ರಾಮನಗರ: ಕರ್ತವ್ಯನಿರತ ವಕೀಲರ ಮೇಲೆ ಹೆಚ್ಚುತ್ತಿರುವ ಹಲ್ಲೆ, ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಹಾಗೂ ಕರ್ನಾಟಕ ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ-2023 ಅನ್ನು ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಮಂಗಳವಾರ ಕಲಾಪಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ಕೆಂಪಯ್ಯ ಮಾತನಾಡಿ, ವಕೀಲ ಸಮುದಾಯ ದೇಶ ಮತ್ತು ಸಮಾಜವು ಶಾಂತಿಯುತವಾಗಿ ಬದುಕು ಸಾಗಿಸಲು ನ್ಯಾಯಾಂಗ ವ್ಯವಸ್ಥೆಯ ಒಂದು ಭಾಗವಾಗಿ ಕೆಲಸ ಮಾಡುತ್ತಿದೆ. ಆದರೆ ಕರ್ತವ್ಯನಿರತ ವಕೀಲರ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಕೀಲರ ಮೇಲಿನ ದೌರ್ಜನ್ಯಗಳು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿಯಲ್ಲ. ನ್ಯಾಯದಾನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಕೀಲ ಸಮುದಾಯದ ಸ್ವಾತಂತ್ರ್ಯ ಮತ್ತು ಸುರಕ್ಷತೆಯ ಮೇಲಿನ ದಾಳಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ವಕೀಲರು ಯಾವುದೇ ಭಯ, ಒತ್ತಡ ಅಥವಾ ಬೆದರಿಕೆಯಿಲ್ಲದೆ ತಮ್ಮ ವೃತ್ತಿಯನ್ನು ನಿರ್ವಹಿಸುವ ವಾತಾವರಣ ನಿರ್ಮಾಣವಾಗಬೇಕು ಎಂಬುದು ಪ್ರತಿಭಟನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆಯೇ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿರುವುದು ನ್ಯಾಯಾಂಗ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ನ್ಯಾಯಕ್ಕಾಗಿ ಹೋರಾಡಬೇಕಾದ ವಕೀಲರೇ ತಮ್ಮ ಜೀವದ ಸುರಕ್ಷತೆಗಾಗಿ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ. ಸರ್ಕಾರ ತಕ್ಷಣ ಕಾಯ್ದೆಯನ್ನು ಜಾರಿಗೊಳಿಸಿ ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ವಕೀಲರ ಉಪಾಧ್ಯಕ್ಷ ವಿ.ಎನ್.ಜಯರಾಮ್, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಜ್ಯೋತಿ, ನಿರ್ದೇಶಕರಾದ ಕಿರಣ್, ದರ್ಶನ್, ಅರುಣ್, ಚಂದು, ಲಕ್ಷ್ಮೀ, ಸ್ಮಿತಾ, ಬೆಟ್ಟೇಗೌಡ, ಸಚಿನ್, ಹಿರಿಯ ವಕೀಲರಾದ ಶ್ರೀವತ್ಸ, ಧನಂಜಯ್, ಲೋಕೇಶ್, ಕೀರ್ತಿ, ಜಿ.ರಾಮಸ್ವಾಮಿ, ಶಿವಣ್ಣ, ಜೆ.ಕೆ.ರಂಗಸ್ವಾಮಿ, ಹನುಮಂತರಾಜು, ತಿಮ್ಮೇಗೌಡ, ರಾಮಂಜು, ಮಂಜುನಾಥ್ ಹಲವರಿದ್ದರು.
(ಫೋಟೋ ಕ್ಯಾಫ್ಷನ್)
ರಾಮನಗರದಲ್ಲಿ ವಕೀಲರ ಮೇಲಿನ ಹಲ್ಲೆ, ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಹಾಗೂ ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ-2023 ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಪದಾಧಿಕಾರಿಗಳು ಕಲಾಪಕ್ಕೆ ಗೈರಾಗಿ ಪ್ರತಿಭಟನೆ ನಡೆಸಿದರು.
