ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಜ.1 ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ದೌರ್ಜನ್ಯ ಹಾಗೂ ಹೀನಾಯ ಬಲಪ್ರಯೋಗ ನಡೆಸಿ ಬಂಧಿಸಿದ್ದಲ್ಲದೆ, ಕೊಲೆ ಯತ್ನ, ಕೊಲೆ ಬೆದರಿಕೆಯಂತಹ ಮೊಕದ್ದಮೆ ಹೂಡಿರುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರ ಬಂಧನ ಖಂಡಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯವರು ನಗರದ ರಾಮಸ್ವಾಮಿ ವೃತ್ತದಲ್ಲಿ ಶನಿವಾರ ಪ್ರತಿಭಟಿಸಿದರು.

ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಜ.1 ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ದೌರ್ಜನ್ಯ ಹಾಗೂ ಹೀನಾಯ ಬಲಪ್ರಯೋಗ ನಡೆಸಿ ಬಂಧಿಸಿದ್ದಲ್ಲದೆ, ಕೊಲೆ ಯತ್ನ, ಕೊಲೆ ಬೆದರಿಕೆಯಂತಹ ಮೊಕದ್ದಮೆ ಹೂಡಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದು ನ್ಯಾಯಯುತ ಹೋರಾಟ ಹತ್ತಿಕ್ಕುವ ಸರ್ಕಾರದ ಹತಾಶ ಕ್ರಮ. ಸಾರ್ವಜನಿಕ ಹಿತಾಸಕ್ತಿಗೆ ಸಂಪೂರ್ಣ ವಿರುದ್ಧವಾಗಿರುವ ಜನ ವಿರೋಧಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗುತ್ತಿದೆ. ಇದನ್ನು ವಿರೋಧಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಆಗ್ರಹಿಸಿ ಕಳೆದ 106 ದಿನಗಳಿಂದ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಸರ್ಕಾರದ ಮೇಲೆ ಒತ್ತಡ ಹೇರಲು ಸಚಿವ ಎಂ.ಬಿ. ಪಾಟೀಲ್ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾಗ ಪೊಲೀಸರು ಅನಾಗರಿಕರಂತೆ ವರ್ತಿಸಿದ್ದಾರೆ ಎಂದು ಅವರು ಕಿಡಿಕಾರಿದರು.

ಜನರಿಗೆ ಲಭ್ಯವಾಗಬೇಕಾದ ಸಾರ್ವಜನಿಕ ಆರೋಗ್ಯ ಸೇವೆಗಾಗಿ ನಡೆಯುತ್ತಿರುವ ಜನಾಂದೋಲನ ಕುಗ್ಗಿಸಲು ಸರ್ಕಾರ ಕೈಗೊಂಡಿರುವ ಕ್ರಮ ಅತ್ಯಂತ ಹೀನ ಮತ್ತು ಅಧಿಕಾರಶಾಹಿಯಾಗಿದೆ. ಜನರನ್ನು ಭಯಭೀತಗೊಳಿಸಿ ಹೋರಾಟ ಇನ್ನಷ್ಟು ವ್ಯಾಪಿಸುವುದನ್ನು ತಡೆಯುವುದೇ ಈ ಬಂಧನದ ಉದ್ದೇಶ ಎಂದು ಅವರು ಆರೋಪಿಸಿದರು.

ಬಂಧಿತರಾಗಿರುವ ಎಲ್ಲಾ ನಾಯಕರು ಹಾಗೂ ಮಹಿಳಾ ಕಾರ್ಯಕರ್ತರನ್ನು ತಕ್ಷಣ ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಹೋರಾಟಗಾರರ ಮೇಲಿನ ಎಲ್ಲಾ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಕೂಡಲೇ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಿಸಬೇಕು. ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆಯ ಎಲ್ಲಾ ಪ್ರಸ್ತಾಪಗಳನ್ನು ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಎಂ. ಶಶಿಧರ್, ಜಿಲ್ಲಾಧ್ಯಕ್ಷ ಎಚ್.ಎಂ. ಬಸವರಾಜು, ಮುಖಂಡರಾದ ಉಗ್ರನರಸಿಂಹೇಗೌಡ, ಎಸ್.ಎನ್. ಸ್ವಾಮಿ, ಕೆಲ್ಲಹಳ್ಳಿ ರಾಮಣ್ಣ, ಶಿವಣ್ಣ ನಾಯಕ, ಮಹೇಶ್, ಬಿ. ರವಿ, ಜಯಲಕ್ಷ್ಮೀ, ಸುಮತಿ, ನಾಗರತ್ನ, ಮಂಗಳಮ್ಮ, ಚಂದ್ರಶೇಖರ್ ಮೇಟಿ, ಟಿ.ಆರ್. ಸುನಿಲ್, ಸೀಮಾ, ನೀತುಶ್ರೀ, ಪುಷ್ಪಾ ಮೊದಲಾದವರು ಇದ್ದರು.

ಸಾರ್ವಜನಿಕ ವಿವಿಗಳ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಲಿ

ಮೈಸೂರು: ಸಾರ್ವಜನಿಕ ವಿವಿಗಳು ಅವನತಿಯ ಹಾದಿಯಲ್ಲಿದ್ದು, ಸರ್ಕಾರ ಅವುಗಳ ಪುನಶ್ಚೇತನಕ್ಕೆ ಗಮನ ಹರಿಸಬೇಕು ಎಂದು ಜನಾಂದೋಲನ ಮಹಾ ಮೈತ್ರಿ ರಾಜ್ಯ ಸಂಚಾಲಕ ಉಗ್ರ ನರಸಿಂಹೇಗೌಡ ಆಗ್ರಹಿಸಿದರು.

ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಸ್ವತಃ ವೈದ್ಯರಾಗಿದ್ದಾರೆ. ಆದರೆ ಅವರು ನಮ್ಮ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಗಳಾಗಿರುವ ಸಾರ್ವಜನಿಕ ವಿವಿಗಳನ್ನು ಬಲಪಡಿಸುವ ಬದಲು ಅವುಗಳನ್ನು ಮೌನವಾಗಿ ಕೊಲ್ಲುವ ಕೆಲಸ ಮಾಡುತ್ತಿದ್ದಾರೆ. ಇಂತಹ ವಿವಿಗಳನ್ನು ನಿರ್ಲಕ್ಷಿಸಿ ಕೇವಲ ವಿದೇಶ ಪ್ರವಾಸ ಹಾಗೂ ಖಾಸಗಿ ವಿವಿಗಳ ಉತ್ತೇಜನದಲ್ಲಿ ತೊಡಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಆರೋಪಿಸಿದರು.

ಕಳೆದ ಎರಡೂವರೆ ವರ್ಷಗಳಲ್ಲಿ ನಾಲ್ವರು ಪ್ರಧಾನ ಕಾರ್ಯದರ್ಶಿಗಳನ್ನು ಬದಲಾಯಿಸಿದ್ದಾರೆ. ವಿವಿಗಳ ಬೋಧಕ ಸಿಬ್ಬಂದಿಗೆ ನೀಡಲು ಹಣವಿಲ್ಲ ಎಂದು ದೂರಿದರು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ ಮಾತನಾಡಿ, ಮಂಡ್ಯ ವಿವಿ ಅವನತಿ ಹೊಂದುತ್ತಿದ್ದು, ಕೆಲವೇ ಲಕ್ಷ ರು.ಗಳಲ್ಲಿ ನಿರ್ಮಿಸಬಹುದಾದ ಕಮಾನಿಗೆ 3 ಕೋಟಿ ವೆಚ್ಚ ಮಾಡಲಾಗಿದೆ. ಆದರೆ, ಪೌರ ಕಾರ್ಮಿಕರಿಗೆ ಕಳೆದ ಹಲವಾರು ತಿಂಗಳಿಂದ ವೇತನ ನೀಡಲು ಇವರು ಹಣವಿಲ್ಲ ಎನ್ನುತ್ತಾರೆ. ಈ ಬಗ್ಗೆ ಕುಲಪತಿ, ರಾಜ್ಯಪಾಲರು ಅಥವಾ ಉನ್ನತ ಶಿಕ್ಷಣ ಸಚಿವರು ತಲೆ ಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಅಭಿರುಚಿ ಗಣೇಶ್, ಟಿ.ಆರ್. ಸುನಿಲ್ ಇದ್ದರು.