ಸಾರಾಂಶ
ರಾಣಿಬೆನ್ನೂರು: ಹಾವೇರಿ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ 9 ಹೊಸ ವಿವಿಗಳನ್ನು ಮುಚ್ಚಲು ನಿರ್ಧರಿಸಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟಿಸಿ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, 2023ರಲ್ಲಿ ಆರಂಭಗೊಂಡ ಹಾವೇರಿ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ 10 ವಿವಿಗಳ ಪೈಕಿ 9 ವಿವಿಗಳನ್ನು ಮುಚ್ಚುವ ಬಗ್ಗೆ ಸಂಪುಟ ಉಪ ಸಮಿತಿ ತೀರ್ಮಾನಿಸಿರುವುದು ಆತಂಕಕಾರಿ ನಡೆಯಾಗಿದೆ. ರಾಜ್ಯ ಸರ್ಕಾರ ವಿವಿ ಮುಚ್ಚುವ ತೀರ್ಮಾನವನ್ನು ರದ್ದುಪಡಿಸಿ ಯಥಾಸ್ಥಿತಿಯಲ್ಲಿ ಅವುಗಳನ್ನು ಮುಂದುವರಿಸಬೇಕು. ಕಳೆದ ಎರಡು ವರ್ಷಗಳಿಂದ ಯಾವುದೇ ಅನುದಾನವಿಲ್ಲದ ಸಂಕಷ್ಟಮಯ ಪರಿಸ್ಥಿತಿಯಲ್ಲಿಯೂ ಹಾವೇರಿ ವಿಶ್ವವಿದ್ಯಾಲಯವು ಉತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ.
ಅಲ್ಲದೆ ಹಲವು ಪ್ರಮುಖ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಮುನ್ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾಲಯಕ್ಕೆ ಪೂರ್ಣಕಾಲಿಕ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ನೇಮಕ, ಅನುದಾನ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕಿತ್ತು. ಆದರೆ ವಿಶ್ವವಿದ್ಯಾಲಯಗಳನ್ನು ಬಲಿಷ್ಠಪಡಿಸುವ ಬದಲು ಅವುಗಳನ್ನು ಮುಚ್ಚುವ ತೀರ್ಮಾನವು ಹಾವೇರಿ ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ವಂಚಿಸುವುದಾಗಿದೆ.ಆದ್ದರಿಂದ ಸಂಪುಟ ಸಮಿತಿ ತೆಗೆದುಕೊಂಡಿರುವ ನಿರ್ಧಾರವನ್ನು ಯಾವುದೇ ಕಾರಣ ನೀಡದೇ ಕೂಡಲೇ ಹಿಂಪಡೆಯಬೇಕು ಹಾಗೂ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿ ವಿಶ್ವವಿದ್ಯಾಲಯ ಬೆಳವಣಿಗೆ ಹೊಂದಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ವಿಶ್ವವಿದ್ಯಾಲಯದ ಉಳಿವಿಗಾಗಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ತಾಲೂಕು ಅಧ್ಯಕ್ಷ ಗೌತಮ್ ಸಾವಕ್ಕನವರ, ಉಪಾಧ್ಯಕ್ಷ ಮಹೇಶ ಮರೋಳ, ಕೃಷ್ಣ ನಾಯಕ, ವಿನಾಯಕ ಮಡಿವಾಳರ, ಮದನ ಹರಿಜನ, ಪರಮೇಶ ಮಲ್ಲಾಡದ, ವಾಸುದೇವ ವಿ. ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತ್ರಿಪದಿ ಮೂಲಕ ಸಮಾಜ ತಿದ್ದಿದ ಸರ್ವಜ್ಞಹಿರೇಕೆರೂರು: ಸರ್ವಜ್ಞ ತ್ರಿಪದಿಗಳ ಮೂಲಕ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಜತೆಗೆ ಸಮಾಜದಲ್ಲಿ ನಡೆಯುವ ಬಗ್ಗೆ ನಿಷ್ಠುರ, ನೇರವಾಗಿ ತಿಳಿಸಿ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ತಹಸೀಲ್ದಾರ್ ಎಚ್. ಪ್ರಭಾಕರಗೌಡ ತಿಳಿಸಿದರು.
ಪಟ್ಟಣದ ಸರ್ವಜ್ಞ ಕಲಾಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ವರಕವಿ ಸರ್ವಜ್ಞನ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ವಜ್ಞ ತ್ರಿಪದಿ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು. ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿದವರು. ಆಡು ಮುಟ್ಟದ ಗಿಡವಿಲ್ಲ, ಸರ್ವಜ್ಞ ಹೇಳದ ವಿಷಯವಿಲ್ಲ ಎನ್ನುವಂತೆ ಪ್ರತಿಯೊಂದು ವಿಷಯಗಳು ಅವರ ತ್ರಿಪದಿಗಳು ಒಳಗೊಂಡಿವೆ. ತತ್ವ, ಜ್ಞಾನ ಬೆಳಕು, ಜನ ಜಾಗೃತಿ ಮೂಡಿಸುವುದು, ಲೋಕ ನೀತಿ, ಜೀವನ ಸರಸ ವಿರಸ ಹೀಗೆ ಅನೇಕ ವಿಷಯಗಳು ಅವರ ತ್ರಿಪದಿಗಳಲ್ಲಿ ಕಾಣಬಹುದು ಎಂದರು.ಸರ್ವಜ್ಞನವರ ಕುರಿತು ಕನ್ನಡ ಪ್ರಾಧ್ಯಾಪಕ ಡಾ. ಎಸ್.ಪಿ. ಗೌಡ್ರ ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಪಟ್ಟಣದ ಸರ್ವಜ್ಞ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ವಿವಿಧ ವಾದ್ಯಗಳೊಂದಿಗೆ ಸರ್ವಜ್ಞನವರ ಭಾವಚಿತ್ರ ಮೆರವಣಿಗೆ ನಡೆಯಿತು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಧಾ ಚಿಂದಿ, ಉಪಾಧ್ಯಕ್ಷ ರಾಜು ಕರಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಸದಸ್ಯೆ ರಜಿಯಾ ಅಸದಿ, ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ, ಕುಂಬಾರ ಸಮಾಜದ ಅಧ್ಯಕ್ಷ ಚನ್ನಬಸಪ್ಪ ಚಕ್ರಸಾಲಿ, ತಾಪಂ ಮಾಜಿ ಸದಸ್ಯೆ ರೂಪಾ ಆಡೂರ, ಅಬಲೂರು ಗ್ರಾಪಂ ಸದಸ್ಯ ಉಜ್ಜನಗೌಡ ಮಳವಳ್ಳಿ, ಬಸವರಾಜಪ್ಪ ಚಕ್ರಸಾಲಿ, ಕೊಟ್ರೇಶ ಗೌಡ್ರ, ನಿಂಗಪ್ಪ ಪಾಟೀಲ, ರುದ್ರಮುನಿ ಕಣವೇರ, ಮಾಲತೇಶ ಆಡೂರ, ವಿಜಯಾ ಆಡೂರ, ಶಂಭು ಕುಬಸದ, ಸೋಮು ಸೆಣಬಿನ, ಸಂಕೇತ ಚಿನ್ನಿಕಟ್ಟಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.