ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಯುವ ವಾರದ ಸಂತೆಯನ್ನು ಸ್ಥಳಾಂತರ ಮಾಡದಂತೆ ಆಗ್ರಹಿಸಿ ಸಂತೆ ವ್ಯಾಪಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಳೆದ ಎರಡು ವರ್ಷಗಳಿಂದ ವಾರದ ಸಂತೆ ಕುಶಾಲನಗರ ಪಟ್ಟಣದ ಮೈಸೂರು ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸುಸೂತ್ರವಾಗಿ ನಡೆಯುತ್ತಿದ್ದು ಇದನ್ನು ಮತ್ತೆ ಕೆಇಬಿ ಕಚೇರಿ ಮುಂಭಾಗ ಇರುವ ಹಳೆ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಲು ಕೆಲವರು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.ಆರ್ ಎಂ ಸಿ ಆವರಣದಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಹೊಂದಿದ್ದು ವಿದ್ಯುತ್ ವ್ಯವಸ್ಥೆ ಶೌಚಾಲಯ ಮತ್ತು ಆವರಣ ಗೋಡೆ ಜೊತೆಗೆ ಮೂಲಭೂತ ಸೌಲಭ್ಯ ಹೊಂದಿರುವ ಸುಮಾರು 11 ಎಕರೆ ಪ್ರದೇಶದಲ್ಲಿ ವಾರದ ಸಂತೆ ನಡೆಯುತ್ತಿದೆ. ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ರೈತರು ತರಕಾರಿ ಮತ್ತು ಇತರ ವಸ್ತುಗಳನ್ನು ತಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ರೈತರಿಗೂ ವ್ಯಾಪಾರಸ್ಥರಿಗೂ ಗ್ರಾಹಕರಿಗೂ ತುಂಬಾ ಅನುಕೂಲ ಉಂಟಾಗಿದೆ ಎಂದು ಆರ್‌ಎಂಸಿ ಸಂತೆ ವ್ಯಾಪಾರಿಗಳು ಮತ್ತು ವರ್ತಕರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಡಿ.ಎಸ್. ಮಹೇಶ್ ತಿಳಿಸಿದ್ದಾರೆ.ಕೆಲವು ಮಧ್ಯವರ್ತಿಗಳು ಇದನ್ನು ಸಹಿಸದೆ ಮತ್ತೆ ಹಳೆ ಮಾರುಕಟ್ಟೆಗೆ ವಾರದ ಸಂತೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ. ಹಳೆ ಮಾರುಕಟ್ಟೆ ಆವರಣದಲ್ಲಿ ಅಪಾಯಕಾರಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಜೊತೆಗೆ ಯಾವುದೇ ಮೂಲಭೂತ ವ್ಯವಸ್ಥೆ ಸೌಲಭ್ಯ ಇಲ್ಲ. ಈ ಹಿಂದೆ ಮಳೆಗಾಲ ಅವಧಿಯಲ್ಲಿ ವಿದ್ಯುತ್ ಗೋಪುರಗಳ ಮೂಲಕ ವಿದ್ಯುತ್ ತಗಲಿ ಜಾನುವಾರುಗಳು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ನಡೆದಿದೆ ಎಂದು ಅವರು ಹೇಳಿದ್ದಾರೆ.
ಅಪಾಯಕಾರಿ ಸ್ಥಳದಲ್ಲಿ ಸಂತೆ ಮಾರುಕಟ್ಟೆ ನಡೆಸಲು ಅವಕಾಶ ಕಲ್ಪಿಸಬಾರದು ಎಂದು ಸಂಬಂಧಿಸಿದ ಅಧಿಕಾರಿಗಳನ್ನು ಆಗ್ರಹಿಸಿರುವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಗೋವಿಂದ ಶೆಟ್ಟಿ ಯಾವುದೇ ಸಂದರ್ಭ ಆರ್‌ಎಂಸಿ ಮಾರುಕಟ್ಟೆ ಆವರಣದಿಂದ ವಾರದ ಸಂತೆ ಸ್ಥಳಾಂತರಗೊಳಿಸಬಾರದು ಎಂದು ತಿಳಿಸಿದ್ದಾರೆ.ಇದೇ ಸಂದರ್ಭ ಕುಶಾಲನಗರಕ್ಕೆ ಭೇಟಿ ನೀಡಿದ್ದ ಮಡಿಕೇರಿ ಉಪ ವಿಭಾಗ ಅಧಿಕಾರಿಗ ಹಾಗೂ ಕುಶಾಲನಗರ ಪುರಸಭೆ ಆಡಳಿತ ಅಧಿಕಾರಿ ಆಗಿರುವ ವಿನಾಯಕ ನಾರ್ವಡೆ ಅವರಿಗೆ ವ್ಯಾಪಾರಿಗಳು ಮನವಿ ಸಲ್ಲಿಸಿದರು.ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ವಿನಾಯಕ ಅವರು ಭರವಸೆ ನೀಡಿದರು.
ಪ್ರತಿಭಟನೆ ಸಂದರ್ಭ ಉಪಾಧ್ಯಕ್ಷರಾದ ಅನಿಲ್, ಸಹಕಾರದ ಶ್ರೀ ದೇವರಾಜ್, ಸಂಘದ ನಿರ್ದೇಶಕರುಗಳು ಹಾಗೂ ಆರ್‌ಎಂಸಿ ಮಾಜಿ ಅಧ್ಯಕ್ಷರಾದ ಎಂ ಡಿ ರಮೇಶ್, ಮಾಜಿ ನಿರ್ದೇಶಕರಾದ ಕೆ ಸಿ ಶಶಿ ಭೀಮಯ್ಯ ಮತ್ತಿತರರು ಇದ್ದರು.ಚಿತ್ರದಲ್ಲಿ ಮಂಗಳವಾರ ವಾರದ ಸಂತೆ ಸಂದರ್ಭ ಆರ್ ಎಂ ಸಿ ಆವರಣದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ವ್ಯಾಪಾರಿಗಳ ಸಂಘ ಪ್ರಮುಖರು