ಕುಷ್ಟಗಿ: ತಾಲೂಕಿನ ನಿರಲೂಟಿ ಗ್ರಾಮದ 1ನೇ ಅಂಗನವಾಡಿ ಕೇಂದ್ರಕ್ಕೆ ಕಾಯಂ ಅಂಗನವಾಡಿ ಕಾರ್ಯಕರ್ತೆಯನ್ನು ನೇಮಕಾತಿ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಅಂಗನವಾಡಿ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮಾತನಾಡಿ, ನಮ್ಮ ಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ನಿವೃತ್ತಿ ಹೊಂದಿ ಸುಮಾರು ಒಂದು ವರ್ಷಗಳಾಗುತ್ತಾ ಬಂದರೂ ಕಾರ್ಯಕರ್ತೆಯನ್ನು ನೇಮಕಾತಿ ಮಾಡಿಕೊಂಡಿಲ್ಲ, ಸಿಡಿಪಿಒ ಯಲ್ಲಮ್ಮ ಹಂಡಿ ಅಂಗನವಾಡಿ ಕೇಂದ್ರದ ಬಗ್ಗೆ ಸಂಪೂರ್ಣ ನಿರ್ಲಕ್ಷ ವಹಿಸಿದ್ದಾರೆ ಒಂದು ದಿನವೂ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿಲ್ಲ, ಅಂಗನವಾಡಿ ಕೇಂದ್ರದ ಸ್ಥಿತಿಗತಿ ಗಮನಿಸಿಲ್ಲ ಹಾಗೂ ಅಂಗನವಾಡಿ ಕಾರ್ಯಕರ್ತೆ ನೇಮಕಾತಿ ಕುರಿತು ವಿಚಾರ ಮಾಡಿದಾಗ ಹಾರಿಕೆ ಉತ್ತರ ನೀಡುವ ಮೂಲಕ ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ಪ್ರಭಾರಿ ಅಂಗನವಾಡಿ ಕಾರ್ಯಕರ್ತೆ(ಬಿಎಲ್ಓ) ಚುನಾವಣಾ ಕೆಲಸ ಮಾಡುತ್ತಿದ್ದು, ಇದರ ಜತೆಗೆ ಎರಡು ಅಂಗನವಾಡಿ ಕೆಲಸ ಅವರ ಮೇಲಿರುವದರಿಂದ ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ, ಕೇವಲ ಮೂರು ದಿನಗಳ ಕಾಲ ಮಾತ್ರ ಈ ಅಂಗನವಾಡಿ ಕೇಂದ್ರಕ್ಕೆ ಬರುತ್ತಿದ್ದು, ಇನ್ನೂಳಿದ ಮೂರು ದಿನ ನಮ್ಮ ಮಕ್ಕಳು ಅಭ್ಯಾಸ ಮಾಡದೆ ಊಟ ಮಾಡಿ ಹೋಗುವ ಪರಿಸ್ಥಿತಿ ಎದುರಾಗಿದ್ದು ಇಲಾಖೆ ಅಧಿಕಾರಿಗಳಿಂದ ನಮ್ಮ ಮಕ್ಕಳ ಭವಿಷ್ಯಕ್ಕೆ ಹಿನ್ನಡೆ ಉಂಟಾಗುತ್ತಿದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಸಿಡಿಪಿಒ ಕಚೇರಿ ಮೇಲ್ವಿಚಾರಕಿ ಭುವನೇಶ್ವರಿ ಸಂಕಾನಟ್ಟಿ,ಮಂಜುಳಾ ಹಕ್ಕಿ, ಅನ್ನಪೂರ್ಣ ಪಾಟೀಲ,ರೇಣುಕಾ ಗುಡಿಸಲಮನಿ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಪಟ್ಟಾಗ ಪ್ರತಿಭಟನಾಕಾರರು ಸ್ಥಳಕ್ಕೆ ಸಿಡಿಪಿಒ ಅಧಿಕಾರಿ ಬರಬೇಕು ಶಾಶ್ವತ ಪರಿಹಾರ ನೀಡುವವರೆಗೂ ಪ್ರತಿಭಟನೆ ಮಾಡಲಾಗುತ್ತದೆ, ಮುಂದಿನ ದಿನಗಳಲ್ಲಿ ಸಿಡಿಪಿಒ ಕಚೇರಿ ಮುಂದೆಯೂ ಧರಣಿ ಮಾಡಲಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನಾಗರಾಜ ಹಡಪದ, ದೊಡ್ಡಪ್ಪ ಚಳ್ಳಾರಿ, ಅಮರಪ್ಪ ನಿಡಗುಂದಿ, ಮಹಾಂತೇಶ ಹಡಪದ, ಮುದುಕಪ್ಪ ಪೂಜಾರ ಸೇರಿದಂತೆ ಅನೇಕರು ಇದ್ದರು.
ಹಿರೇಮನ್ನಾಪೂರ ವಲಯದ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿ, ನಾನು ಈ ವಲಯಕ್ಕೆ ಹೊಸದಾಗಿ ಬಂದಿದ್ದು ಮೇಲಾಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮಕ್ಕೆ ಮುಂದಾಗುತ್ತೇನೆ ಎಂದರು.
ಹಿರಿಯ ಮೇಲ್ವಿಚಾರಕಿ ಮಂಜುಳಾ ಹಕ್ಕಿ ಮಾತನಾಡಿ,ನಿರಲೂಟಿ ಅಂಗನವಾಡಿ ಕೇಂದ್ರಕ್ಕೆ ಓರ್ವ ಸಹಾಯಕಿಯನ್ನು ಬಡ್ತಿ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವಂತೆ ಈಗಾಗಲೆ ಡಿಡಿ ಕಚೇರಿಗೆ ಕಳುಹಿಸಲಾಗಿದೆ. ಅಲ್ಲಿಂದ ಇನ್ನೂ ಯಾವುದೆ ತರಹದ ಆದೇಶ ಬಂದಿರುವುದಿಲ್ಲ ಎಂದು ತಿಳಿಸಿದರು.
ಕುಷ್ಟಗಿ ತಾಲೂಕಿನ ನಿರಲೂಟಿಯ ಅಂಗನವಾಡಿ ಕೇಂದ್ರ ಕಾರ್ಯಕರ್ತೆ ನೇಮಕಾತಿ ವಿಚಾರವಾಗಿ ಸಹಾಯಕಿಯ ಪ್ರಮೋಷನ್ ಇದ್ದಲ್ಲಿ ರಾಜ್ಯಮಟ್ಟದ ಅಧಿಕಾರಿಯೊಬ್ಬರ ಅಧ್ಯಕ್ಷತೆಯಲ್ಲಿ ಪ್ರಮೋಷನ್ ಮಾಡಿ ಆದೇಶ ಮಾಡಲಾಗುತ್ತದೆ ಅಥವಾ ಹೊಸ ನೇಮಕಾತಿ ಅರ್ಜಿ ಕರೆದು ನೇಮಕಾತಿಗೆ ಮುಂದಾಗುತ್ತೇವೆ ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಇಲಾಖೆ ಡಿಡಿ ಪರಶುರಾಮ ಶೆಟ್ಟೆಪ್ಪನವರು ತಿಳಿಸಿದ್ದಾರೆ.