ಸಾರಾಂಶ
ರಾಯಚೂರು: ದೆಹಲಿ ಚಲೋ ಪ್ರತಿಭಟನೆಗಾಗಿ ತೆರಳಿದ್ದ ರೈತರ ಮೇಲೆ ದೌರ್ಜನ್ಯ ನಡೆಸುತ್ತಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘದ ಮುಖಂಡರು, ರಾಜ್ಯದಲ್ಲಿ ತೀವ್ರ ಬರ ಸನ್ನಿವೇಶ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತಾತ್ವರ ಉಂಟಾಗಿದೆ, ಜಾನುವಾರುಗಳಿಗೆ ಮೇವು ಕೊರತೆಯಾಗುತ್ತಿದೆ. ಬೆಳೆಗಳು ನಾಶಗೊಂಡಿದ್ದರಿಂದ ಕೆಲಸವಿಲ್ಲದ ರೈತರು ದೊಡ್ಡ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಇಂತಹ ಸಮಯದಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬ್ಬರಿಗೊಬ್ಬರು ಕೆಸರನ್ನೆರಚಿಕೊಳ್ಳುತ್ತಾ ದ್ವೇಷದ ರಾಜಕೀಯ ನಡೆಸುತ್ತಿರುವುದು ಖಂಡನೀಯ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ದಿನೇ ದಿನೇ ರೈತರ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಆಡಳಿತ ನಡೆಸುತ್ತಿರುವ ಸರ್ಕಾರಗಳು ರೈತರ ವಿಚಾರಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಿದ್ದು, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ನುಡಿದ ಕೇಂದ್ರ ಸರ್ಕಾರ ಇದೀಗ ರೈತರ ಮೇಲೆಯೇ ದೌರ್ಜನ್ಯ ನಡೆಸುತ್ತಿದೆ. ತೀವ್ರ ಬರ ಎದುರಿಸುತ್ತಿರುವ ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಕಾಂಗ್ರೆಸ್ ಸರ್ಕಾರ ಬರೀ ಗ್ಯಾರಂಟಿ ಯೋಜನೆಗಳ ಸಾಧನೆಯನ್ನೇ ಮುಂದಿಟ್ಟುಕೊಂಡು ರೈತರಿಗೆ ತೀರದ ದ್ರೋಹವನ್ನು ಬಗೆಯುತ್ತಿದ್ದಾರೆ ಎಂದು ದೂರಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ವಿರೋಧಿ ನೀತಿ ಹಾಗೂ ರೈತರಿಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿವೆ.ರೈತರ ಬೆಳೆ ಬೆಳೆಗಳಿಗೆ ಬೆಂಬಲ ಬೆಲೆಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ಬೆಂಬಲ ಬೆಲೆಗೆ ಸುಗ್ರೀವಾಜ್ಞೆಯನ್ನು ಹೊರಡಿಸಿ ರಾಜ್ಯ ಮಟ್ಟದಲ್ಲಿ ಎಂಎಸ್‌ಪಿ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರ ನೀಡಬೇಕು, ಫಸಲ್ ಭೀಮಾ ಯೋಜನೆಯಡಿ ವಿಮೆ ಹಣ ಪಾವತಿಸಿದ ರೈತರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು, ಜಿಲ್ಲೆಯ ರೈತರ ಕೃಷಿ ಪಂಪ್‌ಸೆಟ್‌ಗೆ ಬೇಸಿಗೆಯಲ್ಲಿ 24 ತಾಸು ವಿದ್ಯುತ್ ನೀಡಬೇಕು.ಕೇಂದ್ರ ಸರ್ಕಾರ ಎಲ್ಲ ನದಿ ಜೋಡಣೆ ಮಾಡುವ ಭರವಸೆಯನ್ನು ನೀಡಿತ್ತು. ಅದರಂತೆ ಎಲ್ಲ ನದಿಗಳ ಜೋಡಣೆ ಮಾಡುವ ಮೂಲಕ ರೈತರಿಗೆ ಬೆಳೆ ಬೆಳೆಯಲು ಅನುಕೂಲಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಗೌರವಾಧ್ಯಕ್ಷ ನರಸಿಂಗರಾವ್ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ಕೆ.ವೀರೇಶಗೌಡ ಕಡಗಂದೊಡ್ಡಿ, ಮಹಿಳಾ ಘಟಕದ ಅಧ್ಯಕ್ಷೆ ಅಕ್ಕಮ್ಮ, ಪದಾಧಿಕಾರಿಗಳಾದ ಈರಣ್ಣ ಗೋರ್ಕಲ್, ರಮೇಶ ಗಾಣಧಾಳ, ನರಸಪ್ಪ ಹೊಕ್ರಾಣಿ, ವೆಂಕಟರೆಡ್ಡಿ ರಾಜಲಬಂಡಾ, ಅಬ್ದುಲ್ ಮಜೀದ್ ಬಿಚ್ಚಾಲಿ. ಹುಸೇನಪ್ಪ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಪಾಲ್ಗೊಂಡಿದ್ದರು.