ಸಾರಾಂಶ
- ದಾವಣಗೆರೆ, ಕೊಪ್ಪಳ, ಯಾದಗಿರಿ ಜಿಲ್ಲೆಯಲ್ಲಿ ಗೊಬ್ಬರಕ್ಕಾಗಿ ಸರದಿ ಸಾಲು । ಪ್ರತಿಭಟನೆ- ಕೆಲವೆಡೆ ನೋಸ್ಟಾಕ್, ಕೆಲವೆಡೆ ಸೀಮಿತ ಪೂರೈಕೆ । ಅಂಗಡಿಗೆ ಮುತ್ತಿಗೆ, ಟೈರ್‌ಗೆ ಬೆಂಕಿ
====ಕನ್ನಡಪ್ರಭ ವಾರ್ತೆ ಬೆಂಗಳೂರು
ಮಧ್ಯ ಕರ್ನಾಟಕದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರೆದಿದ್ದು, ಪ್ರತಿಭಟನೆಯು ತೀವ್ರ ಸ್ವರೂಪ ಪಡೆದಿದೆ. ಕೆಲವು ಕಡೆ ನಸುಕಿನಿಂದಲೇ ಗೊಬ್ಬರದಂಗಡಿಗಳ ಮುಂದೆ ರೈತರು, ರೈತ ಕುಟುಂಬಗಳು ಸಾಲುಗಟ್ಟಿ ನಿಂತರೂ, ಎಷ್ಟೇ ಎಕರೆ ಜಮೀನಿದ್ದರೂ ಕೇವಲ 50 ಕೇಜಿಯ ಒಂದೇ ಬ್ಯಾಗ್ ನೀಡುತ್ತಿರುವುದು, ಮತ್ತೆ ಕೆಲವೆಡೆ ರಸಗೊಬ್ಬರವೇ ಇಲ್ಲದಿರುವುದು ರೈತರ ಪಿತ್ತ ನೆತ್ತಿಗೇರುವಂತೆ ಮಾಡಿದೆ.ದಾವಣಗೆರೆ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಗೊಬ್ಬರಕ್ಕಾಗಿ ಭಾನುವಾರವೂ ರೈತರು ಪರದಾಡಿದರು. ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ, ಜಗಳೂರು ಮತ್ತು ಕೊಪ್ಪಳ ಜಿಲ್ಲೆಯ ಬೆಟಗೇರಿಯಲ್ಲಿ ರೈತರು ಗೊಬ್ಬರ ವಿತರಣಾ ಕೇಂದ್ರಗಳಿಗೇ ಬೀಗ ಜಡಿದು, ಬಂದ್ ಮಾಡಿ ಪ್ರತಿಭಟಿಸಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ರೈತರಿಗೆ ಗೊಬ್ಬರ ಸಿಗದ್ದಕ್ಕೆ ಬಿಜೆಪಿ ಕಾರ್ಯಕರ್ತರು ಮತ್ತು ರೈತರು ಟೈಯರ್‌ಗಳಿಗೆ ಬೆಂಕಿ ಹಚ್ಚಿ ಧರಣಿ ನಡೆಸಿದರು. ಇನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ದಾವಣಗೆರೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದರು.
ಮಳೆಯಾಶ್ರಿತ ಪ್ರದೇಶದಲ್ಲಿ ಮೆಕ್ಕೆಜೋಳ, ಹತ್ತಿ ಇತರೆ ಬೆಳೆಗಳಿಗೆ ತುರ್ತಾಗಿ ರಸಗೊಬ್ಬರ ನೀಡಬೇಕಾಗಿದೆ. ಆದರೆ, ಅರ್ಧ ಎಕರೆ ರೈತನಿಗೂ 50 ಕೆಜಿ ಪಾಕೆಟ್, 5 ಎಕರೆ ಹೊಲವಿರುವ ರೈತನಿಗೂ 50 ಕೆಜಿ ಪಾಕೆಟ್ ರಸಗೊಬ್ಬರ ಕೊಟ್ಟರೆ ಏನು ಮಾಡಬೇಕು? ಯಾವ ಮೂಲೆಗೆ ಅದನ್ನು ಹಾಕಬೇಕು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅಳಲು, ಆತಂಕ, ಆಕ್ರೋಶ:
ಪ್ರತಿ ರೈತನಿಂದಲೂ ಆಧಾರ್ ಕಾರ್ಡ್ ಪಡೆದು, ಬಯೋಮೆಟ್ರಿಕ್ ಮಷಿನ್‌ನಲ್ಲಿ ಹೆಬ್ಬೆಟ್ಟು ಗುರುತು ಪಡೆದು ಒಬ್ಬರಿಗೆ ಕೇವಲ 50 ಕೇಜಿಯ ಒಂದು ಬ್ಯಾಗ್ ಯೂರಿಯಾ ಮಾತ್ರ ವಿತರಣೆ ಮಾಡಲಾಗುತ್ತಿದೆ. ಒಂದು ಸಲ ಬ್ಯಾಗ್ ಪಡೆದರೆ, ಅದೇ ರೈತ ಮತ್ತೆ ಯೂರಿಯಾ ಪಡೆಯಲು ಕನಿಷ್ಠ 1 ತಿಂಗಳಾದರೂ ಕಾಯಬೇಕಾಗುತ್ತದೆ.ಅಸಮರ್ಪಕ, ಅವೈಜ್ಞಾನಿಕ ರೀತಿಯಲ್ಲಿ ಯೂರಿಯಾ ಗೊಬ್ಬರ ವಿತರಣೆ ಮಾಡುತ್ತಿದ್ದುದರಿಂದ ಆಕ್ರೋಶಗೊಂಡ ಮಾಯಕೊಂಡ ರೈತರು ಅಲ್ಲಿನ ಗೊಬ್ಬರ ವಿತರಣಾ ಕೇಂದ್ರವನ್ನೇ ಬಂದ್ ಮಾಡಿ, ಪ್ರತಿಭಟಿಸಿದರು. ಹೊನ್ನಾಳಿಯಲ್ಲಿ ಭಾನುವಾರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ, ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇತ್ತ ದಾವಣಗೆರೆ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ಜಗಳೂರಿನಲ್ಲೂ ರೈತರು ಹಗಲು ರಾತ್ರಿ ಎನ್ನದೆ ಸಾಲು ಗಟ್ಟಿ ನಿಂತು ಗೊಬ್ಬರಕ್ಕಾಗಿ ಕಾಯುತ್ತಿದ್ದರೂ ಸಮರ್ಪಕವಾಗಿ ಗೊಬ್ಬರ ಸಿಗುತ್ತಿಲ್ಲ.
ಇನ್ನು ಕೊಪ್ಪಳ ತಾಲೂಕಿನ ಬೆಟಗೇರಿಯಲ್ಲಿ ಯೂರಿಯಾ ಗೊಬ್ಬರ ವಿತರಿಸುವಂತೆ ಆಗ್ರಹಿಸಿ ರೈತರು ವಿಎಸ್ಎಸ್ಎನ್ ಸೊಸೈಟಿಗೆ ಬೀಗ ಜಡಿದು ಪ್ರತಿಭಟಿಸಿದರು. ಸೊಸೈಟಿಯವರು ಗೊಬ್ಬರ ಇಂದು ಬರುತ್ತದೆ. ನಾಳೆ ಬರುತ್ತದೆ ಎಂದು ಹೇಳುತ್ತಾರೆ. ಆದರೆ ಗೊಬ್ಬರ ಮಾತ್ರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಟಾಕ್ ಮಾಡ್ಬೇಡಿ:
ಮುಂಗಾರು ಬೇಗ ಬಂದಿದ್ದರಿಂದ ಸಹಜವಾಗಿಯೇ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಗೊಬ್ಬರ ವಿತರಕರು, ಮಾರಾಟಗಾರರು ದಾಸ್ತಾನು ಮಾಡಿಟ್ಟಿರುವ ರಸಗೊಬ್ಬರ ಜಪ್ತಿ ಮಾಡಲಾಗುತ್ತಿದೆ. ದಾವಣಗೆರೆ, ಹೊನ್ನಾಳಿಯಲ್ಲಿ ಸೀಜ್ ಮಾಡಿ, ರೈತರಿಗೆ ಅದೇ ಯೂರಿಯಾ ವಿತರಣೆ ಮಾಡುತ್ತಿದ್ದಾರೆ. ದಯವಿಟ್ಟು ಯಾವುದೇ ಗೊಬ್ಬರ ವಿತರಕರು, ಮಾರಾಟಗಾರರು ಸ್ಟಾಕ್ ಮಾಡಬೇಡಿ ಎಂಬುದಾಗಿ ಮನವಿ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ.==
ಪರದಾಟ ನಡುವೆಕಾಳಸಂತೆಯಲ್ಲಿ
ಯೂರಿಯಾ ಸೇಲ್79 ಟನ್ ಸೊಸೈಟಿಯಿಂದ ನಾಪತ್ತೆರಾಯಚೂರು: ಒಂದೆಡೆ ರೈತರು ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದರೆ, ಇನ್ನೊಂದೆಡೆ 79 ಟನ್ ಯೂರಿಯಾ ರಸಗೊಬ್ಬರವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪ ಕೇಳಿಬಂದಿದೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘ (ವಿಎಸ್‌ಎಸ್‌ಎನ್)ವು ರೈತರಿಗೆ ವಿತರಿಸಬೇಕಾಗಿದ್ದ 79 ಟನ್ ಯೂರಿಯಾವನ್ನು ಎತ್ತುವಳಿ ಮಾಡಿ ಖಾಸಗಿಯಾಗಿ ಮಾರಾಟ ಮಾಡಿದ ಆರೋಪಕ್ಕ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ವಿಎಸ್‌ಎಸ್‌ಎನ್‌ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.==
ಯೂರಿಯಾ ಬಗ್ಗೆ ಅತಂಕಬೇಡ: ರೈತರಿಗೆ ಸಚಿವ
ಚಲುವರಾಯ ಅಭಯ