ಧಾರವಾಡ:

ರಾಜ್ಯದಲ್ಲಿ ಕಾಂಗ್ರೆಸ್ ನೀಡಿರುವ ಆಶ್ವಾಸನೆಯಂತೆ ಬಿಸಿಯೂಟ ನೌಕರರಿಗೆ ₹ 7 ಸಾವಿರ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲೆಯ ವಿವಿಧ ತಾಲೂಕುಗಳ ಬಿಸಿಯೂಟ ನೌಕರರು ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ನೌಕರರಿಗೆ ಆರು ಗಂಟೆ ಕೆಲಸದ ಅವಧಿಯ ಸುತ್ತೋಲೆ ಹೊರಡಿಸಬೇಕು. ಆರೋಗ್ಯ ವಿಮೆ, ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತೆ ಒದಗಿಸಬೇಕು, ನಿವೃತ್ತಿ ಹೊಂದಿದ ನೌಕರರಿಗೆ ಇಡಿಗಂಟು ತಕ್ಷಣ ಜಾರಿ ಮಾಡಬೇಕು. ಶಾಲೆಗಳಲ್ಲಿ ಗ್ರೂಪ್ “ಡಿ” ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಛತೆ, , ಕೈತೊಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ ನೌಕರರಿಗೆ ಶಾಲಾ ಸಿಬ್ಬಂದಿಗಳೆಂದು ನೇಮಿಸಬೇಕೆಂದು ಆಗ್ರಹಿಸಲಾಯಿತು.

ಈ ವೇಳೆ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಕೇಂದ್ರ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಕಳೆದ 12 ವರ್ಷಗಳಿಂದ ನೈಯಾಪೈಸೆ ಅನುದಾನ ಹೆಚ್ಚಿಸಿಲ್ಲ. ವೇತನ ಹೆಚ್ಚಳ ಕೂಡಾ ಮಾಡಿಲ್ಲ. ಮಹತ್ವದ ಕೆಲಸ ನಿರ್ವಹಿಸುವ ಈ ಬಡ ಮಹಿಳೆಯರನ್ನು ಕಡಿಮೆ ವೇತನದಲ್ಲಿ ಹಚ್ಚು ಕೆಲಸ ಮಾಡಿಸಿಕೊಂಡು ಅಮಾನವೀಯವಾಗಿ ವಂಚಿಸುತ್ತಿವೆ. ಇದೇ ರೀತಿ ಮುಂದುವರಿದರೆ, ನೌಕರರು ತೀವ್ರತರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಐ. ಈಳೀಗೇರ, ಸಂಘದ ಜಿಲ್ಲಾಧ್ಯಕ್ಷೆ ಚೆನ್ನಮ್ಮ ಡೊಳ್ಳಿನ, ಪ್ರಧಾನ ಕಾರ್ಯದರ್ಶಿ ಸುನಂದಾ ಚಿಗರಿ, ಫಕ್ಕೀರವ್ವ ತೆಂಬದಮನಿ, ಶೋಭಾ ಮೂಲಿಮನಿ, ಯಮನವ್ವ ಮಾದರ, ಕಲಾವತಿ, ಶೋಭಾ ಇದ್ದರು.