ಮದ್ದೂರು:
ಕಾವೇರಿ ನೀರು ನಿಯಂತ್ರಣ ಸಮಿತಿ ಕೆಆರ್‌ಎಸ್‌ನಿಂದ ಪ್ರತಿನಿತ್ಯ 15 ದಿವಸಗಳ ಕಾಲ 12 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ನೀಡಿರುವ ಆದೇಶ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ, ಕರ್ನಾಟಕಕ್ಕೆ ಪದೇಪದೇ ಆಗುತ್ತಿರುವ ಅನ್ಯಾಯ ಖಂಡಿಸಿ ಆ.13ರ ಗುರುವಾರ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರೆದಿರುವ ಕರ್ನಾಟಕ ಬಂದ್ ಬೆಂಬಲಿಸಿ ಘನ ಘೋರ ಅನ್ಯಾಯ ಖಂಡಿಸಲು ಮಂಡ್ಯ ಜಿಲ್ಲೆಯ ಜನತೆ ಬಂದ್ ಬೆಂಬಲಿಸಬೇಕು. ತಾಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ಕೈಜೋಡಿಸುವಂತೆ ಮನವಿ ಮಾಡಿದರು.
ವರ್ತಕರು, ಹೋಟೆಲ್ ಮಾಲೀಕರು, ಕೈಗಾರಿಕೋದ್ಯಮಿಗಳ, ಶಾಲಾ ಕಾಲೇಜುಗಳ ಮುಖ್ಯಸ್ಥರು, ಬೀದಿ ಬದಿ ವ್ಯಾಪಾರಿಗಳು ಸಾರ್ವಜನಿಕರು ಎಲ್ಲಾ ಖಾಸಗಿ ಸಂಸ್ಥೆಗಳು ಕರ್ನಾಟಕ ಬಂದ್ ಬೆಂಬಲಿಸಲು ಮನವಿ ಮಾಡಿದರು.ಜಿಲ್ಲಾ ರೈತ ಸಂಘ ಪತ್ರಿಕಾ ಕಾರ್ಯದರ್ಶಿ ಸೊ.ಸಿ.ಪ್ರಕಾಶ್ ಮಾತನಾಡಿ, ಕಾವೇರಿ ನೀರು ನಮ್ಮದು ಕಾಪಾಡುವ ಹೊಣೆ ನಮ್ಮದು. ಆದ್ದರಿಂದ ಬಂದ್ ಬೆಂಬಲಿಸಿ ನಮ್ಮ ಕೂಗನ್ನು ಆಳುವ ಸರ್ಕಾರಗಳಿಗೆ ಎಚ್ಚರಿಸೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ವಿ.ಜೆ.ಸುನೀಲ್ ಕುಮಾರ್, ಕೆ.ಬಿ.ಸಿದ್ದೇಗೌಡ, ಕೆಸ್ತೂರು ರವಿ ಬೋರೇಗೌಡ, ಹಿಂದುಳಿದ ವರ್ಗಗಳ ಅಧ್ಯಕ್ಷ ಶಶಿಕುಮಾರ್ ಮತ್ತು ಸಂಘಟನೆಯ ಮುಖಂಡರು ಹಾಜರಿದ್ದರು.