ಸಹಕಾರಿ ಧುರೀಣ, ಉಂಬ್ಳೆಬೈಲು ಮೋಹನ್‌ರ ಇಡೀ ಜೀವನವೇ ಜನಸಾಮಾನ್ಯರ ಜತೆ ಬೆರೆತಿದ್ದು, ಅವರ ಸಂಪೂರ್ಣ ಜೀವನದ ಬಗ್ಗೆ ಬರೆದ ಈ ಕೃತಿ ಹೆಸರಿಗೆ ತಕ್ಕಂತೆ ‘ಸಾರ್ಥಕ’ವಾಗಿದ್ದು, ಅವರ ವ್ಯಕ್ತಿತ್ವವನ್ನು ಎತ್ತಿ ಹಿಡಿದಿದೆ ಎಂದು ಮಾಜಿ ಸಚಿವ ಡಾ.ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಹಕಾರಿ ಧುರೀಣ, ಉಂಬ್ಳೆಬೈಲು ಮೋಹನ್‌ರ ಇಡೀ ಜೀವನವೇ ಜನಸಾಮಾನ್ಯರ ಜತೆ ಬೆರೆತಿದ್ದು, ಅವರ ಸಂಪೂರ್ಣ ಜೀವನದ ಬಗ್ಗೆ ಬರೆದ ಈ ಕೃತಿ ಹೆಸರಿಗೆ ತಕ್ಕಂತೆ ‘ಸಾರ್ಥಕ’ವಾಗಿದ್ದು, ಅವರ ವ್ಯಕ್ತಿತ್ವವನ್ನು ಎತ್ತಿ ಹಿಡಿದಿದೆ ಎಂದು ಮಾಜಿ ಸಚಿವ ಡಾ.ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀ ಉಂಬ್ಳೇಬೈಲು ಮೋಹನ್‌ರ ಅಭಿನಂದನಾ ಸಮಿತಿ ಮತ್ತು ಅಸ್ಮಿತೆ ಫೌಂಡೇಷನ್ ಕರ್ನಾಟಕ ವತಿಯಿಂದ ಡಾ.ಸಚಿನ್ ಬಿ.ಎಸ್. ಸಂಪಾದಕತ್ವದ ಉಂಬ್ಳೇಬೈಲು ಮೋಹನ್‌ರ ‘ಸಾರ್ಥಕ’ ಹೆಸರಿನ ಬದುಕಿನ ಪಯಣದ ಅಭಿನಂದನಾ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೆ.ಎಚ್.ಪಟೇಲ್, ಕಾಗೋಡು ತಿಮ್ಮಪ್ಪ, ಡಿ.ಬಿ.ಚಂದ್ರೇಗೌಡ, ಬಿ.ಎಲ್.ಶಂಕರ್, ಎಸ್.ಬಂಗಾರಪ್ಪ ಮೊದಲಾದವರ ಜತೆಗೆ ಹತ್ತಿರದ ಒಡನಾಟ ಹೊಂದಿದ್ದ ಉಂಬ್ಳೇಬೈಲು ಮೋಹನ್ ಯುವ ಪೀಳಿಗೆಗೆ ಆದರ್ಶಪ್ರಾಯರು ಎಂದರು.

ಅಭಿನಂದನಾ ಗ್ರಂಥ ‘ಸಾರ್ಥಕ’ ಬಿಡುಗಡೆಗೊಳಿಸಿದ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ಇಂದು ಎನ್.ಆರ್.ಪುರದಲ್ಲಿ ಸಿಎಂ ಕಾರ್ಯಕ್ರಮವಿತ್ತು. ಆದರೆ ಅಧಿಕಾರ ಇದ್ದಾಗ ಸಿಎಂ ಜತೆಗೆ ಬಹಳ ಜನ ಇರುತ್ತಾರೆ. ಅದಕ್ಕಿಂತ ಅಧಿಕಾರ ಇಲ್ಲದ ಗೆಳೆಯನ ಕುರಿತು ಗ್ರಂಥ ಬಿಡುಗಡೆಯೇ ಶ್ರೇಷ್ಠ ಎಂದು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಒಬ್ಬ ಹಿರಿಯ ಸಹಕಾರಿ ಧುರೀಣರಾಗಿ ಸಾಧನೆಯ ಸಾರ್ಥಕತೆಯ ಜೀವನ ನಡೆಸಿ ಸರಳತೆಯ ಪ್ರತೀಕವಾಗಿ ಸರ್ವಪಕ್ಷಗಳಲ್ಲೂ ಅಭಿಮಾನಿಗಳನ್ನು ಹೊಂದಿದವರು. ಸಹಕಾರ ರತ್ನ ಪ್ರಶಸ್ತಿ ಪಡೆದ ಪ್ರಾಮಾಣಿಕತೆ, ಬದ್ಧತೆಯಿಂದ ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡಿದ ಮೋಹನ್ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ಈಶ್ವರಪ್ಪ ವಹಿಸಿದ್ದರು. ಇದಕ್ಕೂ ಮೊದಲು ಅಸ್ಮಿತೆ ಫೌಂಡೇಷನ್‌ನ ನಿರ್ದೇಶಕ ಮತ್ತು ಪುಸ್ತಕದ ಸಂಪಾದಕ ಡಾ.ಸಚಿನ್ ಬಿ.ಎಸ್., ಹಲವು ಅಧ್ಯಾಯಗಳಲ್ಲಿ ಮೋಹನ್ ಅವರ ಬಗ್ಗೆ ಇರುವ ಮಾಹಿತಿಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಉಂಬ್ಳೇಬೈಲು ಮೋಹನ್‌ ಅವರನ್ನು ಅಭಿನಂದಿಸಲಾಯಿತು.

ಪ್ರಮುಖರಾದ ಎಂ.ಶ್ರೀಕಾಂತ್, ಬಸವಾನಿ ವಿಜಯ್ದೇವ್, ಕಡಿದಾಳ್ ಗೋಪಾಲ್, ಎಂ.ಬಿ.ಚನ್ನವೀರಪ್ಪ, ಪ್ರೊ.ಜಿ.ಎಲ್. ಪದ್ಮನಾಭ್, ಬಿ.ಎ.ರಮೇಶ್ ಹೆಗ್ಡೆ, ವಿಜಯಕುಮಾರ್, ಸುನೀಲ್, ಶಾಂತವೀರಪ್ಪಗೌಡ್ರು, ಮೋಹನ್‌ರ ಸಹಕಾರಿ ರಂಗದ ಸ್ನೇಹಿತರು, ಅಭಿಮಾನಿಗಳು ಇದ್ದರು.

ಅಹಂಕಾರದ ರಾಜಕಾರಣವನ್ನು ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇವೆ. ಪರಿಸ್ಥಿತಿಯ ಪಿತೂರಿಗೆ ಪಿಜಿಆರ್ ಸಿಂಧ್ಯಾ, ನಾನು ಈಶ್ವರಪ್ಪ ಸೇರಿದಂತೆ ಅನೇಕರು ಬಲಿಯಾಗಿದ್ದೇವೆ. ಕೆಲವು ನಿರ್ಧಾರಗಳಿಂದ ಸಭ್ಯರು ಅಸಭ್ಯರಿಂದ ಆಳಿಸಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ನೂರಾರು ವರ್ಷ ಹಿಂದೆಯೇ ಪ್ಲೇಟೋ ಎಂಬ ರಾಜಕೀಯ ತಜ್ಞ ಹೇಳಿದ್ದರು. ಅದು ಈಗ ನಿಜವಾಗುತ್ತಿದೆ.

ಬಿ.ಎಲ್.ಶಂಕರ್ ಮಾಜಿ ಸಭಾಪತಿ