ಬಗರ್‌ಹುಕುಂ ಅರ್ಜಿ ವಿಲೇವಾರಿಗೆ ಆಗ್ರಹಿಸಿ ಪ್ರತಿಭಟನೆ

| Published : Sep 09 2025, 01:00 AM IST

ಸಾರಾಂಶ

ಕಳೆದ 50 ವರ್ಷದಿಂದ ಉಳಿಮೆ ಮಾಡಿ ಸ್ವಂತ ಸ್ವಾಧೀನ ಅನುಭವಿದ್ದು ಸರ್ಕಾರದ ನಿಯಮನುಸಾರ ಅರ್ಜಿ ಸಲ್ಲಿಸಿದ್ದರೂ ಬಗ‌ರ್ ಹುಕುಂನಲ್ಲಿ ಬಡ ರೈತರಿಗೆ ಜಮೀನು ಮುಂಜೂರು ಮಾಡಿಕೊಡುವಲ್ಲಿ ತಹಸೀಲ್ದಾರ್‌ ಹಿಂದೇಟ ಹಾಕುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕದ ನೂರಾರು ಮಂದಿ ರೈತ ಮುಖಂಡರು ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭವಾರ್ತೆ ಪಾವಗಡ

ಕಳೆದ 50 ವರ್ಷದಿಂದ ಉಳಿಮೆ ಮಾಡಿ ಸ್ವಂತ ಸ್ವಾಧೀನ ಅನುಭವಿದ್ದು ಸರ್ಕಾರದ ನಿಯಮನುಸಾರ ಅರ್ಜಿ ಸಲ್ಲಿಸಿದ್ದರೂ ಬಗ‌ರ್ ಹುಕುಂನಲ್ಲಿ ಬಡ ರೈತರಿಗೆ ಜಮೀನು ಮುಂಜೂರು ಮಾಡಿಕೊಡುವಲ್ಲಿ ತಹಸೀಲ್ದಾರ್‌ ಹಿಂದೇಟ ಹಾಕುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕದ ನೂರಾರು ಮಂದಿ ರೈತ ಮುಖಂಡರು ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವವಹಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಹಲವಾರು ವರ್ಷಗಳಿಂದ ನೂರಾರು ಮಂದಿ ಗ್ರಾಮೀಣ ಬಡ ರೈತರು ಸರ್ಕಾರಿ ಖರಾಬಿನಲ್ಲಿ ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಮೀನು ಮಂಜುರಾತಿ ಕೋರಿ ನಿಯಮನುಸಾರ ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದರೂ ಸ್ಥಳ ಪರಿಶೀಲಿಸಿ ಬಗ‌ರ್ ಹುಕುಂನಲ್ಲಿ ಜಮೀನು ಮಂಜೂರಾತಿ ಕಲ್ಪಿಸುವಲ್ಲಿ ತಹಸೀಲ್ದಾರ್‌ ವರದರಾಜು ಆಸಕ್ತಿವಹಿಸುತ್ತಿಲ್ಲ ಎಂದು ಆರೋಪಿಸಿದರು.

ಪಾವಗಡ, ನಾಗಲಮಡಿಕೆ, ನಿಡಗಲ್, ವೈ.ಎನ್.ಹೊಸಕೋಟೆ ಹೋಬಳಿಗಳಲ್ಲಿ ಅನೇಕ ಮಂದಿ ನಿರ್ಗತಿಕ ರೈತರು ಜಮೀನುಗಳನ್ನು ಉಳಿಮೆ ಮಾಡಿ ಸ್ವಂತ ಸ್ವಾಧೀನ ಅನುಭವದಲ್ಲಿದ್ದಾರೆ. ಸರ್ಕಾರದ ನಿಯಮನುಸಾರ ಜಮೀನು ಮಂಜೂರಾತಿ ಕೋರಿ ಅಕ್ರಮ ಸಕ್ರಮ ಯೋಜನೆ ಅಡಿ ಫಾರಂ ನಂ50, 53, 57ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಸಂಬಂಧ ಕೆಲವರಿಗೆ ಮಾತ್ರ ಬಗ‌ರ್ ಹುಕುಂನಲ್ಲಿ ಜಮೀನು ಮುಂಜೂರು ಮಾಡಿ ಇನ್ನೂ ಕೆಲವರಿಗೆ ಜಮೀನು ಮುಂಜೂರು ಮಾಡದೇ ವಂಚಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಮಿಟಿಯ ಅಧ್ಯಕ್ಷರಾದ ಶಾಸಕರು ಹಾಗೂ ತಹಸೀಲ್ದಾರ್ ಅವರಿಗೆ ಅನೇಕ ಬಾರಿ ಮನವಿ ಮಾಡಿದರೂ ಬಗ‌ರ್ ಹುಕುಂ ಕಮಿಟಿ ಸಭೆ ಕರೆಯದೆ ಉದಾಸೀನತೆ ತೋರುವ ಪರಿಣಾಮ ಸರ್ಕಾರಿ ಸೌಲಭ್ಯದಿಂದ ವಂಚನೆ ಹಾಗೂ ನಿರ್ಗತಿಕ ರೈತರನ್ನು ಒಕ್ಕಲೆಬ್ಬಿಸುವ ಅನುಮಾನಗಳು ವ್ಯಕ್ತವಾಗುತ್ತೆವೆ ಎಂದು ಆರೋಪಿಸಿದರು.

ವೆಂಕಟಾಪುರ, ನಾಗಮಲಡಿಕೆ, ನಿಡಗಲ್‌ ಸೇರಿದಂತೆ ತಾಲೂಕಿನಾದ್ಯಂತ 6 ಸಾವಿರ ಮಂದಿ ಬಡ ರೈತರು ಬಗರ್ ಹುಕಂನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ ಆದೇಶವಿದ್ದರೂ ಸಭೆ ಕರೆದು ಜಮೀನು ಮಂಜೂರಾತಿ ಕಲ್ಪಿಸದೇ ವಿಳಂಬ ಮಾಡುತ್ತಿರುವ ಉದ್ದೇಶ ಅರ್ಥವಾಗುತ್ತಿಲ್ಲ. ಶಾಸಕರು ಜಿಲ್ಲಾಧಿಕಾರಿ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಬಗರ್‌ಹುಕಂ ಕಮಿಟಿ ರಚಿಸುವ ಮೂಲಕ ಬಗ‌ರ್ ಹುಕಂ ನಲ್ಲಿ ಅರ್ಜಿ ಸಲ್ಲಿಸಿದ್ದ ನಿರ್ಗತಿಕರ ರೈತರಿಗೆ ಜಮೀನು ಮಂಜೂರಾತಿ ಕಲ್ಪಿಸುವಂತೆ ಒತ್ತಾಯಿಸಿದರು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ತಾಲೂಕು ಕಚೇರಿಯ ಬಳಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದರು.

ರೈತ ಘಟಕದ ತಾಲೂಕು ಅಧ್ಯಕ್ಷ ಶಿವು, ವಿ.ಎಸ್‌.ಈಶ್ವರಪ್ಪ, ದಂಡುಪಾಳ್ಯ ರಾಮಾಂಜಿನಪ್ಪ, ಸದಾಶಿವಪ್ಪ, ಚಿತ್ತಯ್ಯ, ರಮೇಶ್‌ ಗೋವಿಂದಪ್ಪ, ನಾಗೇಂದ್ರ ರಾಮನಾಥ್‌, ಹನುಮಂತರಾಯಪ್ಪ ಪ್ರಕಾಶ್‌, ನಾರಾಯಣನಾಯಕ್‌, ರಾಮನಾಯಕ್‌, ಹನುಮಂತರಾಯಪ್ಪ, ರಾಮಣ್ಣ, ಕೃಷ್ಣಮೂರ್ತಿ, ನಾರಾಯಣಪ್ಬ, ನಾಗರಾಜಪ್ಪ, ಸಿದ್ದಪ್ಪ, ಪರಮೇಶಪ್ಪ ಇತರರಿದ್ದರು.