ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಗೊಬ್ಬರ ಪೂರೈಕೆ ಮಾಡಿದ್ದರೂ ಸಹ ಅದನ್ನು ಮರೆಮಾಚಿ ರಾಜ್ಯದ ಅಧಿಕಾರಿಗಳ ಜೊತೆಗೆ ಶಾಮೀಲಾಗಿ ಗೊಬ್ಬರನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯ ಕೃಷಿ ಸಚಿವರ ಪ್ರೋತ್ಸಾಹ ಇದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದರು.ಬಾಗಲಕೋಟೆ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಕಿ, ಬೇಳೆ ಯಾವುದೇ ಸಮಸ್ಯೆ ಉಂಟಾದರೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದೆ. ಆದರೆ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಬೇಡಿಕೆಗಿಂತ ಹೆಚ್ಚಿನ ಯೂರಿಯಾ ಪೂರೈಕೆ ಮಾಡಿದೆ. ಕೇಂದ್ರದಿಂದ ಬಂದ ಗೊಬ್ಬರ ಎಲ್ಲಿಗೆ ಹೋಗಿದೆ ಎಂದು ಖಾರವಾಗಿ ಪ್ರಶ್ನಿಸಿದರು.
ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಇದನ್ನು ಖಂಡಿಸಿ ಸೋಮವಾರದಿಂದ ರಾಜ್ಯಾದ್ಯಂತ ರೈತ ಮೋರ್ಚಾದಿಂದ ಉಗ್ರ ಹೋರಾಟ ನಡೆಸಲಾಗುತ್ತದೆ. ಗೊಬ್ಬರಕ್ಕಾಗಿ ರೈತರು ಎಲ್ಲೆಲ್ಲಿ ಸರದಿಯಲ್ಲಿ ನಿಂತಿರುತ್ತಾರೋ ಅದೇ ಜಾಗದಲ್ಲಿ ನಾವು ಹೋರಾಟ ಮಾಡುತ್ತೇವೆ. ಇದರಿಂದ ಮುಂದಾಗುವ ಘಟನೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.ರಾಜ್ಯಕ್ಕೆ ಕೇಂದ್ರ ಸರ್ಕಾರ ಜುಲೈ ಅಂತ್ಯದವರೆಗೂ 8,07,300 ಮೆಟ್ರಿಕ್ ಟನ್ ಗೊಬ್ಬರ ಪೂರೈಕೆ ಮಾಡಿದೆ. ಅದನ್ನು ರಾಜ್ಯ ಸರ್ಕಾರ ಲಿಫ್ಟ್ ಸಹ ಮಾಡಿಕೊಂಡಿದೆ. ಅಷ್ಟೊಂದು ಪ್ರಮಾಣದಲ್ಲಿ ಬಂದಿದ್ದ ಗೊಬ್ಬರ ಏನಾಯಿತು? ಎಲ್ಲಿ ಮಾರಾಟ ಆಗುತ್ತದೆ ಎಂದು ಪ್ರಶ್ನಿಸಿದರು.
ಯೂರಿಯಾ ಗೊಬ್ಬರಕ್ಕಾಗಿ ಹಾವೇರಿ, ದಾವಣಗೇರಿ, ಚಿತ್ರದುರ್ಗ, ರಾಯಚೂರು, ಕಲಬುರಗಿ, ಕೊಪ್ಪಳ ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೆಲ್ಲವೂ ಗೊಬ್ಬರದ ಅಭಾವ ಸೃಷ್ಟಿಸುವ ಕೆಲಸ. ಯೂರಿಯಾ ಗೊಬ್ಬರ ಚೀಲಕ್ಕೆ ₹268 ಇದ್ದಿದ್ದು ಈಗ ಕಾಳಸಂತೆಯಲ್ಲಿ ₹450 ರಿಂದ ₹500ಕ್ಕೆ ಮಾರಾಟ ಮಾಡುತ್ತಿದ್ದಾರೆ. ಆ ಮೂಲಕ ರಾಜ್ಯದಲ್ಲಿ ರೈತರನ್ನು ಅತ್ಯಂತ ವ್ಯವಸ್ಥಿತವಾಗಿ ಸುಲಿಗೆ ಮಾಡುತ್ತಿದ್ದಾರೆ. ಇದನ್ನು ನೋಡಿಕೊಂಡು ರಾಜ್ಯ ಸರ್ಕಾರ ಬಾಯಿ ಮುಚ್ಚಿಕೊಂಡು ಕುಳಿತಿದೆ. ಕೃಷಿ ಸಚಿವರು ಮಾತ್ರ ಇದಕ್ಕೆ ಅತ್ಯಂತ ಹಗುರವಾಗಿ ಮಾತನಾಡುತ್ತಿದ್ದಾರೆ. ರೈತರು ರಸಾನಿಯಕ ಗೊಬ್ಬರದ ಬದಲಿಗೆ ಸಾವಯವ ಕೃಷಿಗೆ ಒತ್ತುಕೊಡಿ ಎಂದು ಪಾಠ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ರಾಜ್ಯದಲ್ಲಿ ಗೊಬ್ಬರ ಬೇಡಿಕೆ ಎಷ್ಟಿದೆ ಎನ್ನುವ ಬಗ್ಗೆ ಆರು ತಿಂಗಳು ಮೊದಲೇ ಸಭೆ ನಡೆಸಿ, ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಬೇಡಿಕೆ ಇದೆ ಎಂದು ಮಾಹಿತಿ ಸಂಗ್ರಹಿಸಬೇಕು. ಆದರೆ, ರಾಜ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಈವರೆಗೂ ಒಂದು ಸಭೆ ಮಾತ್ರ ಮಾಡಿದ್ದಾರೆ. ರಾಜ್ಯದ ಯಾವುದೇ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ತಿಳಿದುಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಗೊಬ್ಬರ ಅಭಾವದಿಂದ ರೈತರು ಹೋರಾಟಕ್ಕಿಳಿದ ಒಂದು ಲಕ್ಷಕ್ಕೂ ಹೆಚ್ಚು ಮೆ.ಟನ್ ಗೊಬ್ಬರ ಪೂರೈಕೆ ಮಾಡಬೇಕು ಎಂದು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಟ್ವೀಟ್ ಮಾಡಿದ್ದು, ರಾಜ್ಯದ ಬೇಡಿಕೆಗಿಂತ ಅಧಿಕ ಯೂರಿಯಾ ಗೊಬ್ಬರನ್ನು ಈಗಾಗಲೇ ಪೂರೈಕೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಯಾಕೆ ಇಷ್ಟೊಂದು ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದ ನಡಹಳ್ಳಿ, ವಾಸ್ತವ ಸಂಗತಿ ಏನಂದರೆ ರಾಜ್ಯ ಸರ್ಕಾರ ಗೊಬ್ಬರದ ವಿಚಾರದಲ್ಲಿ ಮಾನಟರಿಂಗ್ ಮಾಡುವುದರಲ್ಲಿ ವಿಫಲವಾಗಿದೆ. ಈ ಸಲ ಮುಂಗಾರು ಮಳೆ ಬೇಗ ಆರಂಭವಾಗಿದ್ದರಿಂದ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿತ್ತು. ಅದನ್ನು ಮಾಡದೇ ರೈತರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಪ್ರ.ಕಾರ್ಯದರ್ಶಿ ರಾಜು ನಾಯ್ಕರ್, ಸತ್ಯನಾರಾಯಣ ಹೇಮಾದ್ರಿ, ಶಶಿ ಗುತ್ತಣ್ಣವರ, ಶಿವಾನಂದ ಸುರಪುರ ಮತ್ತಿತರರು ಇದ್ದರು.ಕಾಳಸಂತೆಯಲ್ಲಿ ಗೊಬ್ಬರ ಮಾರಾಟ:ರಾಜ್ಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಕೆಲವು ಕಡೆಗೆ ಸ್ಟಾಕ್ ಇದೆ ಎಂದು ತೋರಿಸುತ್ತಾರೆ. ಕೊಡಿ ಎಂದರೆ ಅಲ್ಲಿ ಸ್ಟಾಕ್ ಇಲ್ಲವೇ ಇಲ್ಲ ಅಂತಾರೆ. ಹಾಗಿದ್ದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ಪೂರೈಕೆ ಮಾಡಿದ ಗೊಬ್ಬರ ಏನಾಯಿತು? ಅದೆಲ್ಲವೂ ಕಾಳಸಂತೆಯಲ್ಲಿ ಇದೆ. ಈ ಕಾಳಸಂತೆಗೆ ಪ್ರೋತ್ಸಾಹ ನೀಡುತ್ತಿರುವುದು ಇದೇ ರಾಜ್ಯ ಕೃಷಿ ಸಚಿವರು. ಇಲಾಖೆ ಅಧಿಕಾರಿಗಳ ಜೊತೆಗೆ ಶಾಮಿಲಾಗಿ ಕೃತಕವಾಗಿ ಗೊಬ್ಬರ ಅಭಾವ ಸೃಷ್ಟಿ ಮಾಡುತ್ತಿದ್ದಾರೆ. ಗೊಬ್ಬರ ಅಭಾವ ಆಗುತ್ತಿದೆ ಎಂದು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.