ಸಾರಾಂಶ
ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಬಸ್ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮಾಂತರ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳ ವತಿಯಿಂದ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಬಸ್ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮಾಂತರ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳ ವತಿಯಿಂದ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.ಧರಣಿ ಉದ್ದೇಶಿಸಿ ಮಾತನಾಡಿದ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ಈ ಹಿಂದೆ ಹೋರಾಟ ನಡೆದು ಇಲ್ಲಿನ ಕೆಲವು ಮಾರ್ಗಗಳಿಗೆ ಪರವಾನಗಿ ನೀಡಲಾಗಿತ್ತು. ಆದರೆ ಖಾಸಗಿ ಬಸ್ ಮಾಲಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಅದನ್ನು ಸಾರಿಗೆ ಪ್ರಾಧಿಕಾರ ತೆರವುಗೊಳಿಸಲು ಯಾವುದೇ ಆಸಕ್ತಿ ತೋರಿಸಿಲ್ಲ ಎಂದು ಹೇಳಿದರು.ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು, ಖಾಸಗಿ ಬಸ್ ಮಾಲಕರು ಒಂದಾಗಿ ಅಪವಿತ್ರ ಮೈತ್ರಿಯಿಂದ ಸರ್ಕಾರಿ ಬಸ್ ಓಡಿಸದೇ ಮಹಿಳೆಯರಿಗೆ, ವಿದ್ಯಾರ್ಥಿನಿಯರನ್ನು ಶಕ್ತಿ ಯೋಜನೆಯಿಂದ ವಂಚಿತರಾಗಿಸಿದ್ದಾರೆ. ಖಾಸಗಿ ಬಸ್‌ಗಳಲ್ಲಿ ವಿದ್ಯಾರ್ಥಿನಿಯರನ್ನು ಕೊನೆಯಲ್ಲಿ ಬಸ್ ಹತ್ತುವಂತೆ, ಸೀಟುಗಳನ್ನು ಕೊಡದೇ ಸತಾಯಿಸಿಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಹಂಚು ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್. ನರಸಿಂಹ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ, ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್, ಕೃಷಿ ಕೂಲಿಕಾರರ ಸಂಘದ ನಾಗರತ್ನ ನಾಡ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ನಾಗರತ್ನ, ನಳಿನಿ, ಉಮೇಶ್ ಕುಂದರ್, ನಾಗರತ್ನ ಪಡುವರಿ ಮುಂತಾದವರು ಧರಣಿಯಲ್ಲಿ ಭಾಗವಹಿಸಿದರು..