ಗುಂಬಳ್ಳಿ ಗ್ರಾಪಂ ಚುನಾವಣೆ ರದ್ದು ಖಂಡಿಸಿ ಪ್ರತಿಭಟನೆ

| Published : Jan 03 2025, 12:31 AM IST

ಗುಂಬಳ್ಳಿ ಗ್ರಾಪಂ ಚುನಾವಣೆ ರದ್ದು ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಗುರುವಾರ ಅಧ್ಯಕ್ಷರ ಚುನಾವಣೆಯನ್ನು ಏಕಾಏಕಿ ಮುಂದೂಡಿರುವ ಕ್ರಮವನ್ನು ಖಂಡಿಸಿ ಕೆಲ ಸದಸ್ಯರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ ನಿಗದಿಯಾಗಿದ್ದರೂ ಏಕಾಏಕಿ ದಿಢೀರ್ ಅಂತ ಅಧ್ಯಕ್ಷರ ಚುನಾವಣೆ ಮುಂದೂಡಿರುವ ಕ್ರಮವನ್ನು ಖಂಡಿಸಿ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಗುರುವಾರ ಸಂಜೆವರೆಗೂ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿಗೆ ಆಗಮಿಸಿದ 14 ಮಂದಿ ಸದಸ್ಯರು ಮಾತನಾಡಿ, ಗ್ರಾಪಂ ಅಧ್ಯಕ್ಷರ ವಿರುದ್ಧ ನ.27 ರಂದು ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ನಡೆದ ಅವಿಶ್ವಾಸ ನಿರ್ಣಯದಲ್ಲಿ ಗ್ರಾಪಂ 14 ಮಂದಿ ಸದಸ್ಯರು ಭಾಗವಹಿಸಿ ಅವಿಶ್ವಾಸದ ಪರ ಮತ ಚಲಾಯಿಸಿದ್ದರಿಂದ ಅಧ್ಯಕ್ಷೆಯಾಗಿದ್ದ ಮೀನಾ ಗೋವಿಂದ ಅವರ ಸ್ಥಾನ ಪದಚ್ಯುತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನವು ಖಾಲಿಯಾಗಿತ್ತು. ಇದರ ವಿರುದ್ಧ ಅಧ್ಯಕ್ಷರು ಹೈ ಕೋರ್ಟಿನಲ್ಲಿ ದಾವೆ ಹೂಡಿದ್ದರು. ಇದಾದ ಬಳಿಕ ಡಿ.12 ರಂದು ಗುಂಬಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್‌ರನ್ನು ಗೊತ್ತುಪಡಿಸಿದ ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಇದಾದ ಬಳಿಕ ಜ.2 ರಂದು ಚುನಾವಣೆ ನಡೆಸಲು ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ ಇದರ ನಡುವೆಯೆ ಡಿ.31 ರಂದು ದಾವೆ ಹೂಡಿರುವುದರಿಂದ ಸದರಿ ಅಧ್ಯಕ್ಷರ ಚುನಾವಣೆಯ ದಿನಾಂಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ತಿಳಿವಳಿಕೆ ಪತ್ರ ನೀಡಲಾಗಿದೆ ಎಂದು ತಿಳಿಸಿದರು.

ಸಂಪೂರ್ಣವಾಗಿ ಇಲಾಖೆಯ ವತಿಯಿಂದ ತಪ್ಪಾಗಿದೆ. ಹಾಗಾಗಿ ಇದಕ್ಕೆ ಹೊಣೆಗಾರರು ಯಾರು, ಪಂಚಾಯಿತಿಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬಗೊಂಡಿವೆ. ಪಂಚಾಯಿತಿಯಲ್ಲಿ ಆಡಳಿತ ಯಂತ್ರ ಕುಸಿದಿದೆ. ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಕ್ರಮ ವಹಿಸಬೇಕು ಇಲ್ಲವಾದಲ್ಲಿ ನಾವು ಅಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ ಎಂದು ಪಂಚಾಯಿತಿಯ ಕೆಲ ಸದಸ್ಯರು ಆರೋಪಿಸಿ ಧಿಕ್ಕಾರ ಕೂಗಿದರು.

ಜಿಲ್ಲಾಧಿಕಾರಿ ಬರುವಂತೆ ಪಟ್ಟು:

ಪ್ರತಿಭಟನಾನಿರತ ಸ್ಥಳಕ್ಕೆ ಮಧ್ಯಾಹ್ನದ ವೇಳೆ ತಹಸೀಲ್ದಾರ್ ಜಯಪ್ರಕಾಶ್, ಇಒ ಉಮೇಶ್, ಚುನಾವಣಾಧಿಕಾರಿ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರತಿಭಟನಾಕಾರರು ಜಗ್ಗಲಿಲ್ಲ. ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಬೇಕು. ಅವರು ನಮಗೆ ಈ ಗೊಂದಲದ ನೋಟಿಸ್‌ಗಳ ಬಗ್ಗೆ ಸ್ಪಷ್ಟನೆ ನೀಡಬೇಕು. ಅಲ್ಲಿಯವರೆಗೂ ನಾವು ಪ್ರತಿಭಟನೆ ವಾಪಸ್ಸು ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ದೂರವಾಣಿ ಮೂಲಕ ಉಪವಿಭಾಗಾಧಿಕಾರಿ ಮಹೇಶ್ ಮನವೊಲಿಸುವ ಪ್ರಯತ್ನ ಮಾಡಿದರೂ ಇದಕ್ಕೆ ಜಗ್ಗಲಿಲ್ಲ.

ಸಂಜೆಯಾಗುತ್ತಿದ್ದಂತೆಯೇ ಮತ್ತೆ ಈ ಮೂವರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದೂರವಾಣಿಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾಹುಡೇದ ಮಾತನಾಡಿ ಈ ಎಲ್ಲ ಸಮಸ್ಯೆಗಳನ್ನು ವಾರದೊಳಗೆ ಬಗೆಹರಿಸಲಾಗುವುದು. ನಂತರ ಅಧ್ಯಕ್ಷರ ಚುನಾವಣೆ ಮಾಡಲು ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆದುಕೊಳ್ಳಲಾಯಿತು.ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್ ಸದಸ್ಯರಾದ ಚಂದ್ರಶೇಖರ್, ಕೆ. ಮಾದೇಶ್, ಮಹೇಶ್, ರಾಜೇಂದ್ರ, ನಟರಾಜು, ಶಾಂತಮ್ಮ, ನಾಗು ರಾಚಪ್ಪ, ಮಮತಾ, ಶಿವಮ್ಮ, ಜ್ಯೋತಿ ಸೋಮಣ್ಣ, ಶಕುಂತಲಾ, ಪುಟ್ಟ ಮಾಧವಿ, ಮಂಜುಳಾ ರವಿ ಪಿಎಸ್‌ಐ ಹನುಮಂತ ಉಪ್ಪಾರ್, ಪಿಡಿಒ ನಟರಾಜು ಅನೇಕರು ಇದ್ದರು.