ರಾಣಿಬೆನ್ನೂರು: ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಮರ್ಪಕ ಸಂಖ್ಯೆಯಲ್ಲಿ ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು, ಪಾಲಕರು, ಪೋಷಕರು, ಶಾಲಾ ಮಕ್ಕಳು ಹಾಗೂ ಎಸ್‌ಡಿಎಂಸಿ ಸದಸ್ಯರು ಬುಧವಾರ ಶಾಲೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಚಿಕ್ಕಅರಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿ ವರೆಗೆ ಒಟ್ಟು 111 ವಿದ್ಯಾರ್ಥಿಗಳು ಇದ್ದಾರೆ. ಹೀಗಾಗಿ ಹಲವು ತರಗತಿಗಳಿಗೆ ಶಿಕ್ಷಕರ ಕೊರತೆಯಿಂದ ಪಾಠ ಬೋಧನೆ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಕರ ಕೊರತೆಯ ವಿಚಾರವಾಗಿ ಶಾಸಕ ಪ್ರಕಾಶ ಕೋಳಿವಾಡ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶಿಕ್ಷಕರ ನೇಮಕ ಮಾಡುವ ವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಪ್ರತಿಭಟನೆ ಸುದ್ದಿ ತಿಳಿದ ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಈ ಸಮಯದಲ್ಲಿ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ನಮ್ಮ ಶಾಲೆಗೆ ಶಿಕ್ಷಕರನ್ನು ನೇಮಿಸಿ, ಇಲ್ಲವಾದರೆ ಶಾಲೆಗೆ ಬೀಗ ಹಾಕುತ್ತೇವೆ ಎಂದು ಹೇಳಿದರು. ಬಂದ್ ಮಾಡ್ಕೊಳ್ಳಿ ಅಂತಾ ಉಡಾಫೆ ಉತ್ತರ ಕೊಟ್ಟಿದ್ದೀರಿ. ಈಗ ಬಂದ್ ಮಾಡಿದ್ದೇವೆ. ನಮ್ಮ ಶಾಲೆಗೆ ಸಮರ್ಪಕವಾಗಿ ಶಿಕ್ಷಕರನ್ನು ನೇಮಿಸಿ, ಅಲ್ಲಿವರೆಗೂ ನಾವು ಶಾಲೆಯ ಬಾಗಿಲು ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಇದುವರೆಗೂ ಆಗಿರುವ ಎಲ್ಲ ವಿಚಾರಗಳನ್ನು ಬಿಟ್ಟು ಮಕ್ಕಳ ಭವಿಷ್ಯಕ್ಕಾಗಿ ತಾವೆಲ್ಲರೂ ಸ್ಪಂದಿಸಬೇಕು, ಇಲಾಖೆಯ ನಿಯಮಾನುಸಾರ ಶಿಕ್ಷಕರ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ಕಲ್ಪಿಸುತ್ತೇನೆ. ಇದಲ್ಲದೆ ನಾಳೆಯಿಂದ ಶಾಲೆಗೆ ಓರ್ವ ಶಿಕ್ಷಕರನ್ನು ನೇಮಿಸುತ್ತೇವೆ ಎಲ್ಲರೂ ಸಹಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಡಿಗ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.


ಎಸ್‌ಡಿಎಂಸಿ ಅಧ್ಯಕ್ಷ ಶಿವಾಜಿ ನನ್ನೂರಿ, ಉಪಾಧ್ಯಕ್ಷ ಬಸವರಾಜ ಮಡಿವಾಳರ, ಸದಸ್ಯರಾದ ಮುತ್ತೇಶ ಲಮಾಣಿ, ಬಸವರಾಜ ಮೇವುಂಡಿ, ಅಜ್ಜಪ್ಪ ಲಮಾಣಿ, ವಿಜಯ ಹುಲ್ಯಾಳ, ಲಲಿತಾ ಬಜ್ಜಳ್ಳಿ, ದೇವಿರವ್ವ ಕಜ್ಜರಿ, ನಿಂಗರಾಜ ಮೇವುಂಡಿ, ಗೋಣೆಪ್ಪ ಕತ್ತೆಬೆನ್ನೂರ, ದಿನೇಶ ಬೂದಗಟ್ಟಿ, ಗ್ರಾಮಸ್ಥರಾದ ಪ್ರಕಾಶ ಶಿವಪುರ, ಲಕ್ಷ್ಮಣ ಲಮಾಣಿ, ಸೋಮಶೇಖರ ಲಮಾಣಿ, ರಾಮಣ್ಣ ರಡ್ಡೇರ, ಚಂದ್ರು ಲಮಾಣಿ, ಪರಮೇಶ ಬೂದಗಟ್ಟಿ, ಹುಸೇನಸಾಬ ಕೂರಗುಂದ, ನಾಗರಾಜ ಲಮಾಣಿ, ಮಾರುತಿ ಇಟಗಿ ಹಾಗೂ ಪೋಷಕರು, ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.