ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾವೇರಿ ಜಲಾಶಯದಲ್ಲಿ ಲಭ್ಯವಿರುವ ನೀರು ಕೇವಲ ಕುಡಿಯಲು ಮಾತ್ರ ಬಳಕೆ ಮಾಡಿಕೊಳ್ಳಬೇಕು. ನೀರಿನ ಸಂಗ್ರಹವಿಲ್ಲದ ಕಾರಣ ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿ ರೈತರು ಬೆಳೆ ಬೆಳೆಯ ಬಾರದು ಎಂದಿದ್ದರು. ಈಗ ನಿರ್ವಹಣಾ ಮಂಡಳಿ ತಮಿಳುನಾಡಿನ ರೈತರು ಬೆಳೆ ಬೆಳೆಯಲು ನೀರು ಕೊಡಿ ಎಂದು ಆದೇಶ ಮಾಡಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಪ್ರತಿನಿತ್ಯ 12 ಟಿಎಂಸಿ ನೀರು ಬಿಡುವಂತೆ ನೀಡಿರುವ ಆದೇಶ ಖಂಡಿಸಿ ರೈತ ಸಂಘ ಕಾರ್ಯಕರ್ತರು ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಐದು ದೀಪ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ನೀರು ಬಿಡುವ ಆದೇಶ ಕಾವೇರಿ ಕೊಳ್ಳದ ರೈತರಿಗೆ ಮರಣ ಶಾಸನವಾಗಿದೆ. ಸರ್ಕಾರ ಜಲಾಶಯಗಳಿಂದ ಒಂದು ಹನಿ ನೀರನ್ನು ಹರಿಸಬಾರದು. ತಕ್ಷಣ ಜಲಾಶಯ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿ ಕಾವೇರಿ ನ್ಯಾಯಾಧೀಕರಣ, ನಿರ್ವಹಣಾ ಸಮಿತಿ, ತಮಿಳುನಾಡು ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾವೇರಿ ಜಲಾಶಯದಲ್ಲಿ ಲಭ್ಯವಿರುವ ನೀರು ಕೇವಲ ಕುಡಿಯಲು ಮಾತ್ರ ಬಳಕೆ ಮಾಡಿಕೊಳ್ಳಬೇಕು. ನೀರಿನ ಸಂಗ್ರಹವಿಲ್ಲದ ಕಾರಣ ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿ ರೈತರು ಬೆಳೆ ಬೆಳೆಯ ಬಾರದು ಎಂದಿದ್ದರು.ಈಗ ನಿರ್ವಹಣಾ ಮಂಡಳಿ ತಮಿಳುನಾಡಿನ ರೈತರು ಬೆಳೆ ಬೆಳೆಯಲು ನೀರು ಕೊಡಿ ಎಂದು ಆದೇಶ ಮಾಡಿದೆ. ಈ ಹಿಂದೆಯೇ ರೈತಸಂಘದ ಒತ್ತಾಯದಂತೆ ನಾಲೆಗಳಿಗೆ ನೀರು ಹರಿಸಿ ಕೆರೆ-ಕಟ್ಟೆ ತುಂಬಿಸಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಕಾವೇರಿ, ಹೇಮಾವತಿ ಮತ್ತು ಕಬಿನಿ ಜಲಾಶಯಗಳಲ್ಲಿ ಈಗಿರುವ ನೀರಿನ ಸಂಗ್ರಹವನ್ನು ಅವಲೋಕಿಸಿ ಪ್ರಾಧಿಕಾರ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿದೆ. ಇದಕ್ಕೆಲ್ಲ ನಮ್ಮ ರಾಜಕಾರಣಿಗಳ ಬೇಜವಬ್ದಾರಿತನ ಕಾರಣವಾಗಿದೆ ಎಂದು ಆರೋಪಿಸಿದರು.
ತಾಲೂಕು ಅಧ್ಯಕ್ಷ ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು ಮಾತನಾಡಿ, ಕೆಆರ್ ಎಸ್ ಜಲಾಶಯದಲ್ಲಿ ಸದ್ಯ 29 ಟಿಎಂಸಿ ನೀರಿನ ಸಂಗ್ರಹವಿದೆ. ಪ್ರತಿನಿತ್ಯ 12 ಸಾವಿರ ಕ್ಯುಸೆಕ್ ನೀರು ಹರಿಸಿದರೆ ಕಟ್ಟೆಯಲ್ಲಿ 12 ಟಿಎಂಸಿ ನೀರು ಮಾತ್ರ ಉಳಿಯುತ್ತದೆ. ಇದರಲ್ಲಿ 6 ಟಿಎಂಸಿ ನೀರು ಬಳಕೆಗೆ ಬರುತ್ತದೆ. ಉಳಿದ 6 ಟಿಎಂಸಿ ಡೆಡ್ ಸ್ಟೋರೆಜ್ ಆಗಿ ಉಳಿಯುತ್ತದೆ.ರೈತಸಂಘದ ಒತ್ತಾಯದಂತೆ ಹೇಮಾವತಿ, ಕಾವೇರಿ ಜಲಾಶಯಗಳಿಂದ ನಾಲೆಗಳಿಗೆ ನೀರು ಹರಿಸಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಅವಿವೇಕಿ ರಾಜಕಾರಣಿಗಳು ಧೃಡ ನಿರ್ಧಾರ ತೆಗೆದುಕೊಳ್ಳಲು ವಿಫಲರಾಗಿರುವ ಪರಿಣಾಮ ರೈತರಿಗೆ ಸಂಕಷ್ಟ ಬಂದೊದಗಿದೆ ಎಂದರು.
ಪ್ರತಿಭಟನೆಯಲ್ಲಿ ತಾಲೂಕು ರೈತಸಂಘ ಕಾರ್ಯದರ್ಶಿಗಳಾದ ವೈ.ಜಿ.ರಘು, ಡಾಮಡಹಳ್ಳಿ ಅಶೋಕ್, ಮಾಜಿ ಅಧ್ಯಕ್ಷ ಕೆನ್ನಾಳು ನಾಗರಾಜು, ವಿಜಯಕುಮಾರ್, ಮುಖಂಡರಾದ ಹಾಳಯ್ಯ, ಮುರುಳೀಧರ್, ಕಾಳೇನಹಳ್ಳಿ ಆನಂದ್, ಕೆ.ಪಿ.ಮಹದೇವು, ವೆಂಕಟೇಶ್, ಡಿ.ಕೆ.ದೇವೇಗೌಡ ಇತರರು ಇದ್ದರು.