ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಹೋರಾಟದಿಂದ ಬೆಳೆದುಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಬ್ಬ ಜನಪರ ಹಾಗೂ ರೈತಪರ ನಾಯಕರಾಗಿದ್ದಾರೆ. ಪ್ರಥಮ ಬಾರಿಗೆ ರೈತರ ಹಿತಕ್ಕಾಗಿ ರೈತ ಬಜೆಟ್ ಮಂಡಿದ ಕೀರ್ತಿ ಬಿ.ಎಸ್.ಯಡಿಯೂರಪ್ಪರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.
ನಗರದಲ್ಲಿರುವ ಸೇವಾಕಿರಣ ವೃದ್ಧಾಶ್ರಮದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಮತ್ತು ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳು ಆಯೋಜಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನಾಚರಣೆ ಪ್ರಯುಕ್ತ ಆಶ್ರಮ ನಿವಾಸಿಗಳಿಗೆ ಪೌಷ್ಟಿಕಾಹಾರ ವಿತರಿಸಿ ಮಾತನಾಡಿದರು.ನಾಡು ಕಂಡ ಅಪರೂಪದ ಮುತ್ಸದ್ಧಿ ರಾಜಕಾರಣಿ ಬಿ.ಎಸ್.ಯಡಿಯೂರಪ್ಪ. ಮುಖ್ಯಮಂತ್ರಿಯಾಗಿದ್ದ ವೇಳೆ ತವರು ಜಿಲ್ಲೆ ಮಂಡ್ಯಕ್ಕೆ ನೀಡಿದ ಕೊಡುಗೆ ಅಪಾರ. ಮೈಷುಗರ್ ಪುನಶ್ಚೇತನಕ್ಕೆ 350 ಕೋಟಿ ರು. ಅನುದಾನ, ತಾವು ಓದಿದ ಶಾಲೆ-ಕಾಲೇಜು ನವೀಕರಣ, ಕೆ.ಆರ್.ಪೇಟೆ ಅಭಿವೃದ್ಧಿಗಾಗಿ ಯೋಜನೆ, ರೈತರ ಸಾಲ ಮನ್ನಾ, ವಿದ್ಯಾರ್ಥಿಗಳಿಗೆ ಬೈಸಿಕಲ್, ಭಾಗ್ಯಲಕ್ಷ್ಮೀ ಬಾಂಡ್ ಯೋಜನೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ನುಡಿದರು.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ, ಉಪ ಮುಖ್ಯಮಂತ್ರಿಯಾಗಿ, ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಮೂಲಕ ಯಡಿಯೂರಪ್ಪನವರು ರಾಜ್ಯದ ಜನ ಮೆಚ್ಚಿದ ಜನನಾಯಕರಾಗಿದ್ದಾರೆ. ಅಲ್ಲದೇ, ರಾಜ್ಯ ರಾಜಕೀಯ ಇತಿಹಾಸದಲ್ಲಿ ದೃಢ ತೀರ್ಮಾನಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.೨೦೦೮ರಲ್ಲಿ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯದ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಚಾರವನ್ನು ಕೈಗೊಂಡು, ಬಿಜೆಪಿ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅಳಿಲು ಸೇವೆಯನ್ನು ಸಲ್ಲಿಸುವ ಮೂಲಕ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ, ಪಕ್ಷದ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳು ಸಂತೋಷಪಡುವ ವರ್ಷಗಳನ್ನು ಸೃಷ್ಟಿಸಿದ್ದಾರೆ ಎಂದರು.
೨೦೨೧ರ ಜುಲೈ ೨೬ರಂದು ಯಡಿಯೂರಪ್ಪ ವಯಸ್ಸಿನ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಬಳಿಕ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದರು. ಸದ್ಯ ಅವರ ಪುತ್ರ ಬಿ. ವೈ.ವಿಜಯೇಂದ್ರ ಶಿಕಾರಿಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸದ್ಯ ಚುನಾವಣಾ ರಾಜಕೀಯದಿಂದ ವಿಶ್ರಾಂತಿ ಪಡೆದಿರುವ ಯಡಿಯೂರಪ್ಪ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಪಕ್ಷಕ್ಕೆ ಅವರ ಮಾರ್ಗದರ್ಶನ ನಿರಂತರವಾಗಿರಲಿ ಎಂದು ಕೋರಿದರು.ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿವೇಕ್, ಕಚೇರಿ ಕಾರ್ಯದರ್ಶಿ ಹರ್ಷ, ಮಾಧ್ಯಮ ವಕ್ತರ ಸಿ.ಟಿ.ಮಂಜುನಾಥ್, ಶಿವಲಿಂಗು, ಪ್ರಸನ್ನ, ಶಿವಕುಮಾರ್‌ಕೆಂಪಯ್ಯ, ಆಶ್ರಮಕಾರ್ಯದರ್ಶಿ ಜಿ.ವಿ.ನಾಗರಾಜು, ರಾಜಣ್ಣ ಮತ್ತಿತರರಿದ್ದರು.