ಕಳೆದ ವಾರ ಕೇರಳ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಬಂಡೀಪುರ ರಾತ್ರಿ ಸಂಚಾರ ವಿಷಯ ಪ್ರಸ್ತಾಪಿಸಿದ್ದ ವಯನಾಡು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಿರುದ್ಧ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು.
- ಕೇರಳ ಚುನಾವಣೆ ಪ್ರಚಾರದ ವೇಳೆ ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು ಪ್ರಸ್ತಾಪ । ಪ್ರಾಣಿಗಳಿಗೆ ಚುಚ್ಚುಮದ್ದು, ಸಂತಾನಹರಣಕ್ಕಾಗಿ ಖಂಡ್ರೆ ಹೇಳಿಕೆ
- ಕಬ್ಬು ಬೆಳೆಗಾರರ ಸಂಘದ ವತಿಯಿಂದ ಹೆದ್ದಾರಿ ತಡೆದು ಪ್ರತಿಭಟನೆ । ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತ ಮುಖಂಡರ ಆಕ್ರೋಶ---
-ಕೇರಳದ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಪ್ರಕೃತಿ ಮತ್ತು ಕಾಡಿನ ನಾಶಕ್ಕೆ ಮೂಲವಾಗಿರುವಂತಹ ಬಂಡಿಪುರ ರಾತ್ರಿ ಸಂಚಾರ ಮುಕ್ತ ಹಾಗೂ ನೀಲಂಬೂರು ಬಳಿ ರೈಲ್ವೆ ಹಳಿ ಹಾಕಿಸುವ ಪ್ರಸ್ತಾಪವನ್ನು ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿಕೆ ರಾಜ್ಯದ ವಿರೋಧಿ ನೀತಿಯನ್ನು ತೋರಿಸುತ್ತದೆ.
- ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ.---
ಬೇಡಿಕೆಗಳೇನು:ಬಂಡೀಪುರ ರಾತ್ರಿ ಸಂಚಾರ ತೆರವು, ನೀಲಂಬೂರು ರೈಲ್ವೆ ಮಾರ್ಗ ಅರಣ್ಯ ನಾಶಕ್ಕೆ ಅಡಿಗಲ್ಲು
ಪ್ರಾಣಿಗಳ ಸಂತಾನ ಹರಣ ಮತ್ತು ಚುಚ್ಚುಮದ್ದು ನೀಡುವಿಕೆ ಅತ್ಯಂತ ಅವೈಜ್ಞಾನಿಕ ಕ್ರಮಗಳುಈ ನೀತಿಗಳನ್ನು ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುಮತಿ ನಿರಾಕರಿಸಬೇಕು
ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗದಲ್ಲಿ ಭೂಮಿ ಕೊಟ್ಟಿರುವ ರೈತರಿಗೆ ತಕ್ಷಣ ಪರಿಹಾರಕಬ್ಬು ಬೆಳೆಗಾರರಿಗೆ ಬಾಕಿ ಇರುವ ೯೫೦ ಕೋಟಿ ರು.ಗಳನ್ನು ತತ್‌ಕ್ಷಣ ಬಿಡುಗಡೆ ಮಾಡಬೇಕು
ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಆದ ಬೆಳೆ ನಷ್ಟವನ್ನು ತಕ್ಷಣ ಕೊಡಬೇಕು---
ಕನ್ನಡಪ್ರಭ ವಾರ್ತೆ ಚಾಮರಾಜನಗರಕಳೆದ ವಾರ ಕೇರಳ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಬಂಡೀಪುರ ರಾತ್ರಿ ಸಂಚಾರ ವಿಷಯ ಪ್ರಸ್ತಾಪಿಸಿದ್ದ ವಯನಾಡು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಿರುದ್ಧ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು. ಇದೇ ವೇಳೆ ಮಾನವ ಪ್ರಾಣಿ ಸಂಘರ್ಷ ತಡೆಯುವುದಕ್ಕಾಗಿ ಸಂತಾನ ಹರಣ ಮತ್ತು ಚುಚ್ಚುಮದ್ದು ಕೊಡುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಮರಿಯಾಲದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾವಣೆಗೊಂಡು ರಸ್ತೆ ತಡೆ ನಡೆಸಿ ಸಂಸದೆ ಪ್ರಿಯಾಂಕಾ ಗಾಂಧಿ, ಸಚಿವ ಈಶ್ವರ್ ಖಂಡ್ರೆ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಅಸಮಾಧಾನ ಹೊರಹಾಕಿದರು.ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಕೇರಳದ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಪ್ರಕೃತಿ ಮತ್ತು ಕಾಡಿನ ನಾಶಕ್ಕೆ ಮೂಲವಾಗಿರುವಂತಹ ಬಂಡಿಪುರ ರಾತ್ರಿ ಸಂಚಾರ ಮುಕ್ತ ಹಾಗೂ ನೀಲಂಬೂರು ಬಳಿ ರೈಲ್ವೆ ಹಳಿ ಹಾಕಿಸುವ ಪ್ರಸ್ತಾಪವನ್ನು ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿಕೆ ರಾಜ್ಯದ ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದರು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪ್ರಾಣಿಗಳು ಮತ್ತು ಮಾನವ ಸಂಘರ್ಷವನ್ನು ತಡೆಯುವುದಕ್ಕಾಗಿ ಅವೈಜ್ಞಾನಿಕ ವಾದ, ಪ್ರಕೃತಿಗೆ ವಿರುದ್ಧವಾದ ಪ್ರಾಣಿಗಳ ಸಂತಾನ ಹರಣ ಚುಚ್ಚುಮದ್ದು ಹಾಗೂ ಚಿಕಿತ್ಸೆ ನೀಡಲಾಗುವುದು ಎಂಬ ಪ್ರಸ್ತಾಪವನ್ನು ಇಟ್ಟಿರುವುದು ಖಂಡನೀಯ ಎಂದರು.ಇಂತಹ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಜಾರಿಗೊಳಿಸಲು ಅವಕಾಶ ಕೊಡಬಾರದು ಎಂದು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಿದರು.ರಾಜ್ಯ ಸರ್ಕಾರವು ಹೆಜ್ಜಾಲ ಮತ್ತು ಚಾಮರಾಜನಗರ ರೈಲು ಯೋಜನೆಯ ಜಾರಿಗೆ ಕ್ರಮ ಕೈಗೊಳ್ಳಬೇಕು. ಪರಿಹಾರವನ್ನು ತಕ್ಷಣ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.ಕಬ್ಬು ಬೆಳೆಗಾರರಿಗೆ ಬಾಕಿ ಇರುವ ೯೫೦ ಕೋಟಿ ರು. ಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ರೈತರಿಗೆ ನೀಡಬೇಕು. ಜಿಲ್ಲೆಯ ಕೆರೆಕಟ್ಟೆಗಳಿಗೆ ನೀರು ತುಂಬಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಅಕಾಲಿಕ ಆಲಿಕಲ್ಲು ಮಳೆಯಿಂದ ಆದ ಬೆಳೆ ನಷ್ಟ ತಕ್ಷಣ ಕೊಡಬೇಕು ಎಂದು ಒತ್ತಾಯಿಸಿದರು.ಕೃಷಿ ಸಾಲವನ್ನು ಜಿಲ್ಲಾ ಸಹಕಾರ ಬ್ಯಾಂಕುಗಳಲ್ಲಿ ಪ್ರತಿ ಎಕರೆಗೆ ೧ ಲಕ್ಷ ರು.ನಂತೆ ೧೦ ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ನೀಡಬೇಕು. ಕ್ರಿಕೆಟ್ ಪಂದ್ಯದ ಅಡಿಯಲ್ಲಿ ಆನ್‌ಲೈನ್ ಗೇಮ್ ಮುಖಾಂತರ ನಡೆಯುವ ಜೂಜಾಟವನ್ನು ನಿಲ್ಲಿಸಬೇಕು. ಚಾಮುಲ್‌ನ ಆರಂಭಿಕ ಬಂಡವಾಳವಾದಂತಹ ೫೦ ಕೋಟಿ ರು. ಬಾಕಿ ಹಣವನ್ನುಸರ್ಕಾರ ತಕ್ಷಣ ನೀಡಬೇಕು, ಐಸ್‌ಕ್ರೀಮ್ ಘಟಕ ಆರಂಭಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಮೇಕೆದಾಟು ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರವನ್ನು ನೀಡಿ ಯೋಜನೆಯನ್ನು ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ರಾಜ್ಯ ಖಜಾಂಚಿ ಮಾದಪ್ಪ, ಪದಾಧಿಕಾರಿಗಳಾದ ರಾಜಣ್ಣ, ಗಣೇಶ್, ಚಿರು, ಮಲೆಯೂರು ಮಹೇಂದ್ರ, ಪ್ರಭು, ಶ್ರೀಕಂಠ, ಮೋಹನ್, ಪ್ರಕಾಶ್ ಗಾಂಧಿ, ಮಹದೇವಪ್ಪ, ನಾಗರಾಜಪ್ಪ, ಬಸವರಾಜಪ್ಪ, ಉಮೇಶ್, ರಾಮಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು. ---೧೩ಸಿಎಚ್ ಎನ್೩
ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಸಚಿವ ಈಶ್ವರ್ ಖಂಡ್ರೆ ಹೇಳಿಕೆ ಖಂಡಿಸಿ ಚಾಮರಾಜನಗರ ತಾಲೂಕಿನಲ್ಲಿ ಕಬ್ಬು ಬೆಳೆಗಾರರ ಸಂಘ ಪ್ರತಿಭಟನೆ ನಡೆಸಿದರು.