- ರಾಜ್ಯದ ಜನತೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ ಬಹಿರಂಗ ಕ್ಷಮೆಯಾಚಿಸಬೇಕು: ಅಫ್ಸರ್ ಆಗ್ರಹ

- - -

- ಎಸ್‌ಡಿಪಿಐನಿಂದ ಬೆಂಗಳೂರಿನಲ್ಲಿ ಆ.19ರಂದು ವಿಧಾನಸೌಧ ಚಲೋ ಹೋರಾಟ

- ಗೃಹಜ್ಯೋತಿಗೆ ಆಧಾರ್ ಕಾರ್ಡ್‌, ಬಾಡಿಗೆ ಕರಾರು ಪತ್ರ, ಜಾತಿ ಪ್ರಮಾಣ, ಪಾನ್ ಕಾರ್ಡ್‌ ಕೇಳೋದು ಅವೈಜ್ಞಾನಿಕ ಕ್ರಮ

- - -


ಕನ್ನಡಪ್ರಭ ವಾರ್ತೆ ದಾವಣಗೆರೆ

ಜನತೆ ಕೇಳದಿದ್ದರೂ ರಾಜ್ಯದಲ್ಲಿ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳಿಗೆ ವಾರಂಟಿಯೇ ಇಲ್ಲದಂತಾಗಿದೆ. ಗ್ಯಾರಂಟಿಗಳ ಜಾರಿಗೆ ಹಣವೇ ಇಲ್ಲದ ಕಾಂಗ್ರೆಸ್ ಸರ್ಕಾರವು ಯೋಜನೆಗಳ ಅನುಷ್ಠಾನದಲ್ಲಿ ಆಡಳಿತಾತ್ಮಕ ವೈಫಲ್ಯ ಹಾಗೂ ಅನಗತ್ಯ ನಿರ್ಬಂಧಗಳನ್ನು ಹೇರುವ ಮೂಲಕ ರಾಜ್ಯದ ಜನರನ್ನು ಸಂಕಷ್ಟಕ್ಕೆ ನೂಕುತ್ತಿವೆ ಎಂದು ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ದೂರಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಈಗ ಹಣ ಇಲ್ಲ. ಸರ್ಕಾರದ ಖಜಾನೆಯು ಖಾಲಿಯಾಗಿದೆ. ಅಭಿವೃದ್ಧಿ ಕಾರ್ಯಗಳಿಗೂ ಹಣ ಹೊಂದಿಸಲಾಗುತ್ತಿಲ್ಲ. ತಕ್ಷಣ‍ವೇ ರಾಜ್ಯದ ಜನತೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬಹಿರಂಗ ಕ್ಷಮೆಯಾಚಿಸಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆಗೆ ಆಧಾರ್ ಕಾರ್ಡ್‌, ಬಾಡಿಗೆ ಕರಾರು ಪತ್ರಗಳ ಜೊತೆಗೆ ಜಾತಿ ಪ್ರಮಾಣ, ಪಾನ್ ಕಾರ್ಡ್‌ಗಳನ್ನೆಲ್ಲಾ ಕೇಳುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದ ನಂತರ ಯಾವ ಕಾರಣಕ್ಕೆ ಈಗ ಪಾನ್ ಕಾರ್ಡ್ ನೀಡಬೇಕು ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಲಿ. ಜಾತಿ ಪ್ರಮಾಣಪತ್ರ ಕೇಳುವ ಮೂಲಕ ಜಾತಿಗಳನ್ನು ತೋರಿಸುವ ಕೆಲಸವಾಗುತ್ತಿದೆ. ಎಲ್ಲರಿಗೂ ಉಚಿತ ವಿದ್ಯುತ್ ಘೋಷಿಸಿದ್ದ ಸಿದ್ದರಾಮಯ್ಯ ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಸಾಮಾಜಿಕ ಭದ್ರತಾ ಪಿಂಚಣಿಗಳನ್ನು, ಅನಗತ್ಯ ದಾಖಲೆಗಳು ಮತ್ತು ಅವೈಜ್ಞಾನಿಕ ಆದಾಯ ಮಿತಿಗಳ ಹೆಸರಿನಲ್ಲಿ ಸರ್ಕಾರಗಳು ಜನಸಾಮಾನ್ಯರ ಪಾಲಿಗೆ ದುಸ್ತರಗೊಳಿಸುತ್ತಿವೆ. ಕುಟುಂಬದ ಆದಾಯ ವಾರ್ಷಿಕ ₹32 ಸಾವಿರ ಮೀರಬಾರದು ಎಂಬ ಷರತ್ತು ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಸಂಪೂರ್ಣ ಅವೈಜ್ಞಾನಿಕ. ಮಳೆಗಾಲದ ಅಧಿವೇಶನದಲ್ಲಿ ವಾರ್ಷಿಕ ಆದಾಯ ಮಿತಿ ಹೆಚ್ಚಿಸುವ ತಿದ್ದುಪಡಿ ತರುವ ಕೆಲಸ ಸರ್ಕಾರ ಮಾಡಲಿ ಎಂದು ತಾಕೀತು ಮಾಡಿದರು.

ಕೇರಳದಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ವಾರ್ಷಿಕ ಕುಟುಂಬ ಆದಾಯ ಮಿತಿಯನ್ನು ₹1 ಲಕ್ಷ, ತೆಲಂಗಾಣದ ಗ್ರಾಮೀಣ ಪ್ರದೇಶಗಳಿಗೆ ₹2 ಲಕ್ಷ ಹಾಗೂ ನಗರ ಪ್ರದೇಶಗಳಿಗೆ ₹3 ಲಕ್ಷಕ್ಕೆ ಆದಾಯ ಮಿತಿ ಅನುಸರಿಸಲಾಗುತ್ತಿದೆ. ಆದರೆ, ನಮ್ಮ ಕರ್ನಾಟಕದಲ್ಲಿ ಮಾತ್ರ ₹32 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಸಾವಿರಾರು ಅರ್ಹ ಫಲಾನುಭವಿಗಳನ್ನು ಸರ್ಕಾರದ ಯೋಜನೆ, ಸೌಲಭ್ಯಗಳಿಂತ ವಂಚಿಸುವ ಪ್ರಯತ್ನ ಇದಾಗಿದೆ ಎಂದು ಅಫ್ಸರ್ ಕೊಡ್ಲಿಪೇಟೆ ಆರೋಪಿಸಿದರು.

* ಸಿದ್ದು ಜಾತಿಗಣತಿ ವರದಿ ಬಿಡುಗಡೆ ಮಾಡಲಿಲ್ಲವೇಕೆ?:

₹130 ಕೋಟಿ ಖರ್ಚು ಮಾಡಿ, ಜಾತಿಗಣತಿ ಕೈಗೊಂಡ ಸರ್ಕಾರ ಅದನ್ನು ಅಂಗೀಕರಿಸಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಈಗ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯಿಸುತ್ತಿದ್ದು, 2 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದ್ದಾಗ ಏನು ಮಾಡಿದರು? ಸಮಾನ ಹಕ್ಕುಗಳ ಆಯೋಗ ರಚನೆ, ಜಾತಿ ಜನಗಣತಿ ವರದಿ ಬಿಡುಗಡೆ, 2ಬಿ ಮೀಸಲಾತಿ ಮರುಜಾರಿಗೆ ಒತ್ತಾಯಿಸಿ ಬೆಂಗಳೂರಿನ ವಿಧಾನಸೌಧ ಚಲೋ ಹೋರಾಟವನ್ನು ಆ.19ರಂದು ಎಸ್‌ಡಿಪಿಐನಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಫ್ಸರ್ ಕೊಡ್ಲಿಪೇಟೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಎ.ಆರ್.ತಾಹೀರ್‌, ರಜ್ವಿ ರಿಯಾಜ್ ಅಹಮ್ಮದ್, ಮೊಹಮ್ಮದ್‌ ಮೊಹಸೀನ್, ಅಮೀರ್ ಅಹಮ್ಮದ್, ಜಬೀವುಲ್ಲಾ ಇತರರು ಇದ್ದರು.

- - -

(ಕೋಟ್‌) ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿದ್ದ ತಾವು ಇದೇ ಕ್ಷೇತ್ರದಲ್ಲೇ ಮನೆ ಮಾಡಿದ್ದೇನೆ. ಶಾಡೋ ಶಾಸಕನಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ವಿಧಾನಸೌಧಕ್ಕೆ ಹೋಗಿಲ್ಲ ಎನ್ನುವುದನ್ನು ಹೊರತುಪಡಿಸಿದರೆ, ನಾನು ಕ್ಷೇತ್ರದ ಜನರ ಧ್ವನಿಯಾಗಿರುತ್ತೇನೆ. ಕ್ಷೇತ್ರದಲ್ಲಿ ಬಗೆಹರಿಸಲಾಗದ ಎಲ್ಲ ಸಮಸ್ಯೆಗಳ ವಿರುದ್ಧ ಎಸ್‌ಡಿಪಿಐ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ನಿರಂತರ ಜನಧ್ವನಿಯಾಗಿ ಹೋರಾಡುತ್ತೇವೆ.

- ಅಫ್ಸರ್ ಕೊಡ್ಲಿಪೇಟೆ, ಎಸ್‌ಡಿಪಿಐ ಮುಖಂಡ.

- - -

-10ಕೆಡಿವಿಜಿ1: ದಾವಣಗೆರೆಯಲ್ಲಿ ಸೋಮವಾರ ಎಸ್‌ಡಿಪಿಐ ಮುಖಂಡ ಅಫ್ಸರ್ ಕೊಡ್ಲಿಪೇಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.