- ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ: ಕೆ.ಎಚ್.ಆನಂದರಾಜ ಹೇಳಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇರಳದ ಮಾಜಿ ಮುಖ್ಯಮಂತ್ರಿ ಕಾಮ್ರೆಡ್ ಪಿಣರಾಯಿ ವಿಜಯನ್ ನಿವಾಸದ ಮೇಲೆ ಇಡಿ ದಾಳಿ ವಿರೋಧಿಸಿ ಜಾರಿ ನಿರ್ದೇಶನಾಲಯದ ಕಚೇರಿ ಬಳಿ ಪ್ರತಿಭಟಿಸುತ್ತಿದ್ದ ಸಿಪಿಐ(ಎಂ) ಹಿರಿಯ ನಾಯಕರನ್ನು ಬಂಧಿಸಿದ ಕ್ರಮ ಖಂಡಿಸಿ ಪಕ್ಷದ ರಾಜ್ಯ ಸಮಿತಿ ಕರೆ ಮೇರೆಗೆ ದಾವಣಗೆರೆ ಸೇರಿದಂತೆ ರಾಜ್ಯವ್ಯಾಪಿ ಗುರುವಾರ ಪ್ರತಿಭಟಿಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಪಕ್ಷದ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟಿಸಿದ ಸಿಪಿಐ(ಎಂ) ಮುಖಂಡರು, ಕಾರ್ಯಕರ್ತರು, ಕಾರ್ಮಿಕರು ಕಾರ್ಮಿಕ ನಾಯಕರನ್ನು ಬಂಧನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಚ್.ಆನಂದರಾಜ ಮಾತನಾಡಿ, ಕೇರಳದ ಮಾಜಿ ಸಿಎಂ, ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯ ಪಿಣರಾಯಿ ವಿಜಯನ್ ನಿವಾಸದ ಮೇದೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದನ್ನು ಖಂಡಿಸಿ ದೆಹಲಿಯ ಇ.ಡಿ. ಪ್ರಧಾನ ಕಚೇರಿ ಬಳಿ ಸಿಪಿಐ(ಎಂ) ಪ್ರತಿಭಟಿಸಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿರಿಯ ನಾಯಕರಾದ ಬೃಂದಾ ಕಾರಟ್, ಅಶೋಕ ಧವಳೆ, ಎಂ.ಎ.ಬೇಬಿ, ಮರಿಯಮ್ ಧವಳೆ, ವಿಜೂ ಕೃಷ್ಣನ್, ವಿಕ್ರಮ್ ಸಿಂಗ್, ದೆಹಲಿ ರಾಜ್ಯ ಕಾರ್ಯದರ್ಶಿ ಅನುರಾಗ್ ಸಕ್ಸೇನಾ ಇತರರನ್ನು ಪೊಲೀಸರು ಬಂಧಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.


ರಾಜಕೀಯ ನಾಟಕ:

ಸಿಪಿಐ(ಎಂ) ನಾಯಕರ ಬಂಧನ ಹಾಗೂ ಕೇರಳದಲ್ಲಿ ಪಿಣರಾಯಿ ವಿಜಯನ್ ನಿವಾಸದ ಮೇಲಿನ ದಾಳಿ ರಾಜಕೀಯ ಪ್ರೇರಿತ ಪ್ರತೀಕಾರದ ಕೃತ್ಯವಾಗಿದೆ. ಪಿಣರಾಯಿ ವಿಜಯನ್‌ರಿಗೂ ಎಕ್ಸಲಾಜಿಕ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲವೆಂದು ನ್ಯಾಯಾಲಯಗಳು ಪದೇಪದೇ ಗಮನಿಸಿವೆ. ಆದರೂ ಪಿಣರಾಯಿ ವಿರುದ್ಧದ ರಾಜಕೀಯ ಬೇಟೆ ನಿರಂತರ ಮುಂದುವರೆದಿದೆ. ವೀಣಾರ ತಂದೆ ಎಂಬ ಕಾರಣಕ್ಕಾಗಿಯೂ ಪಿಣರಾಯಿಗೆ ಗುರಿಯಾಗಿಸಲಾಗುತ್ತಿದೆ. ಕೇರಳ ಸಿಎಂ ವಿ.ಡಿ. ಸತೀಶನ್ ದಿಲ್ಲಿಯಲ್ಲಿ ಪ್ರಧಾನಮಂತ್ರಿಗೆ ಭೇಟಿಯಾದ ತಕ್ಷಣ ಇಂತಹ ಕ್ರಮವು ನಡೆಯುತ್ತಿರುವುದು ಗಂಭೀರ ಪ್ರಶ್ನೆಗಳನ್ನೇ ಹುಟ್ಟು ಹಾಕುತ್ತಿದೆ. ಇದು ರಾಜಕೀಯವಾಗಿ ರಚಿಸಿದ ನಾಟಕದಂತೆ ಕಾಣುತ್ತದೆ ಎಂದು ಆರೋಪಿಸಿದರು.

ದೇಶಾದ್ಯಂತ ಉಗ್ರ ಪ್ರತಿಭಟನೆ:

ಸಿಎಂಆರ್‌ಎಲ್‌ ಡೈರಿಯಲ್ಲಿ ಹೆಸರು ಕಾಣಿಸಿಕೊಂಡಿವೆಯೆಂದು ವರದಿಯಾದ ಅನೇಕ ವ್ಯಕ್ತಿಗಳು ರಾಜ್ಯ ಸರ್ಕಾರದಲ್ಲಿ ಪ್ರಮುಖ ಹುದ್ದೆ ಹೊಂದಿದ್ದಾರೆ. ಆದಾಗ್ಯೂ, ಎಲ್ಲರನ್ನೂ ನಿರ್ಲಕ್ಷಿಸಿ ಪಿಣರಾಯಿ ವಿಜಯನ್‌ ಅವರನ್ನೇ ನಿರಂತರ ಗುರಿಯಾಗಿಸುತ್ತಿರುವುದರ ಹಿಂದೆ ರಾಜಕೀಯ ಪ್ರತೀಕಾರವನ್ನು ಮತ್ತೆ ಬಹಿರಂಗಪಡಿಸುತ್ತಿದೆ. ಪಕ್ಷವು ಯಾವುದೇ ತನಿಖಾ ಪ್ರಕ್ರಿಯೆ ತಡೆಯುವ ಉದ್ದೇಶ ಹೊಂದಿಲ್ಲ. ಆದರೆ, ಕೇಂದ್ರವು ರಾಜಕೀಯ ಗುರಿಯಿಂದ ಕೇಂದ್ರ ಸಂಸ್ಥೆಗಳ ನಗ್ನ ದುರುಪಯೋಗ ಮಾಡಿಕೊಳ್ಳುವುದನ್ನು ಒಪ್ಪಲಾಗುವುದಿಲ್ಲ. ವಿಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿ ವಿರುದ್ಧ ಸಿಪಿಐ(ಎಂ) ಪಕ್ಷವು ಜನರನ್ನು ಸಜ್ಜುಗೊಳಿಸಿ ದೇಶಾದ್ಯಂತ ಬಲವಾದ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ಎಚ್ಚರಿಸಿದರು.

ಪಕ್ಷದ ಮುಖಂಡರಾದ ಶ್ರೀನಿವಾಸಮೂರ್ತಿ, ಶ್ರೀನಿವಾಸ, ನೇತ್ರಾವತಿ, ಅನುಷಾ, ಮಂಜುನಾಥ ಆಲೂರು, ಮಂಜುನಾಥ ನಿಟುವಳ್ಳಿ, ಮುದಿಮಲ್ಲನ ಗೌಡ, ರೂಪಾ ಜರೀಕಟ್ಟೆ, ಆಶಾ, ಹನುಮಂತಪ್ಪ ಬೇತೂರು, ಫಾರೂಕ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

- - -

-28ಕೆಡಿವಿಜಿ1.ಜೆಪಿಜಿ: ಕೇರಳ ಮಾಜಿ ಸಿಎಂ ಮನೆ ಮೇಲೆ ಇಡಿ ದಾಳಿ ಖಂಡಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿದ್ದ ಸಿಪಿಐ(ಎಂ) ನಾಯಕರನ್ನು ಬಂಧಿಸಿದ್ದನ್ನು ಖಂಡಿಸಿ ದಾವಣಗೆರೆಯಲ್ಲಿ ಗುರುವಾರ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದರು.