ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್‌ ಸೌಲಭ್ಯ ಒದಗಿಸಿ, ಕಾರಟಗಿಯಲ್ಲಿ ಪ್ರತಿಭಟನೆ

| Published : Jul 13 2024, 01:42 AM IST

ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್‌ ಸೌಲಭ್ಯ ಒದಗಿಸಿ, ಕಾರಟಗಿಯಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರಟಗಿ ತಾಲೂಕಿನ ವಿವಿಧ ಗ್ರಾಮಗಳಿಂದ ನಿತ್ಯ ಪಟ್ಟಣಕ್ಕೆ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು ಎಂದು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ವಿದ್ಯಾರ್ಥಿಗಲು ಪ್ರತಿಭಟನೆ ನಡೆಸಿದರು.

ಕಾರಟಗಿ: ತಾಲೂಕಿನ ವಿವಿಧ ಗ್ರಾಮಗಳಿಂದ ನಿತ್ಯ ಪಟ್ಟಣಕ್ಕೆ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು ಎಂದು ಪಟ್ಟಣದ ಬಸ್ ನಿಲ್ದಾಣದ ಮುಂದೆ ನೂರಾರು ವಿದ್ಯಾರ್ಥಿಗಳು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಬಸ್ ನಿಲ್ದಾಣದ ಮುಂದೆ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ಆಗ್ರಹಿಸಿದರು.

ತಾಲೂಕಿನ ಬೂದಗುಂಪ, ಹಾಲಸಮುದ್ರ- ತಿಮ್ಮಾಪುರ, ಯಾರಡೋಣ, ಹುಳ್ಕಿಹಾಳ, ಚಳ್ಳೂರು, ಮರ್ಲಾನಹಳ್ಳಿ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ಪಟ್ಟಣದ ವಿವಿಧ ಕಾಲೇಜುಗಳಿಗೆ ಆಗಮಿಸುತ್ತಾರೆ. ಆದರೆ, ಈ ಗ್ರಾಮದಿಂದ ಕಾರಟಗಿ ಪಟ್ಟಣಕ್ಕೆ ಸಮರ್ಪಕ ಬಸ್ ಸೌಲಭ್ಯ ಇಲ್ಲ. ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲೆ- ಕಾಲೇಜಿಗೆ ಹಾಜರಾಗಲು ಆಗುತ್ತಿಲ್ಲ. ಇದರಿಂದ ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆ ಈ ಎಲ್ಲ ಗ್ರಾಮದಿಂದ ಕಾರಟಗಿ ಪಟ್ಟಣಕ್ಕೆ ಸರಿಯಾದ ಸಮಯಕ್ಕೆ ಬಸ್ ಕಾರ್ಯಾಚರಣೆ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಕಾರಟಗಿ ಪಟ್ಟಣದಲ್ಲಿ ಉತ್ತಮ ಗ್ರಂಥಾಲಯ ಇಲ್ಲ. ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸಲು ಪೂರಕ ವಾತಾವರಣ ಇಲ್ಲವಾಗಿದೆ. ಇದರಿಂದ ನೂರಾರು ವಿದ್ಯಾರ್ಥಿಗಳು ಸರ್ಕಾರಿ ನೌಕರಿಯಿಂದ ವಂಚಿತರಾಗುತ್ತಿದ್ದಾರೆ. ವಿವಿಧ ಕಾಲೇಜಿನ ಸುಮಾರು ೩ ಸಾವಿರ ವಿದ್ಯಾರ್ಥಿಗಳು ಪಟ್ಟಣಕ್ಕೆ ಬಂದು ಹೋಗುವುದರಿಂದ ಸುಸಜ್ಜಿತ ಗ್ರಂಥಾಲಯದ ಅಗತ್ಯ ಇದೆ. ಕೂಡಲೇ ಗ್ರಂಥಾಲಯ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಭರವಸೆ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಅಭಯಹಸ್ತ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಚಿವ ಶಿವರಾಜ ತಂಗಡಗಿ, ಮಾರ್ಗ ಮಧ್ಯದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಅಹವಾಲು ಸ್ವೀಕರಿಸಿ, ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ಕೂಡಲೇ ಸಾರಿಗೆ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಮಾತನಾಡಿ, ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇನೆ. ಪಟ್ಟಣಕ್ಕೆ ಗ್ರಂಥಾಲಯ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಂಘಟನೆ ಜಿಲ್ಲಾಧ್ಯಕ್ಷ ಶಿವಕುಮಾರ ಗೌಡ ತೆಕ್ಕಲಕೋಟೆ, ಉಪಾಧ್ಯಕ್ಷ ಶಂಕರ ಹಾಲಸಮುದ್ರ ವಿದ್ಯಾರ್ಥಿಗಳಾದ ತಿಪ್ಪೇಶ, ಬಸವರಾಜ, ವೀರೇಶ, ಈರಮ್ಮ, ಬಸಮ್ಮ ಇದ್ದರು.