ದಲಿತ ಯುವಕನ ಹತ್ಯೆ ಖಂಡಿಸಿ ಪ್ರತಿಭಟನೆ

| Published : Apr 25 2024, 01:03 AM IST

ಸಾರಾಂಶ

ಯಾದಗಿರಿ ಜಿಲ್ಲೆಯ ಹಳೆ ಅಗಸಿ ಗ್ರಾಮದಲ್ಲಿ ನಡೆದ ದಲಿತ ಯುವಕನ ಹತ್ಯೆ ಖಂಡಿಸಿ ನಗರದ ಅಶೋಕ ವೃತ್ತದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಬುಧವಾರ ಪ್ರತಿಭಟನೆ ನಡೆಸಿತು.

-ಯಾದಗಿರಿ ಜಿಲ್ಲೆ ಹಳೆ ಅಗಸಿ ಗ್ರಾಮದಲ್ಲಿ ಘಟನೆ

-ಕೊಪ್ಪಳದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಪ್ರತಿಭಟನೆ

-ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಕನ್ನಡಪ್ರಭ ವಾರ್ತೆ ಕೊಪ್ಪಳ

ಯಾದಗಿರಿ ಜಿಲ್ಲೆಯ ಹಳೆ ಅಗಸಿ ಗ್ರಾಮದಲ್ಲಿ ನಡೆದ ದಲಿತ ಯುವಕನ ಹತ್ಯೆ ಖಂಡಿಸಿ ನಗರದ ಅಶೋಕ ವೃತ್ತದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಬುಧವಾರ ಪ್ರತಿಭಟನೆ ನಡೆಸಿತು.

ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಗಣೇಶ ಹೊರತಟ್ನಾಳ ಮಾತನಾಡಿ, ದಲಿತರ ಹತ್ಯೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಯಾದಗಿರಿಯಲ್ಲಿ ಕೇವಲ ರೊಟ್ಟಿ ಕೇಳಿದ್ದಕ್ಕಾಗಿ ದಲಿತ ಯುವಕನ ಹತ್ಯೆ ಮಾಡಲಾಗಿದೆ ಎಂದರೇ ನಾವು ಯಾವ ಸಮಾಜದಲ್ಲಿದ್ದೇವೆ ಎಂದು ಕಿಡಿಕಾರಿದರು.

ಅನ್ಯ ಕೋಮಿನ ಯುವಕರು ಗುಂಪು ಕಟ್ಟಿಕೊಂಡು ಬಂದು ದಲಿತ ಯುವನನ್ನು ಹಲ್ಲೆ ಮಾಡಿ, ಕೊಂದಿದ್ದಾರೆ. ಇದು ಅತ್ಯಂತ ಅಮಾನೀಯ ಮತ್ತು ಘೋರ ಕೃತ್ಯವಾಗಿದೆ. ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲ, ದಲಿತರಿಗೆ ರಕ್ಷಣೆ ಇಲ್ಲ. ಇದಕ್ಕಿಂತ ಮಿಗಿಲಾಗಿ ಕಾನೂನು ಭಯವೇ ಇಲ್ಲದೆ ಅಪರಾಧ ಕೃತ್ಯ ಎಸಗುತ್ತಿರುವುದನ್ನು ನೋಡಿದರೇ ಕಾನೂನ ಸುವ್ಯವಸ್ಥೆಯಲ್ಲಿ ದೋಷ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ದಲಿತ ಯುವಕನ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು. ಇಲ್ಲದಿದ್ದರೇ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದರು.

ಮುಖಂಡ ಪ್ರಾಣೇಶ ಮಾದಿನೂರು ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪದೇ ಪದೇ ಅಪರಾಧ ಕೃತ್ಯಗಳು ನಡೆಯುತ್ತಲೇ ಇವೆ. ರಾಜ್ಯ ಸರ್ಕಾರ ಇವುಗಳನ್ನು ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ದಲಿತರು ಮತ್ತು ವಿದ್ಯಾರ್ಥಿಗಳು ಆತಂಕದಲ್ಲಿ ಬದುಕುವಂತೆ ಆಗಿದೆ. ಕಾಲೇಜಿನಲ್ಲಿ ಹಾಡುಹಗಲೇ ಕೊಲೆಯಾಗುತ್ತದೆ. ದಲಿತ ಯುವಕನ ಹತ್ಯೆಯಾಗುತ್ತದೆ ಎಂದರೇ ಏನರ್ಥ ಎಂದು ಪ್ರಶ್ನೆ ಮಾಡಿದರು.

ಸುನೀಲ ಹೆಸರೂರು ಸೇರಿದಂತೆ ಅನೇಕರು ಇದ್ದರು.