ಭಕ್ತರು ನೀಡಿದ ದಾನದಿಂದಾಗಿ ಕಾರ್ಯಕ್ರಮ ಯಶಸ್ಸು: ಫಕೀರ ಸಿದ್ಧರಾಮ ಶ್ರೀ

| Published : Feb 11 2024, 01:47 AM IST / Updated: Feb 11 2024, 03:33 PM IST

Swami
ಭಕ್ತರು ನೀಡಿದ ದಾನದಿಂದಾಗಿ ಕಾರ್ಯಕ್ರಮ ಯಶಸ್ಸು: ಫಕೀರ ಸಿದ್ಧರಾಮ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಈಚೆಗೆ ನಡೆದ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ಭಕ್ತರು ತನು, ಮನಃ, ಧನದಿಂದ ಸಹಾಯ ಮಾಡಿದ್ದಾರೆ. ಭಕ್ತರು ದಾನವಾಗಿ ನೀಡಿದ ಹಣ, ವಸ್ತುಗಳ ಲೆಕ್ಕವನ್ನು ಯಾರು ಯಾವಾಗ ಬೇಕಾದರೂ ಬಂದು ಪರಿಶೀಲಿಸಬಹುದು.

ಹುಬ್ಬಳ್ಳಿ: ದಾನವಾಗಿ ಬಂದ ಹಣ, ವಸ್ತುಗಳ ಸದುಪಯೋಗವಾದರೆ ಮಾತ್ರ ಆ ದೇವರು ಸಂತೃಪ್ತನಾಗುತ್ತಾನೆ. ನಾವು ಕೈಗೊಂಡ ಕಾರ್ಯಗಳೂ ಯಶಸ್ವಿಯಾಗುತ್ತವೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಜ. ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಅವರು ಶನಿವಾರ ಇಲ್ಲಿನ ಚವ್ಹಾಣ ಗ್ರೀನ್‌ ಗಾರ್ಡನ್‌ನಲ್ಲಿ ಶಿರಹಟ್ಟಿಯ ಫಕೀರ ಸಿದ್ಧರಾಮೇಶ್ವರ ಶ್ರೀಗಳ ಅಮೃತ ಮಹೋತ್ಸವಕ್ಕೆ ಸಹಾಯ, ಸಹಕಾರ ಹಾಗೂ ಸೇವೆ ಸಲ್ಲಿಸಿದವರಿಗಾಗಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅಭಿನಂದನಾ ನುಡಿಗಳನ್ನಾಡಿದರು.

ನಾವು ಎಲ್ಲಿಯೇ ಕಾರ್ಯಕ್ರಮ ಹಮ್ಮಿಕೊಂಡರೂ ಅದರ ಲೆಕ್ಕಪತ್ರ ಇಡುತ್ತೇವೆ. 2014ರಲ್ಲಿ ಬಾಲೆಹೊಸೂರಿನಲ್ಲಿಯೂ ಇದೇ ಮಾದರಿಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವು. 

ಅದರ ಲೆಕ್ಕಪತ್ರಗಳು ಇಂದಿಗೂ ಇವೆ. ಈಚೆಗೆ ನಡೆದ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ಭಕ್ತರು ತನು, ಮನಃ, ಧನದಿಂದ ಸಹಾಯ ಮಾಡಿದ್ದಾರೆ. ಭಕ್ತರು ದಾನವಾಗಿ ನೀಡಿದ ಹಣ, ವಸ್ತುಗಳ ಲೆಕ್ಕವನ್ನು ಯಾರು ಯಾವಾಗ ಬೇಕಾದರೂ ಬಂದು ಪರಿಶೀಲಿಸಬಹುದು.

ಭಕ್ತರು ನೀಡಿದ ದಾನವನ್ನು ಪುಣ್ಯದ ಕಾರ್ಯಗಳಿಗೆ ಸದ್ವಿನಿಯೋಗಿಸಿದಾಗ ಮಾತ್ರ ಅದಕ್ಕೆ ಮೌಲ್ಯ ಬರಲಿದೆ. ಭಕ್ತರಿಗೂ ನಂಬಿಕೆ ಮೂಡಲಿದೆ. ಭಕ್ತರು ದಾನದ ರೂಪದಲ್ಲಿ ನೀಡಿ ಪುಣ್ಯಪ್ರಾಪ್ತಿ ಮಾಡಿಕೊಳ್ಳುತ್ತಾರೆ. ದಾನದಿಂದ ಮಾತ್ರ ಪಾಪ ಪರಿಹಾರವಾಗಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಫಕೀರ ಸಿದ್ದರಾಮೇಶ್ವರ ಶ್ರೀಗಳ ಅಮೃತ ಮಹೋತ್ಸವ ಕಾರ್ಯಕ್ರಮ ನಾಡಿನಾದ್ಯಂತ ದಾಖಲೆ ಬರೆದಿದೆ. 

ಮಹತ್ವಾಕಾಂಕ್ಷೆಯ ಗುಣವುಳ್ಳ ಫಕೀರ ದಿಂಗಾಲೇಶ್ವರ ಶ್ರೀಗಳ ಗುರುಭಕ್ತಿ ಮತ್ತು ಛಲದಿಂದಲೇ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಗುರುವಿನ ಖುಣ ತೀರಿಸುವ ಸಲುವಾಗಿ ಫಕೀರ ದಿಂಗಾಲೇಶ್ವರರು ಐತಿಹಾಸಿಕ ಕಾರ್ಯಕ್ರಮ ಆಯೋಜಿಸಿ, ಯಶಸ್ವಿಯಾಗಿದ್ದಾರೆ. 

ಬ್ರಹ್ಮ, ವಿಷ್ಣು, ಮಹೇಶ್ವರನಿಗಿಂತ ಗುರು ದೊಡ್ಡವನು. ಅಂತಹ ಗುರುವನ್ನೇ ಮೀರಿಸುವ ಸಾಧನೆಯನ್ನು ಅಮೃತ ಮಹೋತ್ಸವ ಕಾರ್ಯಕ್ರಮದ ಮೂಲಕ ಮಾಡಿ ತೋರಿಸಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, "ನ ಭೂತೋ " ಎಂಬಂತೆ ಫಕೀರ ದಿಂಗಾಲೇಶ್ವರ ಶ್ರೀಗಳು ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ಮಾಡಿದ್ದಾರೆ. 

ನನ್ನ ಇಡೀ ಜೀವನಾವಧಿಯಲ್ಲಿ ಆನೆ ಅಂಬಾರಿಯ ಮೇಲೆ ಶ್ರೀಗಳ ತುಲಾಭಾರ ನೋಡಿರಲಿಲ್ಲ. ನಾನು ಎಲ್ಲೇ ಹೋದರೂ ಹುಬ್ಬಳ್ಳಿಯ ಈ ಐತಿಹಾಸಿಕ ಕಾರ್ಯಕ್ರಮದ ಬಗ್ಗೆ ವಿವಿಧ ಮಠಾಧೀಶರು ಹಾಗೂ ಸಾರ್ವಜನಿಕರು ಮಾತನಾಡುತ್ತಿದ್ದಾರೆ.

ಶಿರಹಟ್ಟಿ ಸಂಸ್ಥಾನ ಮಠಕ್ಕೆ ನೂರು ವರ್ಷದ ಇತಿಹಾಸವಿದೆ. ಎಲ್ಲ ಜಾತಿ, ಧರ್ಮದ ಭಕ್ತರಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಎಲ್ಲ ಜಾತಿ, ಧರ್ಮೀಯರು ಸೇರಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತಾಗಬೇಕು. 

ಇದನ್ನು ದಿಂಗಾಲೇಶ್ವರ ಶ್ರೀಗಳೇ ಮಾಡಬೇಕು. ಇದರಿಂದ ಸಾಮಾಜದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಲು ಸಹಕಾರಿಯಾಗಲಿದೆ ಎಂದರು.

ಇದೇ ವೇಳೆ ಅಮೃತ ಮಹೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.

ರುದ್ರಾಕ್ಷಿ ಮಠದ ಬಸವಲಿಂಗ ಶ್ರೀಗಳು, ಬಮ್ಮನಹಳ್ಳಿ ವಿರಕ್ತ ಮಠದ ಶಿವಯೋಗೀಶ್ವರ ಶ್ರೀಗಳು, ನವನಗರದ ರಾಜಶೇಖರ ಶಿವಾಚಾರ್ಯರು, ರಾಯನಾಳದ ರೇವಣಸಿದ್ಧ ಶ್ರೀಗಳು, ಕಲ್ಯಾಣಪುರ ಮಠದ ಬಸವಣ್ಣಜ್ಜ ಶ್ರೀಗಳು, ಹಿರಿಯ ವರ್ತಕ ಜಿ.ಎಂ. ಚಿಕ್ಕಮಠ.

 ಲೆಕ್ಕ ಪರಿಶೋಧಕ ಎನ್.ಎ. ಚರಂತಿಮಠ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಸರಸ್ವತಿ ಧೋಂಗಡಿ, ಉದ್ಯಮಿ ಉದಯ ಪುರಾಣಿಕಮಠ, ಶರಣಪ್ಪ ಕೊಟಗಿ, ಅನಿಲಕುಮಾರ ಪಾಟೀಲ, ಡಾ. ಅಬ್ದುಲ್ ಕರೀಂಸಾಬ್, ಎ.ಎನ್. ಹಿರೇಮಠ ಸೇರಿದಂತೆ ಹಲವರಿದ್ದರು.

ಲೆಕ್ಕಪತ್ರ ಒಪ್ಪಿಸಿದ ಶ್ರೀಗಳು: ಈಚೆಗೆ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಜರುಗಿದ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮಕ್ಕೆ ಭಕ್ತರು ನೀಡಿದ ಒಟ್ಟು ದೇಣಿಗೆ ಮೊತ್ತವನ್ನು ಫಕೀರ ದಿಂಗಾಲೇಶ್ವರ ಶ್ರೀಗಳು ಬಹಿರಂಗಗೊಳಿಸಿದರು.

ದೇಣಿಗೆ ರೂಪದಲ್ಲಿ ₹1 ಕೋಟಿ 65ಲಕ್ಷಗಳು ಹಣ ಸಂಗ್ರಹವಾಗಿತ್ತು. ತುಲಾಭಾರಕ್ಕೆ ನಾಣ್ಯದ ರೂಪದಲ್ಲಿ ₹76 ಲಕ್ಷ ಸಂಗ್ರಹಿಸಲಾಗಿತ್ತು. ಒಟ್ಟು ₹89.37 ಲಕ್ಷ ಖರ್ಚಾಗಿದೆ. ಭಕ್ತರು ಮಾಡಿದ ವಾಗ್ದಾನದ ₹9.57 ಲಕ್ಷ ಇನ್ನೂ ಬರಬೇಕಿದೆ. 

ಎಲ್ಲ ಖರ್ಚು ವೆಚ್ಚ ಸೇರಿ ₹14.94 ಲಕ್ಷ ಉಳಿದಿದೆ. ದವಸ, ಧಾನ್ಯ, ಜೋಳಿಗೆಯಲ್ಲಿ ಹಾಕಲಾದ ಹಣದ ಲೆಕ್ಕವನ್ನು ಪ್ರತ್ಯೇಕವಾಗಿ ನೀಡಲಾಗುವುದು ಎಂದರು. ಭಕ್ತರು ಯಾವಾಗ ಬೇಕಾದರೂ ಬಂದು ಎಲ್ಲ ಲೆಕ್ಕಪತ್ರವನ್ನು ನೋಡಬಹುದು ಎಂದರು.