ಕಾರವಾರ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯ ಎನ್ಯುಮರೇಷನ್ ಫಾರ್ಮ್‌ ವಿತರಣೆ ಕಾರ್ಯದಲ್ಲಿ ಶೇ. 99ಕ್ಕೂ ಅಧಿಕ ಸಂಖ್ಯೆಯಲ್ಲಿ ಫಾರ್ಮ್‌ಗಳನ್ನು ಮತದಾರರಿಗೆ ವಿತರಿಸಲಾಗಿದ್ದು, ಈ ಫಾರಂಗಳನ್ನು ಭರ್ತಿ ಮಾಡುವಲ್ಲಿ ಯಾವುದೇ ಗೊಂದಲಗಳಿದ್ದಲ್ಲಿ ಮತದಾರರ ಸಹಾಯವಾಣಿ ಸಂಖ್ಯೆ 08382-1950ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಬಿಎಲ್‌ಒಗಳು ಮನೆಗಳಿಗೆ ವಿತರಿಸಿರುವ ಎನ್ಯುಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡಲು ನೆರವಾಗುವ ಉದ್ದೇಶದಿಂದ ಎಲ್ಲ ಮತಗಟ್ಟೆಗಳಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಮತದಾರರ ಸಹಾಯ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳ ನೆರವು ಪಡೆಯುವಂತೆ ಹಾಗೂ ಮತದಾರರ ಉಚಿತ ಸಹಾಯವಾಣಿ ಸಂಖ್ಯೆ 08382-1950ಗೆ ಕರೆ ಮಾಡಿ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.

ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯದ ಪ್ರಗತಿಯ ಕುರಿತು ಸಂಪೂರ್ಣ ವರದಿಗಳನ್ನು ನಿಗದಿತವಾಗಿ ಎಲ್ಲ ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತಿದ್ದು, ಈ ವರೆಗಿನ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಕಂಡು ಬಂದಿರುವ ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣ ಮತ್ತಿತರ ವಿವರಗಳನ್ನು ತಮ್ಮ ಪಕ್ಷಗಳ ಬಿಎಲ್‌ಎಗಳಿಂದ ಪರಿಶೀಲಿಸಿಕೊಂಡು ಇದರಲ್ಲಿ ಯಾವುದೇ ಗೊಂದಲಗಳಿದ್ದಲ್ಲಿ ಬಗೆಹರಿಸಿಕೊಳ್ಳುವಂತೆ ಮತ್ತು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯದ ಸಂಪೂರ್ಣ ಯಶಸ್ಸಿಗೆ ಅಗತ್ಯ ಸಹಕಾರ ನೀಡುವಂತೆ ಕೋರಿದರು.

ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆ. ಶಂಭು ಶೆಟ್ಟಿ, ಬಿಜೆಪಿಯ ಎನ್.ಎಸ್. ಹೆಗಡೆ, ಸಿಪಿಐ(ಎಂ) ನ ಶಾಂತಾರಾಮ ನಾಯಕ, ಸಿಪಿಎಂನ ಯಮುನಾ ಗಾಂವಕರ್, ಜೆಡಿಎಸ್‌ನ ಸೂರಜ್ ನಾಯ್ಕ ಸೋನಿ, ಉದಯ ಭೋವಿ, ಚುನಾವಣಾ ಶಾಖೆಯ ಶಿರಸ್ತೇದಾರ್ ಶೇಖ್ ಮತ್ತಿತರರು ಇದ್ದರು.