ಸಾರಾಂಶ
- ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲು ವರ್ಗೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ಒತ್ತಾಯ
- - -- ಪರಿಶಿಷ್ಟ ಜಾತಿಯ ಮೀಸಲಾತಿಯು 101 ಪರಿಶಿಷ್ಟ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ
- ಬೆಳಗ್ಗೆ 11 ಗಂಟೆಗೆ ಡಾ. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಪುತ್ಥಳಿಗೆ ಮಾಲಾರ್ಪಣೆ- ಉಪವಿಭಾಗಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ - - -
ಕನ್ನಡಪ್ರಭ ವಾರ್ತೆ, ದಾವಣಗೆರೆಸರ್ವೋಚ್ಛ ನ್ಯಾಯಾಲಯ ತೀರ್ಪಿನಂತೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಸ್ಥಾಪಿತ) ರಾಜ್ಯವ್ಯಾಪಿ ಕರೆ ಮೇರೆಗೆ ಸೆ.9ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಕುಂದುವಾಡ ಅಕ್ಕಿ ಮಂಜುನಾಥ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟು, ಮನವಿ ಸಲ್ಲಿಸಲಾಗುವುದು. ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಲಾಗುವುದು ಎಂದರು.3 ದಶಕಗಳಿಂದ ನಿರಂತರ ಹೋರಾಟ:
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದು ಆಯಾ ರಾಜ್ಯ ಸರ್ಕಾರದ ಕೆಲಸವೆಂದು ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವು ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣ ಪಾಲನೆ ಮೂಲಕ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಬೇಕು. ಪರಿಶಿಷ್ಟ ಜಾತಿಯ ಮೀಸಲಾತಿಯು 101 ಪರಿಶಿಷ್ಟ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳನ್ನು 4 ಗುಂಪುಗಳಾಗಿ ವರ್ಗೀಕರಿಸಿ, ಒಳ ಮೀಸಲಾತಿ ಕಲ್ಪಿಸುವಂತೆ 3 ದಶಕದಿಂದ ನಿರಂತರ ಹೋರಾಟ ನಡೆಸಿಕೊಂಡು ಬರಲಾಗಿದೆ ಎಂದು ಅವರು ಹೇಳಿದರು.ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು:
ಮೀಸಲಾತಿ ವರ್ಗೀಕರಿಸಿ, ಒಳ ಮೀಸಲಾತಿ ಕಲ್ಪಿಸುವಂತೆ ನಡೆಸಿದ್ದ ಹೋರಾಟಕ್ಕೆ ಮಣಿದಿದ್ದ ಸರ್ಕಾರ 2004ರಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ರಚಿಸಿತ್ತು. ಆಯೋಗದವು 14.6.2012 ರಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಈಗಿನ ಸಿಎಂ ಸಿದ್ದರಾಮಯ್ಯ ಸರ್ಕಾರ ಸಹ ಪರಿಶಿಷ್ಟರ ಮೀಸಲಾತಿ ವರ್ಗೀಕರಣ ನಿರ್ಣಯಕ್ಕೆ ಸಂಪುಟದಲ್ಲಿ ಅನುಮೋದಿಸಿ, 2024ರ ಫೆ.17ರಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ತಿಳಿಸಿದರು.ಪರಿಶಿಷ್ಟ ಜಾತಿಯಲ್ಲಿ ಮೀಸಲಾಗಿ ವರ್ಗೀಕರಣಕ್ಕಾಗಿ ಅನೇಕ ರಾಜ್ಯಗಳ ಆಯೋಗದ ವರದಿಗಳು, ನ್ಯಾಯಾಲಯಗಳ ಹಲವಾರು ತೀರ್ಪುಗಳನ್ನು ಪರಾಮರ್ಶಿಸಿದ ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವು ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳ ಮೀಸಲಾತಿ ನೀಡುವ ಸಂವಿಧಾನಬದ್ಧ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂಬುದಾಗಿ ತಿಳಿಸಿದೆ. ಸಂವಿಧಾನ ಪೀಠದ ತೀರ್ಪಿನಂತೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಿತಿ ಮುಖಂಡರಾದ ಎಚ್.ಕೊಟ್ರೇಶ, ಹರೀಶ ಅಜ್ಜಂಪುರ, ಎಚ್.ಅಣ್ಣಪ್ಪ ಸ್ವಾಮಿ, ಕೊಟ್ರೇಶ ಇತರರು ಇದ್ದರು.- - - ಕೋಟ್
ಪರಿಶಿಷ್ಟ ಜಾತಿ- ಪಂಗಡಗಳ ವಿದ್ಯಾರ್ಥಿ ಸಮುದಾಯಕ್ಕೆ ವಿದ್ಯಾರ್ಥಿ ವೇತನ ಕಡಿತ ಮಾಡಲಾಗಿದೆ. ಕೂಡಲೇ ರಾಜ್ಯ ಸರ್ಕಾರವು ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು. ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಇತರೆ ಯೋಜನೆಗಳಿಗೆ ಬಳಕೆ ಮಾಡದೇ ಮೂಲ ಉದ್ದೇಶಕ್ಕಾಗಿಯೇ ಬಳಕೆ ಒಳಗೊಂಡಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೋರಾಟ ನಡೆಸಲಾಗುವುದು- ಕುಂದುವಾಡ ಮಂಜುನಾಥ ಅಕ್ಕಿ, ಜಿಲ್ಲಾಧ್ಯಕ್ಷ, ಡಿಎಸ್‌ಎಸ್
- - --8ಕೆಡಿವಿಜಿ1:
ದಾವಣಗೆರೆಯಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕುಂದುವಾಡ ಅಕ್ಕಿ ಮಂಜುನಾಥ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.