ಸಾರಾಂಶ
ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜಂಟಿ ಹೋರಾಟ ನಡೆಸುವ ಸಂಬಂಧ ಬಿಜೆಪಿ-ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ. ದೋಸ್ತಿ ಮತ್ತಷ್ಟು ಬಲಪಡಿಲು ಪ್ಲ್ಯಾನ್
ಬೆಂಗಳೂರು : ಬೆಂಗಳೂರು ಹಾಗೂ ರಾಜ್ಯಕ್ಕೆ ಬಿಜೆಪಿ-ಜೆಡಿಎಸ್ ಪಕ್ಷಗಳ ಎರಡು ಪ್ರತ್ಯೇಕ ಸಮನ್ವಯ ಸಮಿತಿ ರಚಿಸಲು ಯೋಜಿಸಲಾಗಿದೆ. ಪಕ್ಷದ ಮುಖಂಡರ ಜೊತೆ ಚರ್ಚಿಸಿ ಶೀಘ್ರ ಈ ಸಮಿತಿ ಪ್ರಕಟಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಮಂಗಳವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಕುಮಾರಸ್ವಾಮಿ ಅವರ ಜೊತೆಗೆ ಚರ್ಚಿಸಿದ್ದೇನೆ. ಸಮನ್ವಯ ಸಮಿತಿ ರಚನೆ ಸಂಬಂಧ 8-10 ದಿನಗಳಲ್ಲಿ ಹೆಸರುಗಳನ್ನು ಕಳುಹಿಸುವುದಾಗಿ ಹೇಳಿದ್ದಾರೆ ಎಂದರು.
ಬಿಜೆಪಿ-ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ರಚನೆ ಸಂಬಂಧ ಸಲಹೆಗಳನ್ನು ಕೇಳಿದ್ದೇನೆ. ಸದ್ಯದಲ್ಲೇ ಗ್ರೇಟರ್ ಬೆಂಗಳೂರು ಚುನಾವಣೆಗಳು ನಡೆಯಲಿದ್ದು, ಬೆಂಗಳೂರಿಗೆ ಸೀಮಿತವಾಗಿ ಒಂದು ಸಮನ್ವಯ ಸಮಿತಿ ಹಾಗೂ ರಾಜ್ಯಕ್ಕೆ ಮತ್ತೊಂದು ಸಮನ್ವಯ ಸಮಿತಿ ರಚನೆ ಕುರಿತು ಕುಮಾರಸ್ವಾಮಿ ಅವರು ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಸಲಹೆ ಕೊಟ್ಟರೆ ನಿಂದನೆ:
ರಾಜ್ಯ ಸರ್ಕಾರ, ಸಚಿವರು ಅಹಂಕಾರದಿಂದ ಮೆರೆಯುತ್ತಿದ್ದಾರೆ. ಮೋಹನ್‍ದಾಸ್ ಪೈ, ಕಿರಣ್ ಮಜುಂದಾರ್ ಷಾ ಅವರಂತಹ ಹಿರಿಯರು ಬೆಂಗಳೂರಿನ ಬಗ್ಗೆ ಮತ್ತು ರಸ್ತೆಗಳ ಕುರಿತು ಸಲಹೆ ನೀಡಿದರೆ, ಆ ಸಲಹೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅಂತಹ ಹಿರಿಯರನ್ನು ಸ್ವತಃ ಸಚಿವರೇ ನಿಂದಿಸುತ್ತಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಇದೇ ರೀತಿಯ ಟೀಕೆ, ಸಲಹೆಗಳು ಬಂದಾಗ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದರು ಎಂದರು.
ದೋಸ್ತಿ ಬಲಪಡಿಸಲು ಸಮಿತಿ:ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ ಸೇರಿ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ತಯಾರಿಗಳು ಆರಂಭಗೊಂಡಿರುವ ಬೆನ್ನಲ್ಲೇ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ ಪ್ರಕ್ರಿಯೆಗೆ ಚಾಲನೆ ನೀಡಿವೆ.
ಈ ಸಂಬಂಧ ಉಭಯ ಪಕ್ಷಗಳ ನಾಯಕರು ಸಮನ್ವಯ ಸಮಿತಿ ರಚಿಸುವ ಸಂಬಂಧ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಉಭಯ ಪಕ್ಷಗಳ ಮೈತ್ರಿ ಮತ್ತಷ್ಟು ಗಟ್ಟಿಗೊಳಿಸುವುದು ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಸೀಟು ಹಂಚಿಕೆಯಲ್ಲಿ ಗೊಂದಲ ಉಂಟಾಗದಂತೆ ನೋಡಿಕೊಳ್ಳುವುದು ಈ ಸಮನ್ವಯ ಸಮಿತಿಯ ಮುಖ್ಯ ಉದ್ದೇಶವಾಗಿದೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಸಮನ್ವಯ ಸಮಿತಿ ರಚನೆ ವಿಚಾರ ಚರ್ಚೆಗೆ ಬಂದಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ನೆಪದಲ್ಲಿ ಸಮಿತಿ ರಚನೆ ಮುನ್ನೆಲೆಗೆ ಬಂದಿದೆ.
ಸಚಿವ ಪ್ರಿಯಾಂಕ್ ಏಕಾಂಗಿ:
ಸಚಿವ ಪ್ರಿಯಾಂಗ್ ಖರ್ಗೆಗೆ ಏಕೆ ಈ ರೀತಿ ದುರ್ಬದ್ದಿ ಬಂದಿದೆಯೋ ಗೊತ್ತಿಲ್ಲ. ಅನಾವಶ್ಯಕವಾಗಿ ಆರ್‌ಎಸ್‌ಎಸ್ ಬಗ್ಗೆ ಟೀಕಿಸುವುದು ಸರಿಯಲ್ಲ. ಇದು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವೇ ಅಥವಾ ಮುಖ್ಯಮಂತ್ರಿ ಕುರ್ಚಿ ಮೇಲೆ ಟವೆಲ್ ಹಾಕುವ ತಂತ್ರವೇ ಗೊತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದಂತೆ ಪ್ರಿಯಾಂಕ್ ಖರ್ಗೆ ಅವರು ಇಂದು ಈ ವಿಚಾರದಲ್ಲಿ ಏಕಾಂಗಿಯಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಆಡಳಿತ ಪಕ್ಷದ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಈ ರೀತಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ನ.2ರಂದು ಚಿತ್ತಾಪುರದಲ್ಲಿ ಯಶಸ್ವಿಯಾಗಿ ಆರ್‌ಎಸ್‌ಎಸ್ ಪಥಸಂಚಲನ ಆಗಲಿದೆ. ಆ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಜಂಟಿ ಹೋರಾಟ ನಡೆಸುವ ಸಂಬಂಧ ಬಿಜೆಪಿ-ಜೆಡಿಎಸ್ ನಾಯಕರು ತೀರ್ಮಾನ
ಬೆಂಗಳೂರು : ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜಂಟಿ ಹೋರಾಟ ನಡೆಸುವ ಸಂಬಂಧ ಬಿಜೆಪಿ-ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ.
ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಮಂಗಳವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಸೂಕ್ಷ್ಮ ವಿಚಾರಗಳಲ್ಲಿ ಜಂಟಿಯಾಗಿ ಸರ್ಕಾರವನ್ನು ಎದುರಿಸುವ ಕುರಿತು ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಪ್ರವಾಹ ಪೀಡಿತ ರೈತರಿಗೆ ಪರಿಹಾರಕ್ಕಾಗಿ ಶೀಘ್ರ ಜಂಟಿ ಹೋರಾಟ ರೂಪಿಸಲು ನಿರ್ಧರಿಸಿದ್ದಾರೆ. ಉಭಯ ಪಕ್ಷಗಳ ನಾಯಕರನ್ನೊಳಗೊಂಡ ಸಮನ್ವಯ ಸಮಿತಿ ರಚನೆ ಬಳಿಕ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಹೋರಾಡಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.