ಸಂಡೂರು: ಕೇಂದ್ರ ಸರ್ಕಾರಿ ನೌಕರರ ಸರಿಸಮಾನ ವೇತನ, ಭತ್ಯೆ ನೀಡಿ

| Published : Jan 14 2024, 01:32 AM IST / Updated: Jan 14 2024, 05:23 PM IST

ಸಂಡೂರು: ಕೇಂದ್ರ ಸರ್ಕಾರಿ ನೌಕರರ ಸರಿಸಮಾನ ವೇತನ, ಭತ್ಯೆ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಡೂರು ತಾಲೂಕು ಪದಾಧಿಕಾರಿಗಳು ಶಾಸಕ ಈ. ತುಕಾರಾಮ ಅವರಿಗೆ ಮನವಿ ಮಾಡಿದ್ದಾರೆ. ತಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಗಮನ ಸೆಳೆಯುವಂತೆ ಕೋರಿದ್ದಾರೆ.

ಸಂಡೂರು: ಏಳನೇ ವೇತನ ಆಯೋಗ ಜಾರಿ, ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಸೇರಿದಂತೆ ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲು ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸಂಡೂರಿನಲ್ಲಿ ಶನಿವಾರ ಶಾಸಕ ಈ. ತುಕಾರಾಮ್ ಅವರಿಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಚೌಕಳಿ ಪರಶುರಾಮಪ್ಪ, ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಭತ್ಯೆ ಮಂಜೂರು ಮಾಡುವುದು, ಏಳನೇ ವೇತನ ಆಯೋಗದ ವರದಿ ಜಾರಿಗೊಳಿಸಬೇಕು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. 

ನೌಕರರಿಗೆ ನಗದುರಹಿತ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ. ಸಂಘದ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗೆ ಶಿಫಾರಸು ಮಾಡಬೇಕು ಎಂದು ಶಾಸಕ ಈ. ತುಕಾರಾಮ ಅವರಿಗೆ ಮನವಿ ಮಾಡಿದರು.

ನೌಕರರ ಸಂಘದ ಸದಸ್ಯರಿಂದ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಕುರಿತು ಮುಂಬರುವ ಬಜೆಟ್ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು. ಶೀಘ್ರವೆ ಈ ಕುರಿತು ಸಿಹಿ ಸುದ್ದಿ ನೀಡುವೆ ಎಂದು ಭರವಸೆ ನೀಡಿದರು.

ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಉಲ್ಲೇಶಿ, ರಾಜ್ಯ ಪರಿಷತ್ ಸದಸ್ಯ ಈಶ್ವರಪ್ಪ, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ತಮ್ಮಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖರಾವ್, ಪ್ರೌಢಶಾಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷ ಕೊಟ್ರೇಶ್, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಕೆ. ಪ್ರೇಮಾ ಮುಂತಾದವರು ಉಪಸ್ಥಿತರಿದ್ದರು.