ಸಾರಾಂಶ
ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ವಾರ್ಡ್ ನಂ.7ರಲ್ಲಿನ ಪದ್ಮಶ್ರೀ ಕಾಲೋನಿಯಲ್ಲಿರುವ ಮಹೆಬೂಬಸುಬಾನಿ ದರ್ಗಾ ಪಕ್ಕದಲ್ಲಿ ಹಿಂದು, ಮುಸ್ಲಿಂ ಯುವಕರು ಸೇರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ.
ಕನ್ನಡಪ್ರಭ ವಾರ್ತೆ ಕಾಗವಾಡ
ಭಾರತ ವಿವಿಧತೆಯಲ್ಲಿ ಏಕತೆ ಸಾರುವ ನಾಡು. ಅನೇಕ ಮತ, ಪಂಥ, ಹಲವು ಸಂಪ್ರದಾಯಗಳಿದ್ದರೂ ಇಲ್ಲಿನ ಸಾಮರಸ್ಯ ವಿಶ್ವದ ಗಮನ ಸೆಳೆಯುತ್ತದೆ. ಅದರಲ್ಲ ಹಬ್ಬ ಹರಿದಿನಗಳನ್ನು ಎಲ್ಲ ಧರ್ಮಿಯರು ಸೇರಿ ಆಚರಿಸುವುದು ಭಾರತೀಯರ ವೈಶಿಷ್ಟ್ಯತೆಯಾಗಿದೆ.ಕಾಗವಾಡ ತಾಲೂಕಿನ ಉಗಾರ್ ಬುದ್ರುಕ ಗ್ರಾಮದ ವಾರ್ಡ್ ನಂ.7ರಲ್ಲಿನ ಪದ್ಮಶ್ರೀ ಕಾಲೋನಿಯಲ್ಲಿರುವ ಮಹೆಬೂಬಸುಬಾನಿ ದರ್ಗಾ ಪಕ್ಕದಲ್ಲಿ ಹಿಂದು, ಮುಸ್ಲಿಂ ಯುವಕರು ಸೇರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ.
ಸುಮಾರು 30ಕ್ಕೂ ಹೆಚ್ಚು ಮುಸ್ಲಿಂ ಯುವಕರು ಹಾಗೂ 20ಕ್ಕೂಹೆಚ್ಚು ಹಿಂದು ಯುವಕರು ಅತ್ಯಂತ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಿರುವುದು ವಿಶೇಷವಾಗಿದೆ.ಕಳೆದ 6 ವರ್ಷಗಳಿಂದ ಸೌಹಾರ್ದತೆಯಿಂದ ಗಣೇಶೋತ್ಸವ ಆಚರಿಸುತ್ತಿದ್ದು, ಈ ಬಾರಿಯೂ ಭಾವೈಕ್ಯತೆಯ ಗಣೇಶೋತ್ಸವಕ್ಕೆ ಮುನ್ನುಡಿ ಬರೆದಿರುವ ಯುವಕರ ಈ ಕಾರ್ಯಕ್ಕೆ ಎಲ್ಲೆಡೆ ಈಗ ಪ್ರಶಂಸೆ ವ್ಯಕ್ತವಾಗಿದೆ.
ಎಲ್ಲರೂ ಒಂದೇ ಎಂಬ ಭಾವನೆಯಿಂದ ಹಿಂದುಗಳು ಮುಸ್ಲಿಂ ಹಬ್ಬಗಳಾದ ಮೊಹರಂ ಇತರ ಹಬ್ಬಗಳಲ್ಲಿ ಭಾಗಿಯಾದರೆ, ಮುಸ್ಲಿಮರು ಹಿಂದು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಣೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.ಭವೈಕ್ಯತೆ ಗಣೇಶೋತ್ಸವ ಕಮಿಟಿಯ ಸದಸ್ಯರಾದ ಮಾರುತಿ ಕೋಳಿ, ಅಪ್ಪಾಸಾಬ ನದಾಫ್. ಉಮೇಶ ಕೋಳಿ, ಅಸ್ಲಂ ಮಾಂಜರೆ. ಸುಶಾಂತ ವಿರೋಜೆ. ಸುಭಾನ ಢಲಾಯತ್. ರಕೇಶ ಕೋಳಿ. ಜಾವೇದ್ ಮಾಂಜರೆ, ಪದ್ಮಣ್ಣ ಮಿರ್ಜೆ, ಮಂಜೂರ ಮಾಂಜರೆ, ಸಂತೋಷ ಕೋಳಿ, ನಜೀರ್ ಪಠಾಣ, ಅಣ್ಣಾಸಾಬ ಖೋತ, ಉಮರ ಜಮಖಾನೆ ಸೇರಿದಂತೆ ಹಲವಾರು ಹಿಂದು-ಮುಸ್ಲಿಂ ಯುವಕರು ಕೂಡಿಕೊಂಡು ಭಾವೈಕ್ಯತೆಯಿಂದ ಗಣೇಶೋತ್ಸವ ಆಚರಿಸುತ್ತಿರುವುದು ವಿಶೇಷವಾಗಿದೆ.