ಲಿ ಸೇರುವುದರಿಂದ ಮಣ್ಣಿನ ಫಲವತ್ತತೆ ಅಧಿಕವಾಗಿ, ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ಅನುಕೂಲವಾಗುತ್ತದೆ ಎಂಬುದು ರೈತರ ಆಶಾದಾಯಕವಾಗಿದೆ.

ಸೂರ್ಯಕಾಂತಿ ಬೀಜಕ್ಕೆ ನಾಲ್ಕು ಸಾವಿರ ರು., ಬಿತ್ತನೆ ಹಾಗೂ ಉಳುಮೆ, ಭೂಮಿಯಲ್ಲಿ ಸ್ವಚ್ಚತೆ ಮಾಡಲು ಮತ್ತು ಸೂರ್ಯಕಾಂತಿ ಬೆಳೆಯ ಕಟಾವು ಸೇರಿದಂತೆ ಒಟ್ಟು ₹20 ಸಾವಿರ ಖರ್ಚು ಮಾಡಿದ್ದಾರೆ. ಎಕರೆಗೆ 5 ರಿಂದ 10 ಕ್ವಿಂಟಲ್ ಇಳುವರಿ ಬರುವ ಸಾಧ್ಯತೆ ಇದೆ. ಕನಿಷ್ಠ 8 ಕ್ವಿಂಟಲ್ ಇಳುವರಿ ಬಂದಲ್ಲಿ ಸೂರ್ಯಕಾಂತಿ ಬೆಳೆ ರೈತರಿಗೆ ಲಾಭವನ್ನು ತಂದುಕೊಡಲಿದೆ ಎನ್ನುತ್ತಾರೆ ರೈತರು.

ಮಳೆ ಇಲ್ಲದೇ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಟ್ಟಾಗಿದ್ದರಿಂದ ಎರಡನೇ ಬೆಳೆಗೆ ನೀರಿಲ್ಲದೇ ರೈತರು ಕೈಕಟ್ಟಿ ಕುಳಿತುಕೊಂಡಿದ್ದರು. ಆದರೆ, ಅಲ್ಪಸ್ವಲ್ಪ ಕಾಲುವೆ ನೀರು ಮತ್ತು ಅಲ್ಲಲ್ಲಿ ‌ಸ್ವಲ್ಪ ಪ್ರಮಾಣದ ಮಳೆರಾಯನ ಕೃಪೆಯಿಂದ ಸೂರ್ಯಕಾಂತಿ ಬೆಳೆ ಬೆಳೆದು, ಈಗ ಕಟಾವಿನ ಹಂತಕ್ಕೆ ಬಂದಿದೆ. ಸೂರ್ಯಕಾಂತಿ ಬೆಳೆಯಿಂದ ನಮಗೆ ಅನುಕೂಲವಾಗಿದೆ ಎನ್ನುತ್ತಾರೆ ರೈತ ಈರಣ್ಣ.

ಮಣ್ಣಿನ ಫಲವತ್ತೆ ಹೆಚ್ಚಾಗಲು ಸೂರ್ಯಕಾಂತಿ ಬೆಳೆಯಿಂದ ಅನುಕೂಲವಾಗಲಿದೆ. ಈ ಬೆಳೆಯಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಸಿಗಲಿದೆ. ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಸೂರ್ಯಕಾಂತಿ ಬಿತ್ತನೆ ಬೀಜಗಳು ಲಭ್ಯ ಇವೆ ಎನ್ನುತ್ತಾರೆ ಸಹಾಯಕ ಕೃಷಿ ಅಧಿಕಾರಿ ಮಂಜುನಾಥ ರೆಡ್ಡಿ.