ಸಸಿಗಳನ್ನು ನೆಟ್ಟು, ಪೋಷಿಸಿ ಪರಿಸರ ರಕ್ಷಣೆ ಮಾಡಿ: ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಆಶಾಜ್ಯೋತಿ

| Published : Jun 27 2024, 01:09 AM IST

ಸಸಿಗಳನ್ನು ನೆಟ್ಟು, ಪೋಷಿಸಿ ಪರಿಸರ ರಕ್ಷಣೆ ಮಾಡಿ: ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಆಶಾಜ್ಯೋತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಸಿಗಳನ್ನು ನೆಟ್ಟು, ಪೋಷಿಸಿ, ಮರವಾಗಿ ಬೆಳೆಸುವ ಮೂಲಕ ಪರಿಸರವನ್ನು ರಕ್ಷಿಸಬೇಕು ಎಂದು ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಆಶಾಜ್ಯೋತಿ ಹೇಳಿದರು. ಹೊಳೆನರಸೀಪುರದಲ್ಲಿ ಸಾವಿರ ಗಿಡ ನೆಡುವ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಸಾವಿರ ಗಿಡ ನೆಡುವ ಅಭಿಯಾನ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಗಿಡ ಮರಗಳು ಇಲ್ಲದ ಕಡೆಗಳಲ್ಲಿ ಅನೇಕ ಪ್ರಕೃತಿ ವಿಕೋಪಗಳಾಗುತ್ತಿದೆ. ದೇಶದ ರಾಜಧಾನಿ ದೆಹಲಿಯಲ್ಲಿ 51 ಡಿಗ್ರಿ ಉಷ್ಣಾಂಶ ಇದೆ. ಮುಂದೆ ಇದೇ ರೀತಿ ಇಲ್ಲೂ ಆಗಬಹುದು. ಆದ್ದರಿಂದ ಸಸಿಗಳನ್ನು ನೆಟ್ಟು, ಪೋಷಿಸಿ, ಮರವಾಗಿ ಬೆಳೆಸುವ ಮೂಲಕ ಪರಿಸರವನ್ನು ರಕ್ಷಿಸಬೇಕು ಎಂದು ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಆಶಾಜ್ಯೋತಿ ಹೇಳಿದರು.

ಪಟ್ಟಣದ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ 2024/25 ನೇ ಸಾಲಿನಲ್ಲಿ ಸಾವಿರ ಗಿಡ ನೆಡುವ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ‘ಪರಿಸರ ದಿನ ಸಸಿ ನೆಟ್ಟು ಸುಮ್ಮನಾಗಬಾರದು. ಒಬ್ಬೊಬ್ಬರು ಒಂದೊಂದು ಸಸಿನೆಟ್ಟು ಮರವನ್ನಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಗಿಡ ಮರಗಳು ನಮ್ಮ ಜೀವನಕ್ಕೆ ಅವಶ್ಯವಾದ ಆಮ್ಲಜನಕ ನೀಡುತ್ತದೆ. ಆಮ್ಲಜನಕ ಇಲ್ಲದಿದ್ದರೆ ನಾವು ಬದುಕಲು ಸಾಧ್ಯವೇ ಆಗುವುದಿಲ್ಲ, ಆದ್ದರಿಂದ ಸಸಿಗಳನ್ನು ನೆಟ್ಟು ಬೆಳೆಸಿ’ ಎಂದು ಸಲಹೆ ನೀಡಿದರು.

ಎನ್.ಎಸ್.ಎಸ್ ಅಧಿಕಾರಿ ಫಕೀರಮ್ಮ ಮುರುಗೋಡು ಮಾತನಾಡಿ, ‘ನಾವು ನಮ್ಮ ಸುತ್ತಲ ಪರಿಸರವನ್ನು ಹಾಳು ಮಾಡುತ್ತಿದ್ದೇವೆ, ಪರಿಸರ ಕಾಪಾಡಿಕೊಳ್ಳಬೇಕು. ಪರಿಸರದಲ್ಲಿ ಪ್ರತಿದಿನ ನಮ್ಮ ವಾಹನಗಳ ವಿಷಾನಿಲ ಸೇರುತ್ತಿದೆ. ಗಿಡಮರಗಳು ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಆಮ್ಲಜನಕ ನೀಡುತ್ತದೆ. ಆದ್ದದಿಂದ ಗಿಡಗಳನ್ನು ಬೆಳೆಸಬೇಕು ಎಂದು ತಿಳಿಸಿದರು.

ಪ್ರಾಧ್ಯಾಪಕ ಕೃಷ್ಣಮೂರ್ತಿ ಮಾತನಾಡಿ, ‘ಜೂ.26 ಅನ್ನು ಮಾದಕ ವ್ಯಸನ ಜಾಗೃತಿ ದಿನವನ್ನಾಗಿ ಆಚರಿಸಲು ಸರ್ಕಾರ ತಿಳಿಸಿದೆ. ದೇಶದಲ್ಲಿ 16 ಕೋಟಿ ಜನರು ಮದ್ಯಪಾನ ಮಾಡುತ್ತಾರೆ. ಇದರಲ್ಲಿ ಶೇ 5 ರಷ್ಟು ಜನರು ಮದ್ಯಮಾಪಕ್ಕೆ ದಾಸರಾಗಿದ್ದಾರೆ. ಯಾವುದೇ ಮಾದಕ ದ್ರವ್ಯಕ್ಕೆ ವ್ಯಸನಿಗಳಾದರೆ ಬದುಕು ನಾಶ ಆಗುತ್ತದೆ. ಆದ್ದರಿಂದ ಮಾದಕ ವ್ಯಸನದಿಂದ ದೂರ ಇರಿ ಎಂದರು. ಮಾದಕವಸ್ತು ಬೇಡ ನಮಗೆ ಜೀವನ ಬೇಕು’ ಎಂದು ಪ್ರಮಾಣ ವಚನ ಬೋಧಿಸಿದರು.

ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಪ್ರತಿಜ್ಞೆ ಮಾಡಿದರು.

ಪುರಸಭೆ ಆರೋಗ್ಯಾಧಿಕಾರಿ ವಸಂತ್, ಪ್ರಾಧ್ಯಾಪಕರಾದ ಶ್ವೇತಾ ನಾಯಕ್, ಜಯಚಂದ್ರ, ಅಶೋಕ್, ಗಣೇಶ್, ರೋಟರಿ ಸಂಸ್ಥೆಯ ನಿಯೋಜಿತ ಅಧ್ಯಕ್ಷ ಸಂತೋಷ್ ಕುಮಾರ್ ಭಾಗವಹಿಸಿದ್ದರು.