ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿ ತಾಲೂಕಿನಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರದವರೆಗೆ ನಿರಂತರ ಬಿರುಸಿನ ಮಳೆಯಾಗಿದ್ದು ಕೆಲವೆಡೆ ಹೆಚ್ಚಿನ ಹಾನಿ ಸಂಭವಿಸಿದೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.ಕೊಕ್ಕರ್ ಕಲ್ ಪೆಟ್ರೋಲ್ ಪಂಪ್ ಬಳಿ ಹಾಗೂ ಮೂಲ್ಕಿ ಬಸ್ಸು ನಿಲ್ದಾಣದ ಬಳಿ ಹೆದ್ದಾರಿ ರಸ್ತೆಯಲ್ಲಿ ಮಳೆ ನೀರು ಹರಿದು ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಮೂಲ್ಕಿ ತಾಲೂಕಿನ ಪಡುಪಣಂಬೂರು ಪಂಚಾಯಿತಿ ವ್ಯಾಪ್ತಿಯ ಬೆಳ್ಳಯರು ಗ್ರಾಮದ ಕೊಲ್ನಾಡು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಭಾಗದಲ್ಲಿ ನೀರು ಹರಿದು, ಹೆದ್ದಾರಿಯ ಕೆಳಭಾಗದ ತೋಡು ತುಂಬಿ ನಾರಾಯಣ ಪೂಜಾರಿ ಮತ್ತು ಪದ್ಮಿನಿ ಶೆಡ್ತಿ ಎಂಬವರ ಮನೆಯ ಅಂಗಳದಲ್ಲಿ ನೀರು ತುಂಬಿತ್ತು. ಮನೆಯವರಿಗೆ ಹೊರಗೆ ಬರಲು ತೊಂದರೆಯಾಗಿದ್ದು ನೀರು ಹೋಗಲು ವ್ಯವಸ್ಥೆ ಮಾಡಲಾಗಿದೆ. ಮನೆಗೆ ಯಾವುದೇ ಹಾನಿ ಆಗಿಲ್ಲ.
ಕಿನ್ನಿಗೋಳಿ ಸಮೀಪದ ಉಳೆಪಾಡಿ ಗ್ರಾಮದ ಉಷಾ ಎಂಬವರ ಮನೆಯ ಮಾಡಿನ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದೆ.ಭಾರಿ ಮಳೆಗೆ ಮೂಲ್ಕಿಯ ಪ್ರಧಾನ ಅಂಚೆ ಕಚೇರಿ ರಸ್ತೆಯಲ್ಲಿ ವಿದ್ಯುತ್ ತಂತಿಗೆ ಭಾರಿ ಗಾತ್ರದ ಉಪ್ಪಳಿಗೆ ಮರ ಬಿದ್ದು ಮೂಲ್ಕಿ ಪರಿಸರದಲ್ಲಿ ವಿದ್ಯುತ್ ಅಸ್ತವ್ಯಸ್ತವಾಗಿತ್ತು. ಮರ ಬಿದ್ದ ಕಾರಣ ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು ಕೂಡಲೇ ಸ್ಥಳಕ್ಕೆ ಮೂಲ್ಕಿ ಮೆಸ್ಕಾಂ ಇಲಾಖೆ ಹಾಗೂ ನಗರ ಪಂಚಾಯಿತಿ ಸಿಬಿಬಂದಿ ಭೇಟಿ ನೀಡಿ ಮರವನ್ನು ತೆರವುಗೊಳಿಸಿದ್ದಾರೆ. ಹಾನಿಗೀಡಾದ ಪ್ರದೇಶಗಳಿಗೆ ಮೂಲ್ಕಿ ತಾಲೂಕು ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
.