ಕೊಪ್ಪದಲ್ಲಿ ಅಕ್ರಮ ಮದ್ಯ ವಿರುದ್ಧ ಪ್ರತಿಭಟನೆ

| Published : Feb 04 2024, 01:30 AM IST

ಕೊಪ್ಪದಲ್ಲಿ ಅಕ್ರಮ ಮದ್ಯ ವಿರುದ್ಧ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಮದ್ಯ ಮಾರಾಟ ವಿರುದ್ಧ ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಪಂ ವ್ಯಾಪ್ತಿಯ ಕೊಪ್ಪದಲ್ಲಿ ಮಹಿಳೆಯರು ಸಿಡಿದೆದ್ದಿದ್ದಾರೆ. ಶಿರಸಿ-ಚಂದ್ರಗುತ್ತಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಶಿರಸಿ: ತಾಲೂಕಿನ ಉಂಚಳ್ಳಿ ಗ್ರಾಪಂ ವ್ಯಾಪ್ತಿಯ ಕೊಪ್ಪದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಊರಿನ ಗೌರವ ಹಾಳಾಗುತ್ತಿದೆ. ಅಕ್ರಮ ಮದ್ಯ ಮಾರಾಟ ಕೂಡಲೇ ಸ್ಥಗಿತಗೊಳಿಸದಿದ್ದರೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಕಚೇರಿಯೆದುರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಗ್ರಾಮಸ್ಥರು, ಕೊಪ್ಪದಲ್ಲಿ ಶಿರಸಿ-ಚಂದ್ರಗುತ್ತಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಚಂದ್ರಗುತ್ತಿ ರಸ್ತೆಯ ಕೊಪ್ಪ ಸರ್ಕಲ್ ಬಳಿ ಜಮಾಯಿಸಿದ ಸಾರ್ವಜನಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು, ಅಕ್ರಮ ಮದ್ಯ ಮಾರಾಟದಿಂದ ಉಂಟಾಗುತ್ತಿರುವ ತೊಂದರೆಗಳನ್ನು ಮಾಧ್ಯಮಗಳ ಎದುರು ತೋಡಿಕೊಂಡರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಗ್ರಾಮಸ್ಥೆ ಅರ್ಚನಾ ನಾಯ್ಕ ಮಾತನಾಡಿ, ತಂದೆ ಕೂಲಿ ಕೆಲಸ ಮಾಡಿದ ಎಲ್ಲ ಹಣ ಕುಡಿತಕ್ಕೆ ಖರ್ಚು ಮಾಡುತ್ತಿದ್ದಾರೆ. ಕೊಪ್ಪದಲ್ಲಿ ಮದ್ಯಕ್ಕೆ ಕಡಿವಾಣ ಹಾಕಿದರೆ ಮಾತ್ರ ಊರು ಉದ್ಧಾರವಾಗುತ್ತದೆ. ಗ್ರಾಮದ ಗೂಡಂಗಡಿಗಳಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಮದ್ಯ ಮಾರಲಾಗುತ್ತಿದೆ. ಅಬಕಾರಿ ಮತ್ತು ಪೊಲೀಸ್ ಇಲಾಖೆಯ ನೆರಳಿನಲ್ಲಿಯೇ ಮದ್ಯ ಮಾರಾಟ ನಡೆಯುತ್ತಿದೆ. ಬೆಳಗ್ಗೆಯಿಂದ ತಡರಾತ್ರಿವರೆಗೂ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಹೆಂಡದ ವ್ಯಾಪಾರದಿಂದ ಗ್ರಾಮದ ವಾತಾವರಣ ಹದಗೆಟ್ಟಿದೆ. ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಫ್ತಾ ಪಡೆಯುವುದನ್ನು ಬಂದ್ ಮಾಡಿ ಅಕ್ರಮ ಮದ್ಯಕ್ಕೆ ಇತಿಶ್ರೀ ಹಾಡಬೇಕು. ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹಕ್ಕೂ ಸಿದ್ಧರಾಗಿದ್ದೇವೆ ಎಂದು ಎಚ್ಚರಿಸಿದರು.

ವಿಶಾಲಾಕ್ಷಿ ನಾಯ್ಕ ಮಾತನಾಡಿ, ಗ್ರಾಮಸ್ಥರೆಲ್ಲ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಪುರುಷರು ಹಗಲು-ರಾತ್ರಿಯನ್ನದೇ ಮದ್ಯ ಸೇವನೆ ಮಾಡಿಕೊಂಡು ಜಗಳಕ್ಕೆ ಮುಂದಾಗುತ್ತಾರೆ. ಕೊಪ್ಪದಲ್ಲಿ ಹೆಂಡ ಬಂದ್ ಮಾಡಬೇಕು ಎಂದು ಜನಪ್ರತಿನಿಧಿಗಳಲ್ಲಿ ಮತ್ತು ಅಧಿಕಾರಿಗಳಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಪ್ರತಿ ಮನೆಯಲ್ಲಿಯೂ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಆದರೂ ಅಧಿಕಾರಿಗಳಿಗೆ ಮಾನವೀಯತೆಯಿಲ್ಲ. ಇದು ಹೀಗೆಯೇ ಮುಂದುವರಿದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳು ನೇರ ಹೊಣೆಯಾಗುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆಯಲ್ಲಿ ಉಂಚಳ್ಳಿ ಗ್ರಾಪಂ ಸದಸ್ಯ ಅರುಣ ಕೊಪ್ಪ, ಪವಿತ್ರಾ ನಾಯ್ಕ, ಶ್ಯಾಮಲಾ ನಾಯ್ಕ, ಶರಾವತಿ ನಾಯ್ಕ, ಗಣೇಶ ನಾಯ್ಕ, ಕಿರಣ ನಾಯ್ಕ, ಸಂದೀಪ ನಾಯ್ಕ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

ಶಿರಸಿ-ಚಂದ್ರಗುತ್ತಿ ಬಸ್‌ನಲ್ಲಿ ಮದ್ಯ ಸಾಗಾಟ: ಕೊಪ್ಪ ಸರ್ಕಲ್ ಬಳಿ 2 ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಶಿರಸಿ-ಚಂದ್ರಗುತ್ತಿ ಬಸ್‌ನಲ್ಲಿ ಮದ್ಯ ಸಾಗಾಟವಾಗುತ್ತದೆ. ಅಧಿಕಾರಿಗಳಿಗೆ ಇದು ತಿಳಿದಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ವ್ಯಸನಿಗಳು ಮದ್ಯ ಕುಡಿದು ಮಹಿಳೆಯರು ಮತ್ತು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದಾರೆ. ಕೊಪ್ಪ ಸರ್ಕಲ್ ಬಳಿ 30ರಿಂದ 40 ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಬಸ್‌ಗೆ ಕಾಯುತ್ತಾರೆ. ಆ ವೇಳೆ ಮದ್ಯ ವ್ಯಸನಿಗಳು ತೊಂದರೆ ನೀಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿನಿಯರು ಬೇಸತ್ತಿದ್ದಾರೆ. ವಿದ್ಯಾರ್ಥಿಗಳನ್ನೂ ನಮ್ಮ ಹೋರಾಟದಲ್ಲಿ ಸೇರಿಸಿಕೊಂಡು ತಕ್ಕ ಬಿಸಿ ಮುಟ್ಟಿಸುತ್ತೇವೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.