ಶಿವಾನಂದ ಗೊಂಬಿ
ಹುಬ್ಬಳ್ಳಿ:ರಾಜ್ಯದಲ್ಲಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ನೂತನ ಸರ್ಕಾರ ಬುಧವಾರ ಅಸ್ತಿತ್ವಕ್ಕೆ ಬಂದಿದ್ದು ಅಖಂಡ ಧಾರವಾಡ ಜಿಲ್ಲೆಗೆ (ಗದಗ, ಹಾವೇರಿ, ಧಾರವಾಡ) ಒಂದೇ ಒಂದು ಸಚಿವ ಸ್ಥಾನ ದೊರಕಿಲ್ಲ. ಅತ್ಯಂತ ಹಿರಿಯ ಶಾಸಕರಿದ್ದರೂ ಕಾಂಗ್ರೆಸ್ ಹೈಕಮಾಂಡ್ ಕಡೆಗಣಿಸಿರುವುದಕ್ಕೆ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.
ಅಖಂಡ ಧಾರವಾಡ ಜಿಲ್ಲೆಯಲ್ಲಿ ಒಟ್ಟು 17 ಕ್ಷೇತ್ರ ಬರಲಿದ್ದು 12 ಜನ ಕಾಂಗ್ರೆಸ್ ಶಾಸಕರಿದ್ದಾರೆ. ಜತೆಗೆ ಇಬ್ಬರು ಎಂಎಲ್‌ಸಿ. ಹಾವೇರಿ ಜಿಲ್ಲೆಯ 6ಕ್ಕೆ 6, ಗದಗ ಜಿಲ್ಲೆಯ 4ರ ಪೈಕಿ 2, ಧಾರವಾಡ ಜಿಲ್ಲೆಯ 7ರಲ್ಲಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ ಅದರಲ್ಲಿ ಮೂವರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದರು. ಹಾಗೆ ನೋಡಿದರೆ ಎಲ್ಲರೂ ಅರ್ಹರೇ.ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ಕೆ. ಪಾಟೀಲ, ಸಂತೋಷ ಲಾಡ್‌ಗೆ ಮೊದಲ ಹಂತದಲ್ಲಿ ಮಂತ್ರಿಯಾಗುವ ಲಕ್ ಸಿಗುತ್ತದೆಯೆಂಬ ನಿರೀಕ್ಷೆಯಿತ್ತು. ಎಚ್.ಕೆ. ಪಾಟೀಲ ತಮ್ಮ ಖಾತೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದವರು. ಪಕ್ಷದಲ್ಲೂ ಹಿರಿಯ ಶಾಸಕರ ಪೈಕಿ ಒಬ್ಬರು. ಯಾವುದೇ ಕಾರಣಕ್ಕೂ ಇವರಿಗೆ ಮಂತ್ರಿಗಿರಿ ಕೈ ತಪ್ಪಲ್ಲ. ಸಿಕ್ಕೇ ಸಿಗುತ್ತದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆ ಮೂಲಕವೇ ಬಿಜೆಪಿಗೆ ಟಾಂಗ್ ನೀಡುವಲ್ಲಿ ಲಾಡ್ ಮೊದಲಿಗರಾಗಿದ್ದರು. ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲಾದರೂ ಲಾಡ್‌ಗೆ ಮಂತ್ರಿಗಿರಿ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು. ಅದು ಸಹ ಹುಸಿಯಾಗಿದೆ.
ಇವರಿಬ್ಬರ ಜತೆ ಜತೆಗೆ ಧಾರವಾಡದಲ್ಲಿ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ ಇಬ್ಬರಲ್ಲಿ ಒಬ್ಬರಿಗೆ, ಹಾವೇರಿಯಲ್ಲಿ ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ, ಬಸವರಾಜ ಶಿವಣ್ಣವರ ಪೈಕಿ ಒಬ್ಬರು ಮಂತ್ರಿಯಾಗುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯಿತ್ತು.
ಇನ್ನು ವಿದ್ಯಾರ್ಥಿ ಕಾಂಗ್ರೆಸ್‌ನಿಂದಲೇ ಪಕ್ಷದಲ್ಲಿ ಗುರುತಿಸಿಕೊಂಡ ಪಕ್ಷದಲ್ಲಿ ಅತ್ಯಂತ ನಿಷ್ಠಾವಂತ ಹಾಗೂ ಸಜ್ಜನ ರಾಜಕಾರಣಿ ಎಂದೇ ಹೆಸರಾದ ಸಲೀಂಅಹ್ಮದ್ ದಾವಣಗೆರೆ ಉಪಚುನಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಪಕ್ಷ ಹೇಳಿದ ಯಾವುದೇ ಕೆಲಸವಾದರೂ ಅತ್ಯಂತ ಕಟ್ಟುನಿಟ್ಟಿನಿಂದ ಮಾಡಿಯೇ ತೀರುತ್ತಾರೆ. ಹೀಗಾಗಿ ಈ ಸರ್ಕಾರದಲ್ಲಿ ಮೊದಲ ಹಂತದಲ್ಲೇ ಅವರಿಗೆ ಮಂತ್ರಿಗಿರಿ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆ ಬೆಂಬಲಿಗರದ್ದಾಗಿತ್ತು. ಆದರೆ ಮೊದಲ ಹಂತದಲ್ಲಿ ಯಾರೊಬ್ಬರಿಗೂ ಅವಕಾಶವೇ ಸಿಗಲಿಲ್ಲ. ಈ ಭಾಗದಲ್ಲಿ ಅತ್ಯಂತ ಹಿರಿಯ ಶಾಸಕರೆನಿಸಿರುವ ಎಚ್.ಕೆ. ಪಾಟೀಲರಿಗೆ ಮೊದಲ ಆದ್ಯತೆಯಲ್ಲಿ ಮಂತ್ರಿಗಿರಿ ಕೊಡಲಿಲ್ಲ. ಇದು ಕಾರ್ಯಕರ್ತರು, ಬೆಂಬಲಿಗರಲ್ಲಿ ಬೇಸರವನ್ನುಂಟು ಮಾಡಿದೆ. ಮಂತ್ರಿಗಿರಿ ಸಿಗದಿರುವುದಕ್ಕೆ ಮುಖಂಡರು ಅಸಮಾಧಾನದಲ್ಲಿದ್ದರೂ ತೋರಿಸುತ್ತಿಲ್ಲ. ಆದರೆ, ಬೆಂಬಲಿಗರಲ್ಲಿ ಆಕ್ರೋಶ ಹೆಚ್ಚಾಗಿದೆ. ಹುಬ್ಬಳ್ಳಿಯಲ್ಲಂತೂ ಪ್ರಸಾದ ಅಬ್ಬಯ್ಯ ಬೆಂಬಲಿಗರು ಪ್ರತಿಭಟನೆ ನಾಯಕರ ವಿರುದ್ಧ ಕೆಂಡಕಾರಿದ್ದಾರೆ.
ಮೊದಲ ಹಂತದ ಸಂಪುಟ ರಚನೆಯಲ್ಲಿ ಹಿರಿಯರ ಕಡೆಗಣನೆ, ಮತ್ತೊಂದೆಡೆ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಂಪುಟ ವಿಸ್ತರಣೆ ವೇಳೆ ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯ ಮಾತುಗಳು ಕೇಳಿ ಬರುತ್ತಿವೆ.