ಸಾರಾಂಶ
ಜಾನುವಾರುಗಳನ್ನು ಖರೀದಿಸಲು ಹಾಗೂ ಮಾರಲು ಕ್ಷೇತ್ರಕ್ಕೆ ರೈತರ ದಂಡು । ನೋಡುಗರ ಕಣ್ಮನ ಸೆಳೆಯುವ ಜಾತ್ರೆ
ಕನ್ನಡಪ್ರಭ ವಾರ್ತೆ ತುಮಕೂರುರಣ ಬಿಸಿಲಿನ ಝಳ ನೆತ್ತಿ ಸುಡುತ್ತಿದ್ದರೂ ಸಹ ಇತಿಹಾಸ ಪ್ರಸಿದ್ದ ಸಿದ್ದಗಂಗಾ ಕ್ಷೇತ್ರದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ನಡೆಯುತ್ತಿರುವ ದನಗಳ ಪರಿಷೆ ಮೈದುಂಬಿದ್ದು, ನಾಡಿನ ವಿವಿಧ ಕಡೆಗಳಿಂದ ಪ್ರತಿ ರ‍್ಷಕ್ಕಿಂತ ಈ ಬಾರಿ ರೈತರು ರಾಸುಗಳ ಹೆಚ್ಚಿನ ಸಂಖ್ಯೆಯಲ್ಲಿ ಕರೆ ತರುವ ಮೂಲಕ ದನಗಳ ಪರಿಷೆ ಕಳೆಗಟ್ಟಿದೆ.
ಸಿದ್ದಗಂಗೆಗೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ರಾಸುಗಳು ಬಂದಿದ್ದು, ಜಾನುವಾರುಗಳನ್ನು ಖರೀದಿಸಲು ಹಾಗೂ ಮಾರಲು ಶ್ರೀಕ್ಷೇತ್ರಕ್ಕೆ ರೈತರ ದಂಡೇ ಹರಿದು ಬರುತ್ತಿದೆ. ಸಿದ್ದಗಂಗಾ ಮಠದ ಆವರಣ, ಅಕ್ಕಪಕ್ಕದ ಜಾಗದಲ್ಲಿ ಎತ್ತ ಕಣ್ಣಾಯಿಸಿದರೂ ಜಾನುವಾರುಗಳದ್ದೇ ಕಾರುಬಾರು. ಶ್ರೀಕ್ಷೇತ್ರದಲ್ಲಿ ದನಗಳ ಜಾತ್ರೆಯ ವಿಹಂಗಮ ನೋಟ ನೋಡುಗರ ಕಣ್ಮನ ಸೆಳೆಯುತ್ತಿದೆ.ರಾಜ್ಯದ ನಾನಾ ಕಡೆಗಳಿಂದ ರೈತರು ತಾವು ಸಾಕಿರುವ ಎತ್ತುಗಳನ್ನು ಕರೆ ತಂದಿದ್ದು, ರಾಸುಗಳಿಗೆ ಬಿಸಿಲಿನ ಝಳ ತಾಗದಂತೆ ಪೆಂಡಾಲ್ ಹಾಕಿ ಮನೆ ಮಕ್ಕಳಂತೆ ಸಲುಹುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
10 ದಿನಗಳ ಕಾಲ ನಡೆಯಲಿರುವ ಸಿದ್ದಗಂಗೆ ದನಗಳ ಜಾತ್ರೆಗೆ ನಾಡಿನ ವಿವಿಧ ಜಿಲ್ಲೆಗಳಾದ ಹಾಸನ, ಮಂಡ್ಯ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ಬಿಜಾಪುರ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ದಾವಣಗೆರೆ, ಚಿತ್ರದುರ್ಗ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಮತ್ತಿತರ ಕಡೆಗಳಿಂದಲೂ ರೈತರು ಜಾನುವಾರುಗಳು ಕರೆ ತಂದಿದ್ದು, ರಾಸುಗಳನ್ನು ಕೊಳ್ಳುವ ಮತ್ತು ಮಾರುವ ಪ್ರಕ್ರಿಯೆ ಪ್ರತಿ ವರ್ಷಕ್ಕಿಂತ ಈ ಬಾರಿ ಬಲು ಜೋರಾಗಿಯೇ ನಡೆದಿದೆ.ರೈತರು ಸರಕು ಸಾಗಣೆ ವಾಹನಗಳಲ್ಲಿ ದನಗಳನ್ನು ತುಂಬಿಕೊಂಡು ಬಂದಿದ್ದು, ಪೆಂಡಾಲ್ ಹಾಕಿ ದನಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಜತೆಗೆ ಶ್ರೀಮಠದ ವತಿಯಿಂದ ರಾಸುಗಳಿಗೆ ಮತ್ತು ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ನಗರದಿಂದ ಸಿದ್ದಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ಬಂಡೆಪಾಳ್ಯದಿಂದ ಹಿಡಿದು ಸಿದ್ದಗಂಗಾ ಮಠದ ಆವರಣದಲ್ಲಿ ಎಲ್ಲಿ ಕಣ್ಣಾಯಿಸಿದರೂ ಕಣ್ಮನ ಸೆಳೆಯುವ ದನಗಳ ದಂಡೇ ಕಾಣ ಸಿಗುತ್ತಿವೆ.ಸಿದ್ದಗಂಗೆಗೆ ದನಗಳ ಪರಿಷೆಯಲ್ಲಿ ಮಾರಾಟಕ್ಕಾಗಿ ಬಂದು ಸೇರಿರುವ ದನಗಳು ಮತ್ತು ರೈತರಿಗೆ ಮೂಲಭೂತ ಸೌರ‍್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಊಟ, ಶೌಚಾಲಯದ ಸೇರಿದಂತೆ ಅವಶ್ಯಕ ವ್ಯವಸ್ಥೆಗಳನ್ನು ಶ್ರೀಮಠದ ವತಿಯಿಂದ ಕಲ್ಪಿಸಲಾಗಿದ್ದು, ಈ ವರ್ಷ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿನ ಝಳ ಬಲು ಜೋರಾಗಿರುವ ಹಿನ್ನೆಲೆಯಲ್ಲಿ ರಾಸುಗಳಿಗೆ ಮೈ ಸುಡಬಾರದು ಎಂಬ ಉದ್ದೇಶದಿಂದ ಶಾಮಿಯಾನ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.
ಗ್ರಾಮೀಣ ಭಾಗದ ರೈತರುಗಳು ದನಗಳ ವ್ಯಾಪಾರ ಮಾಡುವ ರೀತಿಯೇ ಈ ಜಾತ್ರೆಯಲ್ಲಿ ವಿಭಿನ್ನವಾಗಿರುತ್ತದೆ. ರಾಸುಗಳನ್ನು ಕೊಳ್ಳುವ ಮತ್ತು ಮಾರುವ ರೈತರು ಪರಸ್ಪರ ಕೈ ಮೇಲೆ ಟವಲ್ ಹಾಕಿಕೊಂಡು ಯಾರಿಗೂ ಕಾಣದಂತೆ ಕೈ ಬೆರಳುಗಳನ್ನು ಹಿಡಿದುಕೊಂಡು ಒಂದು ಜತೆ ರಾಸಿಗೆ ಇಂತಿಷ್ಟು ಹಣ ಎಂದು ನಿಗದಿಪಡಿಸಿ ಖರೀದಿಸುವ ಪ್ರಕ್ರಿಯೆಗಳು ನೋಡುಗರನ್ನು ನಿಬ್ಬೆರಗುಗೊಳಿಸುವಂತಿದೆ.ಬಿಸಿಲಿನ ತಾಪವನ್ನು ಲೆಕ್ಕಿಸದೇ ನಾಡಿನ ವಿವಿಧೆಗಳಿಂದ ಆಗಮಿಸಿರುವ ರೈತರು ಸಿದ್ದಗಂಗೆಯ ದನಗಳ ಪರಿಷೆಯಲ್ಲಿ ರಾಸುಗಳ ಖರೀದಿ ಹಾಗೂ ಮಾರಾಟಕ್ಕೆ ಎಂದಿಗಿಂತಲೂ ಆ ಬಾರಿ ಆಸಕ್ತರಾಗಿರುವುದು ಕಂಡು ಬರುತ್ತಿದೆ.
ವಿವಿಧ ತಳಿಗಳ ಪ್ರದರ್ಶನ:ರಾಸುಗಳ ಜಾತ್ರೆಗೆ ಈ ಬಾರಿ ಹಳ್ಳಿಕಾರ್, ಅಮೃತ್ ಮಹಲ್, ಕಿಲಾರಿ, ಗಿಡ್ಡ ಹೋರಿ, ನಾಟಿ ಹಸು, ಮಲೆನಾಡ ಗಿಡ್ಡ, ಕೃಷ್ಣ ವ್ಯಾಲಿ ಸೇರಿದಂತೆ ವಿವಿಧ ತಳಿಗಳ ರಾಸುಗಳು ರಾಜ್ಯದ ವಿವಿಧ ಮೂಲೆಗಳಿಂದ ಬಂದು ಸೇರಿದ್ದು, ಇಷ್ಟೂ ತಳಿಗಳನ್ನು ಒಂದೇ ಕಡೆ ನೋಡುವ ಭಾಗ್ಯ ಶ್ರೀಕ್ಷೇತ್ರದಲ್ಲಿ ದೊರೆತಿದೆ.
ಈ ಬಾರಿ ಜಾತ್ರೆಯಲ್ಲಿ ಸಾವಿರಾರು ದನಗಳು ಪಾಲ್ಗೊಂಡಿದ್ದು, 50 ಸಾವಿರದಿಂದ 8-10 ಲಕ್ಷದ ವರೆಗಿನ ರಾಸುಗಳು, ಹೋರಿಗಳು, ಹಸುಗಳು ಬಂದು ಸೇರಿವೆ. ಈಗಾಗಲೇ ದನಗಳ ಜಾತ್ರೆಯಲ್ಲಿ ರಾಸುಗಳ ಮಾರಾಟ ಮತ್ತು ಖರೀದಿ ಬಲು ಜೋರಾಗಿ ನಡೆದಿದ್ದು, ರೈತರುಗಳು ರಾಸುಗಳ ಗುಣಗಾನ ಹಾಗೂ ರಾಸುಗಳಲ್ಲಿ ಇರುವ ತಪ್ಪುಗಳನ್ನು ಹುಡುಕಿ ಅಲ್ಲಗಳೆಯುವಿಕೆ ಮಾಡುತ್ತಿರುವುದು ಸಹ ಸಾಮಾನ್ಯವಾಗಿದೆ.ತಮಗೆ ಗಿಟ್ಟಿದ ದರದಲ್ಲಿ ರೈತರು ರಾಸುಗಳನ್ನು ಖರೀದಿಸಿ ತಮ್ಮ ಊರುಗಳಿಗೆ ಟೆಂಪೋ ಸೇರಿದಂತೆ ಸರಕು ಸಾಗಣೆ ವಾಹನಗಳಲ್ಲಿ ಕೊಂಡೊಯ್ಯುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಬೆಲೆ ದುಪ್ಪಟು:ಈ ಜಾತ್ರೆಯಲ್ಲಿ ಕನಿಷ್ಠ 50 ಸಾವಿರದಿಂದ ಹಿಡಿದು 10 ಲಕ್ಷಕ್ಕೂ ಅಧಿಕ ಬೆಲೆ ಒಂದು ಜೋಡಿ ಎತ್ತುಗಳಿಗೆ ನಿಗದಿಯಾಗಿದ್ದು, ರಾಸುಗಳನ್ನು ಕೊಳ್ಳಲು ಮತ್ತು ಮಾರಲು ರೈತರು ಮುಗಿ ಬೀಳುತ್ತಿರುವುದು ಈ ಬಾರಿಯ ವಿಶೇಷವಾಗಿದೆ.
ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರು ಲಿಂಗೈಕ್ಯ ಹಿರಿಯ ಶ್ರೀಗಳಂತೆಯೇ ರಾಸುಗಳ ಜಾತ್ರೆಯುದ್ದಕ್ಕೂ ಸಂಚರಿಸಿ ರೈತರು ಹಾಗೂ ರಾಸುಗಳ ಯೋಗಕ್ಷೇಮ ವಿಚಾರಿಸಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.ರಾಜ್ಯ ಮತ್ತು ಹೊರ ರಾಜ್ಯಗಳಿಂದ ದನಗಳ ಜಾತ್ರೆಗಾಗಿ ಶ್ರೀಮಠಕ್ಕೆ ಬಂದಿರುವ ರೈತರಿಗೆ ಮಠದಲ್ಲೇ ಮೂರು ಹೊತ್ತು ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವೊಬ್ಬ ರೈತರು ಕುಡಿಯಲು ನೀರು, ಊಟ ಇಲ್ಲದೆ ಬಳಲಬಾರದು ಎಂಬ ಉದ್ದೇಶದಿಂದ ಜಾತ್ರಾ ಮಹೋತ್ಸವ ಮುಗಿಯುವವರೆಗೂ ಊಟ, ವಸತಿ ಕಲ್ಪಿಸಿದ್ದಾರೆ