ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಜೆಎನ್ ನರ್ಮ್- ಬಿಎಸ್.ಯು.ಪಿ ಯೋಜನೆಯಡಿ ನಿರ್ಮಾಣಗೊಂಡಿರುವ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ಮೊದಲು ಪೂರ್ಣ ಪ್ರಮಾಣದಲ್ಲಿ ಅಭಿವೃದಿಪಡಿಸಿ ಹಸ್ತಾಂತರ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಜಿ.ಟಿ. ದೇವೇಗೌಡ ಸೂಚಿಸಿದರು.ನಗರದ ಜಲದರ್ಶಿನಿ ಅತಿಥಿಗೃಹದ ತಮ್ಮ ಕಚೇರಿಯಲ್ಲಿ ಶ್ರೀರಾಂಪುರ, ಬೋಗಾದಿ, ಕಡಕೊಳ ಮತ್ತು ರಮ್ಮನಹಳ್ಳಿ ಪಪಂ ಮುಖ್ಯಾಧಿಕಾರಿ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಏಕಲವ್ಯನಗರ (1040 ಮನೆಗಳು), ಬೋಗಾದಿ ರೂಪನಗರ (ನಿಂಗರಾಜನಕಟ್ಟೆ) (156 ಮನೆಗಳು), ಹಂಚ್ಯಾ ಸಾತಗಳ್ಳಿ (ಭಾರತ್ನಗರ) (432 ಮನೆಗಳು), ಕುಪ್ಪಲೂರು (ಮಹದೇವಪುರ) (336 ಮನೆಗಳು), ಮಂಡಕಳ್ಳಿ (576 ಮನೆಗಳು), ಸಾತಗಳ್ಳಿ (ವಿ.ಟಿ.ಯು. ಹಿಂಭಾಗ (560 ಮನೆಗಳು), ರಾಜೀವ್ ನಗರ (552 ಮನೆಗಳು), ಹಳೇ ಕೆಸರೆ ನಂ. 484/1 & 484/2 (252 ಮನೆಗಳು) ಒಟ್ಟು 3904 ಮನೆಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣಗೊಂಡು ಮನೆಗಳನ್ನು ಫಲಾನುಭವಿಗಳು ವಾಸಮಾಡುತ್ತಿದ್ದಾರೆ, ಆದರೆ ಈ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ, ಆದ್ದರಿಂದ ಈ ಬಡಾವಣೆಗಳನ್ನು ಹಸ್ತಾಂತರಿಸಲು ಮೊದಲು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ ಹಸ್ತಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಮುಖ್ಯಮಂತ್ರಿ ಮತ್ತು ವಸತಿ ಸಚಿವರನ್ನು ಖುದ್ದಾಗಿ ಭೇಟಿಮಾಡಿ ಈ ಬಡಾವಣೆಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದು, ಕೂಡಲೇ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.ಆದ್ದರಿಂದ ಮಂಡಳಿಯ ಎಂಜಿನಿಯರ್, ಪಪಂ ಮುಖ್ಯಾಧಿಕಾರಿ, ಗ್ರಾಪಂ ಅಭಿವೃದ್ಧಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳೊಡನೆ ಕುಂದುಕೊರತೆ ಸಭೆ ಮಾಡಿ, ಅತ್ಯಂತ ಅವಶ್ಯವಾಗಿರುವ ಕುಡಿಯುವ ನೀರು, ಒಳಚರಂಡಿ, ರಸ್ತೆ, ಅಂಗನವಾಡಿ, ಶಾಲೆ, ಸ್ಮಶಾನಗಳ ಅಭಿವೃದ್ಧಿಪಡಿಸುವ ಬಗ್ಗೆ ಕೂಡಲೇ ಅಂದಾಜು ಪಟ್ಟಿ ತಯಾರಿಸಿ ಮಂಡಳಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಸಭೆಮೂಡಾದಿಂದ ಹಸ್ತಾಂತರಗೊಂಡಿರುವ ಬಡಾವಣೆಗಳಿಗೆ ತೆರಳಿ ಖಾತೆ ಅದಾಲತ್ ಜೊತೆಗೆ ಕುಂದುಕೊರತೆಗಳ ಸಭೆ ಮಾಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. ಇದುವರೆಗೂ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದ ಎಲ್ಲಾ ಖಾಸಗಿ ಬಡಾವಣೆಗಳು ಹಾಗೂ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಾದ ಪಪಂ, ನಗರಸಭೆಗೆ ಹಾಗೂ ಗ್ರಾಪಂಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.ಇದುವರೆಗೂ ಪ್ರಾಧಿಕಾರದ ವ್ಯಾಪ್ತಿಯಲಿದ್ದ ಖಾಸಗಿ ಬಡಾವಣೆಗಳಿಗೆ ಹತ್ತಾರು ವರ್ಷಗಳಿಂದ ಯಾವುದೇ ಮೂಲಭೂತ ಸೌಲಭ್ಯವನ್ನು ಮುಡಾ ಒದಗಿಸಿಲ್ಲ, ಆದ್ದರಿಂದ ಹಸ್ತಾಂತರ ಮಾಡಿಕೊಳ್ಳುವ ಪ್ರತಿ ಬಡಾವಣೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯ ನಿವಾಸಿಗಳೊಡನೆ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆದು, ಅತಿ ಜರೂರಾಗಿ ಅವಶ್ಯ ಇರುವ ಕಾಮಗಾರಿಗಳನ್ನು ಹಂತ ಹಂತವಾಗಿ, ಆ ಬಡಾವಣೆಯಲ್ಲಿ ಬರುವ ಕಂದಾಯ ಮತ್ತು ಅಭಿವೃದ್ಧಿ ಶುಲ್ಕವನ್ನು ಅದೇ ಬಡಾವಣೆಯ ಅಭಿವೃದಿಗೆ ಖರ್ಚು ಮಾಡುತ್ತೇವೆ ಎಂದು ತೀರ್ಮಾನಿಸಿ, ಕ್ರಮ ಕೈಗೊಳ್ಳುವುದು. ಹಾಗೂ ಮತ್ತೊಮ್ಮೆ ಖುದ್ದು ಪರಿಶೀಲಿಸಿ, ನಿವಾಸಿಗಳೊಡನೆ ಮುಕ್ತವಾಗಿ ಸಮಸ್ಯೆಗಳನ್ನು ಆಲಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.ಪ್ರತಿ ಸಿಬ್ಬಂದಿಯು ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಚ್ಛಕ್ತಿ, ಒಳಚರಂಡಿ ಸಮಸ್ಯೆಗಳನ್ನು ತುರ್ತಾಗಿ ನಿರ್ವಹಿಸಿ, ಅಲ್ಲಿನ ಜನತೆಯ ಪ್ರಶಂಸೆಗೆ ಪಾತ್ರರಾಗಬೇಕು ಎಂದು ಅವರು ತಿಳಿಸಿದರು.ಪಪಂನಲ್ಲಿ ಲಭ್ಯ ಇರುವ ಅನುದಾನದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದರು.ಪ್ರಾಧಿಕಾರದಿಂದ ಬಡಾವಣೆಗಳ ಹಸ್ತಾಂತರ ಮಾಡಲಾಗುತ್ತಿದ್ದೆ, ಈ ಸಂದರ್ಭದಲ್ಲಿ ಖಾತೆ ಸೇರಿದಂತೆ ಯಾವುದೇ ಸಮಸ್ಯೆಗಳು ಉದ್ಬವವಾಗದಂತೆ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.ಪಪಂ ವತಿಯಿಂದ ಗ್ರಾಮಗಳಲ್ಲಿ, ಬಡಾವಣೆಗಳಲ್ಲಿ ಕಸ ವಿಲೇವಾರಿ ಮಾಡುವ ಕ್ರಮ ಕೈಗೊಳ್ಳಬೇಕು ತಾವೂ ಕೂಡ ಬೆಳಗ್ಗೆ ಪ್ರತಿ ಬಡಾವಣೆಗಳಿಗೆ ಭೇಟಿ ನೀಡಬೇಕು ಎಂದು ಅವರು ಹೇಳಿದರು.ಪಪಂ ವತಿಯಿಂದ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳ, ಮುಂದೆ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ಸಭೆಯಲ್ಲಿ ಚರ್ಚಿಸಿದರು. ಶಾಲೆಗಳು, ಅಂಗನವಾಡಿ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ಮುಖ್ಯಾಧಿಕಾರಿಗಳಾದ ದೀಪಾ, ಬಸವರಾಜು, ರವಿಕೀರ್ತಿ, ಸುರೇಶ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ಮುಖಂಡರಾದ ಗೆಜ್ಜಗಳ್ಳಿ ಲೋಕೇಶ್, ಪರಸಯ್ಯನಹುಂಡಿ ಸುರೇಶ್, ಬೋಗಾದಿ ಚಂದ್ರಶೇಖರ್ ಮೊದಲಾದವರು ಇದ್ದರು.