ದಲಿತ ಹಕ್ಕುಗಳಿಗೆ ಹೋರಾಟ ನಡೆಸಿದ ಬಾಬೂಜಿ ಕುರಿತು ಸಾಹಿತ್ಯ ಇರಲಿಲ್ಲ. ಈ ಕೊರತೆ ನೀಗಿಸಲು ನಮ್ಮ ಕೇಂದ್ರದಿಂದ ಈಗಾಗಲೇ 8 ಪ್ರಕಟಣೆಗಳು ಹೊರ ಬಂದಿವೆ. ಶೀಘ್ರದಲ್ಲೇ ಇನ್ನೂ 7 ಸಂಪುಟಗಳು ಹೊರಬರಲಿವೆ. ಇದರಿಂದ ಬಾಬೂಜಿ ಕುರಿತು ಅಧ್ಯಯನ, ಸಂಶೋಧನೆಗೆ ಆಕರಗಳು ದೊರೆಯಲಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಡಾ.ಬಾಬು ಜಗಜೀವನರಾಮ್ ಅವರಿಗೆ ಸಂಬಂಧಿಸಿದ 7 ಸಂಪುಟ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮೈಸೂರು ವಿವಿ ಡಾ.ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಕೆ. ಸದಾಶಿವ ತಿಳಿಸಿದರು.

ಮೈಸೂರು ವಿವಿ ಮಾನಸಗಂಗೋತ್ರಿಯ ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋದನ ಮತ್ತು ವಿಸ್ತರಣ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಭಾರತದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಕುರಿತು ವಿಚಾರ ಸಂಕಿರಣದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಲಿತ ಹಕ್ಕುಗಳಿಗೆ ಹೋರಾಟ ನಡೆಸಿದ ಬಾಬೂಜಿ ಕುರಿತು ಸಾಹಿತ್ಯ ಇರಲಿಲ್ಲ. ಈ ಕೊರತೆ ನೀಗಿಸಲು ನಮ್ಮ ಕೇಂದ್ರದಿಂದ ಈಗಾಗಲೇ 8 ಪ್ರಕಟಣೆಗಳು ಹೊರ ಬಂದಿವೆ. ಶೀಘ್ರದಲ್ಲೇ ಇನ್ನೂ 7 ಸಂಪುಟಗಳು ಹೊರಬರಲಿವೆ. ಇದರಿಂದ ಬಾಬೂಜಿ ಕುರಿತು ಅಧ್ಯಯನ, ಸಂಶೋಧನೆಗೆ ಆಕರಗಳು ದೊರೆಯಲಿವೆ ಎಂದರು.

ವಿಚಾರ ಸಂಕಿರಣ ಉದ್ಘಾಟಿಸಿದ ದೇವರತ್ನ ಫೌಂಡೇಷನ್ ಸಂಸ್ಥಾಪಕ, ವಕೀಲ ಎಂ. ಶಿವಪ್ರಸಾದ್ ಮಾತನಾಡಿ, ಸಾಮಾಜಿಕ ನ್ಯಾಯ ಪರಿಣಮಕಾರಿ ಜಾರಿಯಿಂದ ಡಾ. ಅಂಬೇಡ್ಕರ್ ಕನಸು ಸಹಕಾರಗೊಳ್ಳಲಿದೆ. ಸಂವಿಧಾನವನ್ನು ಪ್ರತಿಯೊಬ್ಬರು ಓದಬೇಕು. ಈ ಕುರಿತು ಅರಿವು ಮೂಡಿಸುವಲ್ಲಿ ವ್ಯವಸ್ಥೆಯೇ ವಿಫಲವಾಗಿದೆ. ಸಂವಿಧಾನವನ್ನು ಅರ್ಥ ಮಾಡಿಕೊಳ್ಳದಿದ್ದರೆ ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ನೈತಿಕತೆ ಇರಲ್ಲ. ಜಾತಿ, ಧರ್ಮ ಕಾರಣಕ್ಕಾಗಿ ಹಲ್ಲೆ, ದೌರ್ಜನ್ಯ, ಕೊಲೆಗಳು ನಡೆಯುತ್ತಿರುವುದು ಸಮಾಜ ತಲೆತಗ್ಗಿಸುವಂತಹ ಸಂಗತಿ ಎಂದರು.

ಉತ್ತರಪ್ರದೇಶದ ಅಲಹಾಬಾದ್ ವಿವಿ ಜಿ.ಬಿ. ಪಂತ್ ಸಮಾಜ ವಿಜ್ಞಾನ ಸಂಸ್ಥೆಯ ಡಾ. ಚಂದ್ರಯ್ಯ ಗೋಪಾನಿ, ಮೈಸೂರು ವಿವಿ ಕಾನೂನು ಶಾಲೆಯ ಉಪನ್ಯಾಸಕಿ ಎ. ಅನನ್ಯ, ಜೆಎಸ್‌ಎಸ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಎ.ಟಿ. ಜಗದೀಶ್, ಎಸ್. ನರೇಂದ್ರ, ರಾಜ್ಯ ಮುಕ್ತ ವಿವಿ ಸಹ ಪ್ರಾಧ್ಯಾಪಕಿ ಡಾ.ಎಸ್.ಎಸ್. ಜಾಹ್ನವಿ ಮೊದಲಾದವರು ಇದ್ದರು.

7ಕ್ಕೆ ಸಾರ್ವಜನಿಕ ಸಮಾಲೋಚನಾ ಸಭೆ ಮುಂದೂಡಿಕೆ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಪರಿಷ್ಕೃತ ಹಾಗೂ 2026-27ನೇ ಸಾಲಿನ ಅಂದಾಜು ಆಯವ್ಯಯವನ್ನು ತಯಾರಿಸಲು ಮೈಸೂರು ನಗರದ ಅಭಿವೃದ್ಧಿ ದೃಷ್ಟಿಯಿಂದ ಆಯವ್ಯಯದ ಬಗ್ಗೆ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲು ಮಾಜಿ ಮೇಯರ್ ಮತ್ತು ಮಾಜಿ ಉಪ ಮೇಯರ್ ಗಳೊಂದಿಗೆ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಜ.5 ರಂದು ನಿಗದಿಪಡಿಸಲಾಗಿತ್ತು. ಆದರೆ, ಮುಖ್ಯಮಂತ್ರಿಗಳು ಅಂದು ಮೈಸೂರು ನಗರಕ್ಕೆ ಆಗಮಿಸುತ್ತಿರುವುದರಿಂದ ಸಭೆಯನ್ನು ಮುಂದೂಡಲಾಗಿದ್ದು, ಸದರಿ ಸಭೆಯನ್ನು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳೊಂದಿಗೆ ಮೈಸೂರು ಮಹಾನಗರ ಪಾಲಿಕೆಯ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರು ಜ.7ರ ಬೆಳಗ್ಗೆ 11.30ಕ್ಕೆ ನಡೆಸಲು ತೀರ್ಮಾನಿಸಲಾಗಿರುತ್ತದೆ. ಆದ್ದರಿಂದ ಈ ಸಭೆಗೆ ಹಾಜರಾಗಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಲು ಕೋರಲಾಗಿದೆ ಎಂದು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.