ಶಿಗ್ಗಾಂವಿ: ಶಿಗ್ಗಾಂವಿ ನಗರಕ್ಕೆ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಶಿಗ್ಗಾಂವಿ ತಾಲೂಕು ಸಮಿತಿ ಪದಾಧಿಕಾರಿಗಳು ಶುಕ್ರವಾರ ನಗರದ ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ರಾಮು ತಳವಾರ ಮಾತನಾಡಿ, ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಶಿಗ್ಗಾಂವಿ ನಗರವು ಮೂಲಭೂತ ಸೌಕರ್ಯಗಳಿಂದ ವಂಚಿತಗೋಳ್ಳುತ್ತಾ ಬಂದಿದೆ. ಸ್ವಾತಂತ್ರ್ಯ ಲಭಿಸಿ ೭-೮ ದಶಕಳು ಕಳೆದರು ಕನಿಷ್ಠ ಸೌಲಭ್ಯಗಳಿಂದ ಇಲ್ಲಿನ ಸಾರ್ವಜನಿಕರು ವಂಚಿತರಾಗುತ್ತಾ ಬಂದಿದ್ದಾರೆ. ನಗರಕ್ಕೆ ಪ್ರತಿದಿನ ಸಾವಿರಾರು ಸಾರ್ವಜನಿಕರು ಕಚೇರಿ ಮುಂತಾದ ಕೆಲಸ ಕಾರ್ಯಗಳಿಗೆ ಬರುತ್ತಿದ್ದು ಇವರಿಗೆ ಅಗತ್ಯ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗದೇ ಇರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಾರೆ. ಕಾರಣ ಪುರಸಭೆ ಗಮನಹರಿಸಿ ಸುಮಾರು ೫-೬ ಕಡೆಗಳಲ್ಲಿ ಶೌಚಾಲಯ ನಿರ್ಮಿಸಲು ಆಗ್ರಹಿಸಿದರು.

ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಸುವರ್ಣಮ್ಮಾ ಮಾತನಾಡಿ, ನಗರದ ನವನಗರ, ಮೌಲಾಲಿ ಗುಡ್ಡ ಸೇರಿದಂತೆ ಅನೇಕ ಕಡೆಗಳಿಗೆ ಸುಸಜ್ಜಿತವಾದ ಗಟಾರು ಹಾಗೂ ರಸ್ತೆಗಳಿಗೆ ಡಾಂಬರೀಕರಣವಾಗಿಲ್ಲ ಅಲ್ಲದೇ ನಗರದ ಹಲವಾರು ಕಡೆಗಳಲ್ಲಿ ಉದ್ಯಾನವನಗಳು ಇದ್ದು, ಇವುಗಳು ಸೂಕ್ತ ನಿರ್ವಹಣೆ ಇಲ್ಲದೇ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಂತಾಗಿವೆ. ಅಲ್ಲದೇ ನಗರದ ಸರಕಾರಿ ಆಸ್ಪತ್ರೆಯಿಂದ ಹಳೆ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣದ ಮಾರ್ಗವಾಗಿ ರಸ್ತೆಯ ಮಾರ್ಗದಲ್ಲಿ ವಾಹನ ಸೇರಿದಂತೆ ಅನೇಕ ರೀತಿಯ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಸಾರ್ವಜನಿಕ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಪುರಸಭೆ ಈ ಬಗ್ಗೆ ತಕ್ಷಣವೇ ಕಾರ್ಯಪ್ರವೃತವಾಗಿ ಸುಸಜ್ಜಿತವಾದ ಪ್ರತ್ಯೇಕವಾಗಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಂಜುನಾಥ ಧಾನಪ್ಪನವರ, ಶಿಗ್ಗಾಂವಿ ತಾಲೂಕು ಅಧ್ಯಕ್ಷರಾದ ಸುರೇಶ ವನಹಳ್ಳಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಮಾ ಪುರದ, ಹಾವೇರಿ ತಾಲೂಕು ಅಧ್ಯಕ್ಷ ಮಂಜುನಾಥ ಬಡಿಗೇರ, ನಗರ ಅಧ್ಯಕ್ಷ ಶಿದ್ದಲಿಂಗೇಶ ಕೋತಂಬರಿ, ಜಿಲ್ಲಾ ಪದಾಧಿಕಾರಿಗಳಾದ ಪವಿತ್ರಾ ಮೋಟಳ್ಳಿ, ನಾಗರಾಜ ಮುಳ್ಳಳ್ಳಿ ರೇಣುಕಾ ಗಡಿಯಣ್ಣನವರ, ಮೀನಾಕ್ಷಮ್ಮಾ ಗಾಜಿ, ಸಂಗೀತಾ ಮೋಟಳ್ಳಿ, ಚಂದ್ರು ಮುಂಚಿನಕೊಪ್ಪ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.