ಸಾರಾಂಶ
ಕೊಪ್ಪಳ: ಯೂರಿಯಾ ಗೊಬ್ಬರ ವಿತರಿಸುವಂತೆ ಆಗ್ರಹಿಸಿ ರೈತರು ವಿಎಸ್ಎಸ್ಎನ್ ಸೊಸೈಟಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆಯು ತಾಲೂಕಿನ ಬೆಟಗೇರಿಯಲ್ಲಿ ನಡೆದಿದೆ. ಈ ವೇಳೆ ರೈತರು ಗೊಬ್ಬರ ನೀಡುವಂತೆ ಒತ್ತಾಯಿಸಿ ಧರಣಿ ನಡೆಸಿದರು.
ಪ್ರತಿಭಟನಕಾರ ಹನುಮಂತ ಬೆಲ್ಲಡಗಿ ಮಾತನಾಡಿ, ನಮ್ಮ ಅಕ್ಕಪಕ್ಕದ ಗ್ರಾಮದಲ್ಲಿನ ಸೊಸೈಟಿಗಳಿಗೆ ಗೊಬ್ಬರ ಬಂದಿದ್ದು, ನಮ್ಮ ಸೊಸೈಟಿಯವರು ಗೊಬ್ಬರ ತರಿಸದೆ ರೈತರನ್ನು ಅಲೆದಾಡಿಸುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನಮಗೆ ಯೂರಿಯಾ ಗೊಬ್ಬರ ಒದಗಿಸಬೇಕು ಎಂದು ಒತ್ತಾಯಿಸಿದರು.ಕಳೆದ ಒಂದು ವಾರದಿಂದ ಉತ್ತಮವಾಗಿ ಮಳೆ ಸುರಿಯುತ್ತಿದೆ. ಈಗ ಬೆಳೆಗಳಿಗೆ ಯೂರಿಯಾ ಗೊಬ್ಬರದ ಅವಶ್ಯಕತೆಯಿದೆ. ಇಂತಹ ಸಮಯದಲ್ಲಿ ಗೊಬ್ಬರ ಸಿಗದಿದ್ದರೆ ಏನು ಮಾಡುವುದು? ಇನ್ನೊಂದು ವಾರ ಗೊಬ್ಬರ ಸಿಗದೆ ಇದ್ದರೆ ಈಗಾಗಲೆ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಬೆಳೆಗಳು ಸಂಪೂರ್ಣವಾಗಿ ಹಾಳಾಗುತ್ತವೆ. ಆದಕಾರಣ ಸಂಬಂಧಿಸಿದ ಕೃಷಿ ಇಲಾಖೆಯ ಅಧಿಕಾರಿಗಳು ನಮಗೆ ಅಗತ್ಯವಿರುವಷ್ಟು ಯೂರಿಯಾ ಪೂರೈಸಬೇಕು ಎಂದು ಆಗ್ರಹಿಸಿದರು.
ಸೊಸೈಟಿಯ ಅಧಿಕಾರಿಗಳು ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಸುಖಾಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ನಮಗೊಂದು ನ್ಯಾಯ ಕೊಡಿಸುವ ಕೆಲಸ ಮಾಡಬೇಕು ನಮಗೆ ಗೊಬ್ಬರವನ್ನು ತರಿಸಿಕೊಡಬೇಕು ಎಂದು ಹೇಳಿದರು.ಪ್ರತಿಭಟನೆಯ ಮಾಹಿತಿ ತಿಳಿದ ಅಳವಂಡಿ ಪಿಎಸ್‌ಐ ಸ್ಥಳಕ್ಕೆ ಭೇಟಿ ರೈತರ ಸಮಸ್ಯೆ ಆಲಿಸಿದರು. ಕೃಷಿ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಆನಂತರ ಸೋಮವಾರ ನಿಮ್ಮ ಗ್ರಾಮಕ್ಕೆ ಗೊಬ್ಬರ ಬರುತ್ತಿದ್ದು, ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು. ಸೋಮವಾರ ಗೊಬ್ಬರ ವಿತರಣೆ ಮಾಡದೆ ಇದ್ದಲ್ಲಿ ಮತ್ತೊಮ್ಮೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ರೈತರು ಪ್ರತಿಭಟನೆ ಹಿಂಪಡೆದುಕೊಂಡರು.
ಮಂಜುನಾಥ ಬೆಟಗೇರಿ, ಶರಣಪ್ಪ ಯತ್ನಳ್ಳಿ, ನಾರಾಯಣಪ್ಪ, ವೀರೇಶ ಚಿಂಚಲಿ, ಪ್ರಕಾಶ ಯತ್ನಳ್ಳಿ, ಯಂಕಣ್ಣ, ಉಮೇಶ, ರಾಜು ಹಾಗೂ ಹಲವು ರೈತರು ಇದ್ದರು.