ಸಾರಾಂಶ
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿ ರಾಜ್ಯ ಸರ್ಕಾರ ಭೋವಿ, ಕೊರಚ, ಕೊರಮ ಹಾಗೂ ಬಂಜಾರ ಸಮಾಜಕ್ಕೆ ಅನ್ಯಾಯ ಎಸಗಿದ್ದು ಸರ್ಕಾರದ ಧೋರಣೆ ಖಂಡಿಸಿ ಸೆ. 15ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬಳ್ಳಾರಿ: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿ ರಾಜ್ಯ ಸರ್ಕಾರ ಭೋವಿ, ಕೊರಚ, ಕೊರಮ ಹಾಗೂ ಬಂಜಾರ ಸಮಾಜಕ್ಕೆ ಅನ್ಯಾಯ ಎಸಗಿದ್ದು ಸರ್ಕಾರದ ಧೋರಣೆ ಖಂಡಿಸಿ ಸೆ. 15ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೊರಮ, ಕೊರಚ, ಭೋವಿ, ಬಂಜಾರ ಮೀಸಲಾತಿ ಹೋರಾಟ ಸಮಿತಿಯ ಡಾ. ಹನುಮಂತಪ್ಪ, ಮಹೇಶ್ ಬಂಡಿಹಟ್ಟಿ ಹಾಗೂ ವಿ. ರಾಮಾಂಜಿನೇಯಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ತರಾತುರಿಯಲ್ಲಿ ಏಕಪಕ್ಷೀಯವಾಗಿ ದೋಷಪೂರಿತ ದತ್ತಾಂಶವನ್ನು ಪರಿಗಣಿಸಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ನಮ್ಮ ಸಮಾಜಕ್ಕೆ ದೊಡ್ಡ ದ್ರೋಹ ಮಾಡಿದೆ. ಭೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳಿಗೆ ಹಿಂದಿನ ರಾಜ್ಯ ಸರಕಾರ ಶೇ. 4.50 ಒಳ ಮೀಸಲಾತಿ ನಿಗದಿಪಡಿಸಿದಾಗ, ಎಲ್ಲರೂ ಆ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ರಂಪಾಟ ಮಾಡಿ ಚುನಾವಣೆಯಲ್ಲಿ ಸೋಲು ಉಣ್ಣಿಸಿದರು. ತದನಂತರ ನಡೆದ ಚುನಾವಣೆಯಲ್ಲಿ ಅತ್ಯಧಿಕ ಶಾಸಕರೊಂದಿಗೆ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಈ ಹಿಂದಿನ ಸರ್ಕಾರದ ತಪ್ಪು ನಡೆಯನ್ನು ಸರಿ ಪಡಿಸಿ ಒಳ ಮೀಸಲಾತಿಯಲ್ಲಿ ನ್ಯಾಯ ನೀಡಲಿದೆ ಎಂದು ನಂಬಿದ್ದೆವು. ಆದರೆ, ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸರಿಯಾದ ಮಾನದಂಡ ಅನುಸರಿಸದೆ ನಮ್ಮ ಸಮುದಾಯಗಳಿಗೆ ಬಹುದೊಡ್ಡ ಅನ್ಯಾಯ ಎಸಗಿದರು ಎಂದು ದೂರಿದರು.ಮಾಧುಸ್ವಾಮಿ ವರದಿ ಮೀಸಲಾತಿಯ ವರ್ಗೀಕರಣಕ್ಕೆ ಜನಸಂಖ್ಯೆಯೇ ಆಧಾರ ಎಂದು ಹೇಳಿತು. ಹಾಗಾಗಿ ಬೋವಿ, ಬಂಜಾರ, ಕೊರಚ, ಕೊರಮ ಗುಂಪಿನ ಮೀಸಲಾತಿ ಶೇ. 3 (ಸದಾಶಿವ ಆಯೋಗದ ವರದಿಯಂತೆ) ರಿಂದ ಶೇ. 4.5ಕ್ಕೆ ಏರಿಕೆಯಾಯಿತು.
ನ್ಯಾ. ನಾಗಮೋಹನ ದಾಸ ವರದಿಯಲ್ಲಿ ಬೋವಿ, ಬಂಜಾರ ಸಮುದಾಯದ ಏರಿಕೆ ಅತ್ಯಂತ ಕಡಿಮೆ ಎಂದು ತೋರಿಸಲಾಗಿದೆ. 28 ಲಕ್ಷ ಜನಸಂಖ್ಯೆ ಇರುವ ಬೋವಿ, ಬಂಜಾರ, ಕೊರಚ, ಕೊರಮ ಗುಂಪಿಗೆ ಶೇ. 4ರ ಮೀಸಲಾತಿಯನ್ನು ನ್ಯಾ. ನಾಗಮೋಹನ ದಾಸ್ ನಿಗದಿಪಡಿಸಿದ್ದರು. ನಮಗಿಂತ 16 ಮಾನದಂಡಗಳಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ ಮುಂದೆ ಇರುವ ಇತರ ಉಪಜಾತಿಗಳ ಗುಂಪಿಗೆ ಎರಡು ಜಾತಿ ಸೇರಿಸಿ ಶೇ. 5ರಿಂದ ಶೇ. 6ಕ್ಕೆ ಹೆಚ್ಚಿಸಿರುವುದು ಪಕ್ಷಪಾತದ ನಿರ್ಣಯವಾಗಿದೆ. ಸರ್ಕಾರದ ನಿಲುವು ಖಂಡಿಸಿ ಸೆ. 15ರಂದು ಬಳ್ಳಾರಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಮುಂದಿನ ಹಂತದ ಹೋರಾಟ ಕುರಿತು ಚರ್ಚಿಸಲಾಗುವುದು. ರಾಜ್ಯಮಟ್ಟದಲ್ಲಿ ಈಗಾಗಲೇ ಹೋರಾಟ ನಡೆದಿದ್ದು, ಬರುವ ದಿನಗಳಲ್ಲಿ ಸಚಿವರಿಗೆ ಘೇರಾವ್ ಹಾಗೂ ಕಪ್ಪುಬಾವುಟ ಪ್ರದರ್ಶನದಂತಹ ಚಳವಳಿಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದರು. ಹೋರಾಟ ಸಮಿತಿಯ ಪ್ರಮುಖರಾದ ರಮಣಪ್ಪ ಭಜಂತ್ರಿ, ಟಿ.ವಿ. ವೆಂಕಟೇಶ್, ವಿ. ತಮ್ಮಣ್ಣ, ಗುಡದೂರು ಹನುಮಂತಪ್ಪ, ರಾಮು ನಾಯ್ಕ, ಗೋಪಿನಾಯ್ಕ, ಶಂಕರ ಬಂಡೆ ವೆಂಕಟೇಶ, ಎಚ್.ಕೆ.ಎಚ್. ಹನುಮಂತಪ್ಪ, ಕೆ. ರಂಗಸ್ವಾಮಿ ಇತರರಿದ್ದರು.