ಕನ್ನಡಪ್ರಭ ವಾರ್ತೆ ಮಂಡ್ಯ

ಕಬ್ಬಿನ ಬಾಕಿ ಪಾವತಿ, ಬೇಸಿಗೆ ಬೆಳೆಗೆ ನೀರು ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರು ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.

ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ರೈತರು, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಬೇಕು. ಕರಾಳ ಕಾಯಿದೆಗಳಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ವಿದ್ಯುತ್ ಖಾಸಗೀಕರಣ, ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯಿದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.

ಬ್ಯಾಂಕುಗಳಲ್ಲಿ ಒತ್ತೆ ಇಟ್ಟಿರುವ ಒಡವೆಗಳನ್ನು ನವೀಕರಿಸಲು ಬಡ್ಡಿ ಪಡೆದು ನವೀಕರಿಸುವಂತೆಯೂ, ಸಾಮಾಜಿಕ ಭದ್ರತಾ ಯೋಜನೆಗಳಾದ ವಿಧವಾ ವೇತನ, ಅಂಗವಿಕಲರ ವೇತನ, ಗೃಹಲಕ್ಷ್ಮ್ಮೀ ಹಣ, ಕಿಸಾನ್ ಸಮ್ಮದ್ ಹಣವನ್ನು ಸಾಲಗಳಿಗೆ ಹೊಂದಾಣಿಕೆ ಮಾಡಬಾರದು. ಕೇಂದ್ರ ಸರ್ಕಾರ ಆರ್‌ಬಿಐನ ಅಧೀನದಲ್ಲಿರುವ ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ಶೋಷಣೆ ತಡೆಗಟ್ಟಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.


ಈ ಹಿಂದೆ ಇದ್ದ ಸರ್ಕಾರ ಘೋಷಣೆ ಮಾಡಿದ್ದ ೧೫೦ ರು. ಜೊತೆಗೆ ಈಗಿರುವ ಸರ್ಕಾರ ಘೋಷಿಸಿರುವ ೧೦೦ ರು.ಗಳನ್ನು ಪಾವತಿಸಲು ಸಂಬಂಧಪಟ್ಟ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಕೇವಲ ಅಕ್ಕಿಯನ್ನು ಮಾತ್ರ ವಿತರಣೆ ಮಾಡದೆ ರಾಗಿ ಬೆಳೆಯುವ ಕಡೆಗಳಲ್ಲಿ ರಾಗಿ, ಜೋಳ ಬೆಳೆಯುವ ಕಡೆಗಳಲ್ಲಿ ಜೋಳ ಸೇರಿದಂತೆ ಇತರೆ ಧಾನ್ಯಗಳನ್ನು ವಿತರಿಸುವಂತೆ ಕೃಷಿ ಸಚಿವರೊಂದಿಗೆ ನಡೆದ ಸಭೆಯಲ್ಲಿ ಒತ್ತಾಯಿಸಿದ್ದೇವೆ. ಇದಕ್ಕೆ ೯೬೦೦ ಕೋಟಿ ರು. ಅನುದಾನ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ನಮ್ಮ ಲೆಕ್ಕಾಚಾರದಲ್ಲಿ ೬೨೦೦ ಕೋಟಿ ರು. ಬೇಕಾಗುತ್ತದೆ. ರೈತರಿಂದಲೇ ಖರೀದಿ ಮಾಡಿ ಅದನ್ನು ವಿತರಣೆ ಮಾಡಬೇಕು. ಅದು ಬಿಟ್ಟು ಇವರು ಆಂಧ್ರಪ್ರದೇಶದಿಂದ ಖರೀದಿ ಮಾಡಿ ಇಲ್ಲಿ ವಿತರಣೆ ಮಾಡುವಂತಹ ವ್ಯವಸ್ಥೆ ರೂಪಿಸಿದ್ದಾರೆ. ಇದರಿಂದ ಹೆಚ್ಚುವರಿ ವೆಚ್ಚ ಬರುತ್ತದೆ ಎಂದು ವಿವರಿಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕೃಷಿ ಪಂಪ್‌ಸೆಟಗಳ ಅಕ್ರಮ ಸಕ್ರಮಕ್ಕೆ ಈ ಹಿಂದೆ ಇದ್ದ ವ್ಯವಸ್ಥೆಯಲ್ಲೇ ರೈತರಿಂದ ಹಣ ಪಾವತಿ ಮಾಡಿಸಿಕೊಂಡು ಉಳಿದ ವೆಚ್ಚಗಳನ್ನು ಸರ್ಕಾರವೇ ಭರಿಸಬೇಕು ಹಾಗೂ ಹಗಲು ವೇಳೆ ಕನಿಷ್ಠ ೭ ಗಂಟೆ ಗುಣಮಟ್ಟದ ತ್ರೀ-ಫೇಸ್ ವಿದ್ಯುತ್‌ನ್ನು ಕೃಷಿ ಪಂಪ್‌ಸೆಟ್‌ಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಅಧ್ಯಾಪಕ ಡಾ. ಹುಲ್ಕೆರೆ ಮಹದೇವು ಮಾತನಾಡಿ, ಸರ್ಕಾರ ಕಾವೇರಿ ಜಲಾಶಯಗಳಿಂದ ಬೆಂಗಳೂರಿನ ಜನರಿಗೆ ನೀರೊದಗಿಸುವ ಯೋಜನೆಗಳನ್ನು ರೂಪಿಸುತ್ತಿರುವುದರಿಂದ ಇಲ್ಲಿನ ರೈತರಿಗೆ ತೊಂದರೆಯಾಗುತ್ತದೆ. ಕೃಷಿ ಉಪಯೋಗಕ್ಕಾಗಿ ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಇಂದಿನ ರಾಜಕಾರಣಿಗಳು ಮರೆತಂತಿದೆ. ಈ ಬಗ್ಗೆ ರೈತರು ಆಕ್ಷೇಪ ಎತ್ತಿದರೆ ಇವರು ಕುಡಿಯುವ ನೀರನ್ನೂ ಕೊಡದವರು ಎಂಬ ಅಪವಾದ ಹೊರಿಸುತ್ತಾರೆ ಎಂದು ಕಿಡಿಕಾರಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಯು.ಸಿ. ಉಮೇಶ, ಲತಾ ಶಂಕರ್, ವೈ.ಪಿ. ಮಂಜುನಾಥ್, ಜ್ಯೋತಿ, ಅನಿತಾ, ತೀಲಾ ಆರ್. ಕುಮಾರ್, ಬೋರಾಪುರ ಶಂಕರೇಗೌಡ, ಎಂ.ಎಸ್. ವಿಜಯಕುಮಾರ್ ಸೇರಿದಂತೆ ನೂರಾರು ಮಂದಿ ರೈತರು ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.